ಮಳಲಿ: ಅನೈತಿಕ ಪೊಲೀಸ್ ಗಿರಿ; ಇಬ್ಬರನ್ನು ವಶಕ್ಕೆ ಪಡೆದ ಪೊಲೀಸರು; ಪ್ರತ್ಯೇಕ ಪ್ರಕರಣ ದಾಖಲು

ಕರಾವಳಿ

ಅಮಾಯಕರ ಪೋಟೋ ವೈರಲ್ ಮಾಡಿದರೆ ಕ್ರಮ ಎಂದ ಪೊಲೀಸ್ ಕಮಿಷನರ್

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ ತಂದೆ ಮಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿ ಎರಡೂ ಕಡೆ ಪ್ರತ್ಯೇಕ ಪ್ರಕರಣ ದಾಖಲಾಗಿದೆ.

ಮೂಲರಪಟ್ನ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ ಅಪ್ರಾಪ್ತ ವಯಸ್ಸಿನ ಮಗಳ ಜೊತೆ ಬೈಕಿನಲ್ಲಿ ತೆರಳುತ್ತಿದ್ದಾಗ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನದಲ್ಲಿ ಬಂದ ಇಬ್ಬರು ಬೈಕನ್ನು ಅಡ್ಡಗಟ್ಟಿ, ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಗೆ ಸಂಬಂಧಿಸಿ ಎಡ‍ಪದವು ನಿವಾಸಿಗಳಾದ ಸುಮಿತ್ ಭಂಡಾರಿ (21) ಹಾಗೂ ರಜತ್ ನಾಯ್ಕ್‌ (30) ಎಂಬವರನ್ನು ವಶಕ್ಕೆ ಪಡೆಯಲಾಗಿದ್ದು, ಸತ್ತಾರ್ ಎಂಬವರು ಬೈಕಿನಲ್ಲಿ ಸುಮಾರು 19 ಕೆ.ಜಿ. ಗೋಮಾಂಸ ಒಯ್ಯುತ್ತಿದ್ದು , ಅದನ್ನು ಸಾಗಿಸಲು ಅಧಿಕೃತ ದಾಖಲೆ ಹೊಂದಿರದ ಕಾರಣ ಅಕ್ರಮವಾಗಿ ಗೋ ಮಾಂಸ ಸಾಗಾಟಕ್ಕೆ ಸಂಬಂಧಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಂಗಳೂರು ಪೊಲೀಸ್‌ ಕಮಿಷನರ್‌ ಸುಧೀರ್‌ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

‘ತಮ್ಮ 11 ವರ್ಷದ ಮಗಳ ಜೊತೆ ಅಬ್ದುಲ್ ಸತ್ತಾರ್ ಬೈಕಿನಲ್ಲಿ ಸಾಗುತ್ತಿದ್ದಾಗ ಆರೋಪಿಗಳಾದ ಸುಮಿತ್ ಭಂಡಾರಿ ಹಾಗೂ ರಜತ್ ನಾಯ್ಕ್‌ ಮಳಲಿ ನಾರ್ಲಪದವು ಬಳಿ ಟಾಟಾ ಸುಮೊ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿದರು. ಆಗ ಬೈಕ್‌ ರಸ್ತೆಗೆ ಬಿದ್ದಿದ್ದು, ಸೈಲೆನ್ಸರ್‌ನ ಬಿಸಿ ತಾಗಿ ಬಾಲಕಿಯ ಕಾಲಿನಲ್ಲಿ ಸುಟ್ಟ ಗಾಯಗಳಾಗಿವೆ. ಅಬ್ದುಲ್ ಸತ್ತಾರ್ ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ. ಆ ಬಾಲಕಿಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿಯಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದ್ದು, ‘ಆರೋಪಿಗಳಿಬ್ಬರು ರಸ್ತೆಗೆ ಟಾಟಾ ಸುಮೊ ವಾಹನವನ್ನು ಅಡ್ಡವಾಗಿ ನಿಲ್ಲಿಸಿದ ಬಳಿಕ, ತಂದೆಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ’ ಎಂದು ಆಕೆ ಆರೋಪಿಸಿದ್ದಾಳೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದೇ ಸಂದರ್ಭ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಮಾಯಕರ ಪೋಟೋ ಗಳನ್ನು ವೈರಲ್ ಮಾಡುತ್ತಿರುವ ವಿಷಯವೂ ಗಮನಕ್ಕೆ ಬಂದಿದ್ದು ಅಂತಹವರ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.