ನಾ(ಲಾ)ಯಕರದ್ದೇ ಕಾರುಬಾರು, ಕಂಬಳಿ ಹೊದ್ದು ಮಲಗಿದಂತಿದೆ ಈಗಿನ ಪರಿಸ್ಥಿತಿ
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪೈಕಿ ಸುರತ್ಕಲ್ ಗಿಂತ ಕಾಂಗ್ರೆಸ್ ಗಟ್ಟಿಯಾಗಿರುವುದು ಗುರುಪುರ ಭಾಗದಲ್ಲಿ. ಸುರತ್ಕಲ್ ಕಾಂಗ್ರೆಸ್ ಗೆ ಕೈ ಕೊಟ್ಟರೂ ಗುರುಪುರ ಕಾಂಗ್ರೆಸ್ ಪಕ್ಷದ ಮಾನ ಮರ್ಯಾದೆ ಉಳಿಸುತ್ತಿತ್ತು. ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸುರತ್ಕಲ್ ಭಾಗದಲ್ಲಿ ಕಾಂಗ್ರೆಸ್ 28,000 ಕ್ಕಿಂತ ಅಧಿಕ ಮತಗಳ ಹಿನ್ನಡೆ ಪಡೆದರೆ ಗುರುಪುರ ಭಾಗದಲ್ಲಿ ಆದ ಹಿನ್ನಡೆ ಬರೀ ಕೇವಲ 5,000 ಮಾತ್ರ. ರಮಾನಾಥ ರೈ ಯವರು ಪ್ರತಿನಿಧಿಸುತ್ತಿದ್ದ ಸಂದರ್ಭದಲ್ಲಿ ಗುರುಪುರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು.ಇದೀಗ ಮಿನಿ ಪುಢಾರಿಗಳೆಲ್ಲಾ ನಾಯಕರೆನಿಸಿಕೊಂಡಿದ್ದಾರೆ.ಬ್ಲಾಕ್ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಕಾರ್ಯಕರ್ತರಲ್ಲೇ ಅಸಮಾದಾನವಿದೆ.ಹಿರಿಯರ ಮಾತಿಗೆ ಬೆಲೆ ಇಲ್ಲ,ಹಿರಿಯರ ಮಾತನ್ನು ಕ್ಯಾರ್ ಮಾಡದ ಕಾರಣ ಪಂಚಾಯತ್ ಅಧಿಕಾರ ತಪ್ಪಿತು ಎನ್ನುವ ಅಪವಾವಿದೆ. ಕಾರ್ಯಕರ್ತರನ್ನು,ಪಕ್ಷದ ನಿಷ್ಠಾವಂತರನ್ನು ಗಣನೆಗೆ ತೆಗೆದುಕೊಳ್ಳದಿರುವುದರಿಂದ ಕಂಬಳಿ ಹೊದ್ದು ಮಲಗಿದಂತಾಗಿದೆ ಗುರುಪುರ ಬ್ಲಾಕ್ ಕಾಂಗ್ರೆಸಿನ ಈಗಿನ ಪರಿಸ್ಥಿತಿ.!
ಆದರೆ ಇತ್ತೀಚಿನ ದಿನಗಳಲ್ಲಿ ಗುರುಪುರ ಭಾಗದಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕಾರಣ ಮೇಳೈಸುತ್ತಿದೆ. ಒಬ್ಬ ನಾಯಕನನ್ನು ಕಂಡರೆ ಇನ್ನೊಬ್ಬನಿಗೆ ಆಗುವುದಿಲ್ಲ. ಆ ರೀತಿಯ ಪರಿಸ್ಥಿತಿ ಗುರುಪುರ ಕಾಂಗ್ರೆಸ್ ನಲ್ಲಿದೆ. ನಾಯಕರೆನಿಸಿಕೊಂಡವರ ಇಂತಹ ವರ್ತನೆ ಕಾರ್ಯಕರ್ತರೆಡೆಯಲ್ಲಿ ಬೇಸರ ಮೂಡಿಸಿದೆ ಅನ್ನುವ ಮಾತುಗಳು ಕೇಳಿ ಬರುತ್ತಿವೆ.
ನಾಯಕರೆನಿಸಿಕೊಂಡವರಿಗೆ ಸ್ವಸಮುದಾಯದ ಹತ್ತಾರು ಓಟು ಬೀಳಿಸುವ ಕೆಫಾಸಿಟಿ ಇಲ್ಲ. ಅದು ಬಿಡಿ ಅವರ ಪತ್ನಿ, ಮಕ್ಕಳು ಇನ್ನೊಂದು ಪಕ್ಷಕ್ಕೆ ಓಟು ಕೊಡುವುದಂತೆ. ಅಂತವರೇ ಪ್ರಮುಖ ನಾಯಕರ ಹಿಂಬಾಲಕರಾಗಿ ಪೋಸ್ ಕೊಡುತ್ತಿದ್ದಾರೆ ಅನ್ನುವ ಮಾತು ಈ ಭಾಗಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.
