ಸುರತ್ಕಲ್: ಆರೋಗ್ಯದ ಹಕ್ಕಿನ ಹೋರಾಟವನ್ನು ಜನತೆಯ ನಡುವೆ ವಿಸ್ತಾರಗೊಳಿಸಲು ನಿರ್ಧಾರ; ಯಶಸ್ವಿ ಸಮಾಲೋಚನಾ ಸಭೆ

ಕರಾವಳಿ

ಸುರತ್ಕಲ್ ನಲ್ಲಿ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಕಿದ್ವಾಯಿ ಕ್ಯಾನ್ಸರ್, ಜಯದೇವ ಹೃದಯದ ಆಸ್ಪತ್ರೆಗಳ ಸ್ಥಾಪನೆ ಸೇರಿದಂತೆ ಸರಕಾರಿ ಆಸ್ಪತ್ರೆಗಳ ಬಲವರ್ಧನೆಯ ಬೇಡಿಕೆಗಳ ಮೇಲೆ ನಡೆಯುತ್ತಿರುವ ಹೋರಾಟದ ಮುಂದಿನ ಹಂತದ ಕುರಿತು ಚರ್ಚಿಸಲು ಚೊಕ್ಕಬೆಟ್ಟು MJM ಸಭಾಂಗಣದಲ್ಲಿ‌ ಆಯೋಜಿಸಿದ ಸ್ಥಳೀಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಮಾಲೋಚನಾ ಸಭೆ ಯಶಸ್ವಿಯಾಗಿ ನಡೆಯಿತು.

ಮುಂದಿನ‌ ಹಂತದಲ್ಲಿ ಸುರತ್ಕಲ್ ವ್ಯಾಪ್ತಿಯ ಪ್ರತಿಯೊಂದು ಗ್ರಾಮಗಳಲ್ಲಿ ಇರುವ ಸಂಘ ಸಂಸ್ಥೆಗಳನ್ನು‌ ಸಂಪರ್ಕಿಸುವುದು, ಸಮುದಾಯ ಆಸ್ಪತ್ರೆ, ಕ್ಯಾನ್ಸರ್, ಹೃದಯದ ಆಸ್ಪತ್ರೆಗಳ ಸ್ಥಾಪನೆ ಸಹಿತ ಹೋರಾಟ ಸಮಿತಿ ಮುಂದಿಟ್ಟಿರುವ ಬೇಡಿಕೆಗಳ ಮನವಿ/ಆಗ್ರಹ ಪತ್ರವನ್ನು ಸಂಘ ಸಂಸ್ಥೆಗಳು ಸರಕಾರಕ್ಕೆ ಕಳುಹಿಸಿಕೊಡುವಂತೆ ವಿನಂತಿಸುವುದು, ಇದನ್ನೊಂದು ವ್ಯಾಪಕ‌ ಅಭಿಯಾನವಾಗಿ ರೂಪಿಸುವುದು ಎಂದು ನಿರ್ಧರಿಸಲಾಯಿತು.

ಸಂಘ ಸಂಸ್ಥೆಗಳನ್ನು ಪ್ರತಿನಿಧಿಸಿ ಸಭೆಯಲ್ಲಿ‌ ಭಾಗವಹಿಸಿದ ಸಮದ್ ಕಾಟಿಪಳ್ಳ, ದಲಿತ ಚಳವಳಿಯ ನಾಯಕರಾದ ಸದಾಶಿವ ಪಡುಬಿದ್ರೆ, ಕೃಷ್ಣಾ ತಣ್ಣೀರುಬಾವಿ, ಆದಿವಾಸಿ ಸಂಘಟನೆಯ ಕರಿಯ ಕೆ, ಅಶ್ರಫ್ ಸಫಾ, ಸಲೀಂ, ಹೋರಾಟ ಸಮಿತಿಯ ಟಿ ಎನ್ ರಮೇಶ್, ಹರೀಶ್ ಪೇಜಾವರ, ಚಂದ್ರಕಾಂತ ದೇವಾಡಿಗ, ಮೂಸಬ್ಬ ಪಕ್ಷಿಕೆರೆ ಅಭಿಪ್ರಾಯ ಮಂಡಿಸಿದರು. ಮುನೀರ್ ಕಾಟಿಪಳ್ಳ, ಶ್ರೀನಾಥ್ ಕುಲಾಲ್ ಹೋರಾಟದ ರೂಪುರೇಷೆ ವಿವರಿಸಿದರು.‌

ಕೆನರಾ ಯೂತ್ ಕ್ಲಬ್ ಕಾಟಿಪಳ್ಳ, ಬದ್ರಿಯಾ ಸ್ಪೋರ್ಟ್ಸ್ ಕ್ಲಬ್, ಕಾಟಿಪಳ್ಳ ಯೂತ್ ಕ್ಲಬ್ (KYC), ರಿಲಯನ್ಸ್ ಕಾಟಿಪಳ್ಳ, NFC ಕೃಷ್ಣಾಪುರ, ACtors ಕೃಷ್ಣಾಪುರ, ಅಲ್ ಅಮೀನ್ ಕೃಷ್ಣಾಪುರ, ಬೆಸ್ಟ್ ಇಲೆವೆನ್ ಕಾನ, ಟಾರ್ಪೊಡೋಸ್ ಯೂತ್ ಕ್ಲಬ್ ಕಾನ, ಫ್ರೆಂಡ್ಸ್ ಕುಳಾಯಿ, ಸ್ಪೋರ್ಟಿಂಗ್ ಸೂರಿಂಜೆ, ನಝರ್ 9 ನೆ ವಿಭಾಗ, ದಲಿತ ಸಂಘರ್ಷ ಸಮಿತಿ, ದಲಿತ ಹಕ್ಕುಗಳ ಸಮಿತಿ, ಆದಿವಾಸಿ ಸಮನ್ವಯ ಸಮಿತಿ, ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಡಿವೈಎಫ್ಐ ಸುರತ್ಕಲ್ ಘಟಕ, ಜನವಾದಿ ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದು ಹೋರಾಟದ ಮುಂದುವರಿಕೆಗೆ ಬಲ ತುಂಬಿದರು.