ವಿಟ್ಲ: ಅಕ್ರಮ ಕೋಳಿ ಅಂಕ; ಪುತ್ತೂರು ಶಾಸಕರು ಸೇರಿ 16 ಮಂದಿ ವಿರುದ್ದ ಪ್ರಕರಣ ದಾಖಲು:

ಕರಾವಳಿ

ದಿನಾಂಕ 20-12-2025 ರಂದು ಮಧ್ಯಾಹ್ನ ಸಮಯ, ಬಂಟ್ವಾಳ ಕೇಪು ಗ್ರಾಮದ ಕೇಪು ಎಂಬಲ್ಲಿ, ಮುರಳೀಧರ ರೈ ಎಂಬವರ ಗದ್ದೆಯಲ್ಲಿ ದಿನಾಂಕ 20-12-2025 ರಂದು ಕಾನೂನುಬಾಹಿರವಾಗಿ ಕೋಳಿ ಅಂಕ ಆಡಲು ಮುಂದಾಗುತ್ತಿರುವ ಬಗ್ಗೆ ವಿಟ್ಲ ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ, ವಿಟ್ಲ ಪೊಲೀಸ್‌ ಠಾಣಾ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಕೋಳಿ ಅಂಕದ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಹಲವು ಜನರು ಕೋಳಿ‌ ಅಂಕಕ್ಕೆ ಬಳಸುವ ಕೋಳಿಗಳನ್ನು ಹಿಡಿದುಕೊಂಡು ಗುಂಪು ಸೇರಿರುವುದು ಕಂಡುಬಂದಿದ್ದು, ಅಲ್ಲಿ ಸೇರಿದ್ದ ಜನರಿಗೆ ಕಾನೂನುಬಾಹಿರ ಕೋಳಿ ಅಂಕದ ಬಗ್ಗೆ ಸೂಕ್ತ ಕಾನೂನು ತಿಳುವಳಿಕೆಯನ್ನು ಪೊಲೀಸ್ ನಿರೀಕ್ಷಕರು ನೀಡುತ್ತಿದ್ದರು.

ಆ ವೇಳೆಯಲ್ಲಿ ಸದ್ರಿ ಸ್ಥಳದಲ್ಲಿ ಉಪಸ್ಥಿತರಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಥಳದಲ್ಲಿ ಸೇರಿದ್ದ ಜನರಿಗೆ ಕಾನೂನು ಬಾಹಿರವಾದ ಕೋಳಿ ಅಂಕವನ್ನು ಮುಂದುವರಿಸುವಂತೆ ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ್ದು, ಸ್ಥಳದಲ್ಲಿ ಸೇರಿದ್ದ ಜನರು ಕಾನೂನು ಬಾಹಿರವಾಗಿ ಕೋಳಿ ಅಂಕ ಆಟವನ್ನು ಪ್ರಾರಂಭಿಸಿರುತ್ತಾರೆ. ಈ ವೇಳೆ ವಿಟ್ಲ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರು ಅಗತ್ಯ ಪೊಲೀಸ್ ಭದ್ರತೆಯನ್ನು ಏರ್ಪಡಿಸಿ, ಸದ್ರಿ ಕಾನೂನು ಬಾಹಿರವಾಗಿ ಕೋಳಿ ಅಂಕ ಆಟ ಆಡುತ್ತಿದ್ದ 16 ಜನರನ್ನು ವಶಕ್ಕೆ ಪಡೆದು, 22 ಹುಂಜ ಕೋಳಿಗಳನ್ನು ಹಾಗೂ ಕೋಳಿ ಅಂಕಕ್ಕೆ ಬಳಸುವ ಬಾಳು (ಕತ್ತಿಗಳನ್ನು) ಸ್ವಾಧೀನಪಡಿಸಿರುತ್ತಾರೆ.

ಈ ಬಗ್ಗೆ ಮರಳೀಧರ ರೈ ಎಂಬವರು ತಮ್ಮ ಜಾಗದಲ್ಲಿ ಯಾವುದೇ ಸೂಕ್ತ ಪರವಾನಿಗೆ ಪಡೆಯದೇ, ಕಾನೂನು ಬಾಹಿರ ಕೃತ್ಯಕ್ಕೆ ಅನುವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ, ಕಾನೂನು ಬಾಹಿರ ಕೃತ್ಯವನ್ನು ನಡೆಸಲು ಪ್ರಚೋದನೆ ಮತ್ತು ದುಷ್ಪ್ರೇರಣೆಯನ್ನು ನೀಡಿದ ಹಿನ್ನೆಲೆಯಲ್ಲಿ ಪುತ್ತೂರು ವಿಧಾನಸಭಾ ಶಾಸಕರಾದ ಅಶೋಕ್ ರೈ ವಿರುದ್ಧ ಹಾಗೂ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದ 16 ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 190/2025, ಕಲಂ:189(2),49, 221,223,190)BNS-2023, PREVENTION OF CRUELTY TO ANIMALS ACT, 1960 (U/s-3,11) ರಂತೆ ಪ್ರಕರಣ ದಾಖಲಾಗಿರುತ್ತದೆ.