ಮೊನ್ನೆ ನಡೆದ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸ್ಥಳೀಯ ನಾಯಕರೆನಿಸಿಕೊಂಡವರ ಬೇಜವಾಬ್ದಾರಿತನದಿಂದಾಗಿ ಪಂಚಾಯತ್ ಅಧಿಕಾರ ಕಳೆದುಕೊಳ್ಳುವಂತಾಯಿತು ಅನ್ನುವ ಮಾತು ಕೇಳಿ ಬರುತ್ತಿದೆ. ಉತ್ತರದಲ್ಲಿ ಕಾಂಗ್ರೆಸ್ ಸರಿ-ಸುಮಾರು 30,000 ಅಧಿಕ ಮತಗಳಿಂದ ಕಳೆದ ವಿಧಾನಸಭೆಯಲ್ಲಿ ಸೋತಿದೆ.ಪಕ್ಷದ ವಿರುದ್ಧ ಕೆಲಸ ಮಾಡಿದವರನ್ನು ಏಕಾಏಕಿ ಉಚ್ಛಾಟಿಸುವ ಬದಲು ಅವರ ಮನವೊಲಿಸುವ ಕೆಲಸ ಮಾಡಬೇಕಿತ್ತು ಅನ್ನುವ ಅಭಿಪ್ರಾಯ ಕೇಳಿ ಬರುತ್ತಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ಮುನ್ನಾ ದಿನ ನಾಯಕರು ಉಚ್ಛಾಟಿತರ ಮನೆಗೆ ತೆರಳಿ ಬೆಂಬಲ ಕೇಳುವ ದರ್ದು ಬರುತ್ತಿರಲಿಲ್ಲ.

ಇನ್ನು ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲೂ ನಾಯಕರ ತಪ್ಪು ನಿರ್ಧಾರಗಳು ಪಂಚಾಯತ್ ಕೈ ಜಾರಲು ಕಾರಣ ಅನ್ನುವ ಮಾತಿದೆ. ಅಸಮಾಧಾನಿತರನ್ನು ಸಮಧಾನಪಡಿಸಿ ಪಕ್ಷದ ವಿರುದ್ಧ ಹೋಗದಂತೆ ತಡೆಯುವ ನಾಯಕತ್ವದ ಕೊರತೆ ಕೂಡ ಇಲ್ಲಿ ಎದ್ದು ಕಾಣುತ್ತಿದೆ.
ಕಾಂಗ್ರೆಸ್ ಕೈಯಲ್ಲಿರುವ ಪಂಚಾಯತ್ ಅನ್ನು ಒಂದೊಂದಾಗಿಯೇ ಇನ್ನೊಂದು ಪಕ್ಷಕ್ಕೆ ಧಾರೆಯೆರೆದು ಕೊಡುವುದಾದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಸಂಪೂರ್ಣ ಅಧ:ಪತನ ಗೊಳ್ಳುವುದರಲ್ಲಿ ಸಂಶಯವಿಲ್ಲ. ಪ್ರಮುಖ ನಾಯಕರ ಸುತ್ತ ಸುತ್ತಾಡುವ ಹಿಂಬಾಲಕರಿಗೆ ನಿಗಮ ಮಂಡಳಿಗಳನ್ನು ನೀಡುವ ಬದಲು ಪಕ್ಷಕ್ಕಾಗಿ ದುಡಿಯುವ ಪ್ರಾಮಾಣಿಕರಿಗೆ ನೀಡುವ ಅಗತ್ಯವಿದೆ. ಹಿಂಬಾಲಕರ ಬಳಿ ನಾಲ್ಕೈದು ಓಟುಗಳಿಲ್ಲ. ನಾಯಕರು ನಂಬುವುದು ಇಂತಹವರನ್ನೇ.
ಪ್ರಮುಖ ನಾಯಕರೆನಿಸಿಕೊಂಡವರು ತಮ್ಮ ಸುತ್ತ ಅತ್ತಿತ್ತ ತಿರುಗಾಡುವವರು, ತಮ್ಮ ಕಾರಿನಲ್ಲಿ ಇರುವವರು ಮಾತ್ರ ನಾಯಕರೆಂದು ನಂಬುವುದನ್ನು ಇನ್ನಾದರೂ ಬಿಡಬೇಕು. ಜನಸಾಮಾನ್ಯರ ನಡುವೆ, ಕಾರ್ಯಕರ್ತರ ಸೇವೆ ಮಾಡುತ್ತಾ ಪಕ್ಷಕ್ಕಾಗಿ ಪ್ರಾಮಾಣಿಕರಾಗಿ ದುಡಿಯುವವರನ್ನು ಗುರುತಿಸಿ ಮುನ್ನೆಲೆಗೆ ತಂದರೆ ಮಾತ್ರ ಗುರುಪುರ ಭಾಗದಲ್ಲಿ ಮೊದಲಿದ್ದ ಗತವೈಭವಕ್ಕೆ ಕಾಂಗ್ರೆಸ್ ಮರಳಬಹುದು. ಇಲ್ಲವಾದರೆ ಬಣ ರಾಜಕಾರಣಕ್ಕೆ ತುತ್ತಾಗಿ ಕಾಂಗ್ರೆಸ್ ಇಲ್ಲಿ ಅಧಃಪತನ ಗೊಳ್ಳುವುದಂತೂ ಸತ್ಯ.