ರಹಸ್ಯ ಸರ್ವೆ; ಹೈಕಮಾಂಡ್ ಮೌನ.!, ನಾಯಕತ್ವ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ; ಆಂತರಿಕ ಸರ್ವೆಯಿಂದ ಸಿಎಂ ಕನಸಿಗೆ ತಡೆ

ರಾಜ್ಯ

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿ ಕೇಳಿಬರುತ್ತಿದೆ. ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಟ್ರಬಲ್ ಶೂಟರ್ ಡಿಕೆಶಿ ಸಂಕಷ್ಟದ ಸಮಯದಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತವರು. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಎಷ್ಟೇ ಒತ್ತಡವಿದ್ದರೂ ಅವರು ನಾಯಕತ್ವದ ಬಗ್ಗೆ ಜಗ್ಗುತ್ತಿಲ್ಲ. ಕಾರಣ ಹೈಕಮಾಂಡ್‌ನ ಈ ನಡೆಗೆ ಬಲವಾದ ಆಘಾತಕಾರಿ ಕಾರಣವೊಂದು ಈಗ ಬಯಲಿಗೆ ಬಂದಿದೆ.

ಡಿ.ಕೆ. ಶಿವಕುಮಾರ್ ಅವರು ಸಾರ್ವಜನಿಕವಾಗಿ, ಪಕ್ಷದಲ್ಲಿ ಎಲ್ಲವೂ ಸರಿಯಿದೆ, ಯಾವುದೇ ಗೊಂದಲಗಳಿಲ್ಲ ಎಂದು ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಆದರೆ, ವಾಸ್ತವದಲ್ಲಿ ಅವರು ಸಿಎಂ ಪಟ್ಟಕ್ಕಾಗಿ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅವರ ಬೆಂಬಲಿಗರು ಮತ್ತು ಬಣದ ನಾಯಕರು, ಶಿವಕುಮಾರ್ ಅವರಿಗೆ ಈಗ ಅಧಿಕಾರ ಹಸ್ತಾಂತರವಾಗಲೇಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೂ, ದೆಹಲಿ ನಾಯಕರಿಂದ ಡಿಕೆಶಿಗೆ ಇಲ್ಲಿಯವರೆಗೂ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಬದಲಿಗೆ, ಹೈಕಮಾಂಡ್ ನಿಗೂಢ ಮೌನಕ್ಕೆ ಶರಣಾಗಿದೆ. ಪಕ್ಷದ ನಿಷ್ಠಾವಂತ ನಾಯಕನಾಗಿದ್ದರೂ, ಆರ್ಥಿಕವಾಗಿ ಪಕ್ಷಕ್ಕೆ ಶಕ್ತಿಯಾಗಿದ್ದರೂ ರಾಹುಲ್ ಗಾಂಧಿ ಅವರು ಡಿಕೆಶಿ ಪರವಾಗಿ ತೀರ್ಮಾನ ತೆಗೆದುಕೊಳ್ಳದಿರಲು ಒಂದು ಪ್ರಮುಖ ಕಾರಣವಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿದ್ದಂತೆಯೇ, ರಾಹುಲ್ ಗಾಂಧಿ ಅವರು ಮೂರು ಪ್ರತ್ಯೇಕ ಮೂಲಗಳಿಂದ ರಾಜ್ಯ ರಾಜಕೀಯದ ನೈಜ ಸ್ಥಿತಿಗತಿಯ ಬಗ್ಗೆ ರಹಸ್ಯ ಸರ್ವೆ ಮಾಡಿಸಿದ್ದಾರೆ. ಈ ಗುಪ್ತ ವರದಿಯಲ್ಲಿರುವ ಅಂಶಗಳು ಡಿಕೆಶಿ ಅವರ ಸಿಎಂ ಕನಸಿಗೆ ಸದ್ಯಕ್ಕೆ ತಡೆ ಒಡ್ಡಿವೆ.

ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿದರೆ ಅದು ನೇರವಾಗಿ ಸರ್ಕಾರದ ಅಸ್ತಿತ್ವಕ್ಕೆ ಕುತ್ತು ತರಬಹುದು ಎಂದು ವರದಿಯಲ್ಲಿ ಎಚ್ಚರಿಸಲಾಗಿದೆ. ಸಿದ್ದರಾಮಯ್ಯ ಅವರನ್ನು ಬದಲಿಸಿ, ಆ ಸ್ಥಾನಕ್ಕೆ ಡಿಕೆ ಶಿವಕುಮಾರ್ ಅವರನ್ನು ತಂದರೆ ಪಕ್ಷದೊಳಗೆ ಆಂತರಿಕ ಬಂಡಾಯ ಭುಗಿಲೇಳುವ ಸಾಧ್ಯತೆಯಿದೆ. ಅಲ್ಲದೆ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಮೇಲೂ ಇದು ಗಂಭೀರ ಪರಿಣಾಮ ಬೀರಲಿದ್ದು, ಜನಪ್ರಿಯ ಸರ್ಕಾರವೊಂದು ಅಪಾಯಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ ಎಂದು ವರದಿ ಹೇಳಿದೆ ಎನ್ನಲಾಗಿದೆ.

ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಕರ್ನಾಟಕದಂತಹ ಪ್ರಮುಖ ರಾಜ್ಯದಲ್ಲಿ ಯಾವುದೇ ಎಡವಟ್ಟು ಮಾಡಿಕೊಳ್ಳಲು ರಾಹುಲ್ ಗಾಂಧಿ ಸಿದ್ಧರಿಲ್ಲ. ಗುಪ್ತಚರ ವರದಿಗಳು ಮತ್ತು ಆಂತರಿಕ ಸರ್ವೆಗಳು ನಾಯಕತ್ವ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ ಎಂದು ಸ್ಪಷ್ಟವಾಗಿ ತಿಳಿಸಿವೆ. ಇದೇ ಕಾರಣಕ್ಕಾಗಿ, ಡಿ.ಕೆ. ಶಿವಕುಮಾರ್ ಎಷ್ಟೇ ಒತ್ತಡ ಹೇರಿದರೂ, ರಾಹುಲ್ ಗಾಂಧಿ ಅವರು ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಳ್ಳದೆ, ಯಥಾಸ್ಥಿತಿ ಕಾಪಾಡಿಕೊಳ್ಳಲು ತೀರ್ಮಾನಿಸಿದ್ದಾರೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಒಟ್ಟಾರೆಯಾಗಿ, ಸಿಎಂ ಕುರ್ಚಿ ಏರಲು ತುದಿಗಾಲಲ್ಲಿ ನಿಂತಿರುವ ಡಿಕೆಶಿಗೆ ರಾಹುಲ್ ಗಾಂಧಿ ಅವರ ಕೈಸೇರಿರುವ ಈ ರಹಸ್ಯ ವರದಿಯು ಸದ್ಯಕ್ಕೆ ದೊಡ್ಡ ಅಡೆತಡೆಯಾಗಿ ಪರಿಣಮಿಸಿರುವುದಂತೂ ಸತ್ಯ. ಈ ನಡುವೆ ಡಿಕೆಶಿ‌ ಅವರಿಗೆ ಕರೆ ಮಾಡಿದ ವೇಣುಗೋಪಾಲ್‌ ಜನವರಿಯಲ್ಲಿ ದಿಲ್ಲಿಗೆ ಬರುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.