ಬೆಂಗಳೂರು: ಎನ್‌ಸಿಬಿ ಅಧಿಕಾರಿಗಳು ಮತ್ತು ಬೆಂಗಳೂರು ಪೊಲೀಸರ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪರಿಣಾಮ ಡ್ರಗ್ಸ್ ದಂಧೆ ಬಯಲಿಗೆ

ರಾಜ್ಯ

ಬೆಂಗಳೂರಿನ ಹೊರವಲಯದಲ್ಲಿ ಪತ್ತೆಯಾಗಿರುವ ಡ್ರಗ್ ಫ್ಯಾಕ್ಟರಿ ಇದೀಗ ಭಾರೀ ಸುದ್ದಿಗೆ ಗ್ರಾಸವಾಗಿದೆ. ಮಹಾರಾಷ್ಟ್ರದಲ್ಲಿನ ಡ್ರಗ್ ದಂಧೆ ಕರ್ನಾಟದತ್ತ ತನ್ನ ಕಬಂಧ ಬಾಹುವನ್ನು ಚಾಚಿರುವ ಬಗ್ಗೆ ಸುಳಿವರಿತ ಬೆಂಗಳೂರು ಪೊಲೀಸರೇ ಭಾರೀ ಕಾರ್ಯಾಚರಣೆಗೆ ತಯಾರಿ ನಡೆಸಿದ್ದರು. ಆ ಹೊತ್ತಿಗೆ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಬೆಂಗಳೂರು ಪೊಲೀಸರ ಜೊತೆ ಚರ್ಚಿಸಿ, ಬೆಂಗಳೂರು ಪೊಲೀಸರ ಜೊತೆ ಎನ್‌ಸಿಬಿ ಅಧಿಕಾರಿ ಸಾಥ್ ನೀಡಿ, ಜಂಟಿಯಾಗಿ ಬೆಂಗಳೂರು ಪೊಲೀಸರ ನೇತೃತ್ವದಲ್ಲೇ ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಜಾಲ ಪತ್ತೆ ಹಚ್ಚಿದರು.

ಕೇಂದ್ರ ಗುಪ್ತ ದಳದ ಮಾಹಿತಿ ಪ್ರಕಾರ, ಬಾಗಲೂರು ಮತ್ತು ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲಿ ಡ್ರಗ್ ಹೊಂದಿಸಿಕೊಂಡು ಅದನ್ನು ವಿತರಿಸುವ ಸಂಚು ಈ ಮಾಫಿಯಾದಿಂದ ನಡೆಯುತ್ತಿತ್ತು. ಬೆಂಗಳೂರು ಪೊಲೀಸರ ಕಣ್ಣುತಪ್ಪಿಸಿ ಈ ದಂಧೆ ನಡೆಸುತ್ತಿದ್ದ ಮಾಫಿಯಾ ತಮ್ಮ ನೆಲೆಯನ್ನು ರಾಜ್ಯದಿಂದ ರಾಜ್ಯಕ್ಕೆ ಬದಲಾಯಿಸುತ್ತಿತ್ತು. ಇತ್ತೀಚೆಗಷ್ಟೇ ಬೆಂಗಳೂರು ಹೊರವಲಯದಲ್ಲಿ ಬೀಡು ಬಿಟ್ಟು ದಂಧೆ ಆರಂಭಕ್ಕೆ ತಯಾರಿ ನಡೆಸಿತ್ತು. ಈ ಪ್ರದೇಶಗಳು ಇತ್ತೀಚೆಗಷ್ಟೇ ಬೆಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಸೇರಿದ್ದರಿಂದ ಹಾಗೂ ಪೊಲೀಸರ ಓಡಾಟ ಕಡಿಮೆ ಇರಬಹುದೆಂಬ ಭ್ರಮೆಯಿಂದ ಈ ಡ್ರಗ್ ಮಾಫಿಯಾವು ತನ್ನ ರಹಸ್ಯ ಚಟುವಟಿಕೆಗೆ ಈ ಪ್ರದೇಶಗಳನ್ನೇ ಆಯ್ಕೆ ಮಾಡಿತ್ತು ಎನ್ನಲಾಗಿದೆ.

ಬೆಂಗಳೂರು ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಒಂದಷ್ಟು MDMA ಹಾಗೂ ಮಾದಕ ದ್ರವ್ಯಗಳನ್ನು ಅವಲಹಳ್ಳಿಯ ಮನೆಯೊಂದಕ್ಕೆ ಸಾಗಿಸಿದ್ದಾನೆ. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ವೈಟ್ ಫೀಲ್ಡ್ ಉಪವಿಭಾಗದ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ಮಹಾರಾಷ್ಟ್ರ ANTF ಮತ್ತು ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಹಾಗಾಗಿ ಬೆಂಗಳೂರು ಪೊಲೀಸರ ಜೊತೆಯಲ್ಲೇ ಜಂಟಿಯಾಗಿ ಮಹಾರಾಷ್ಟ್ರ ಹಾಗೂ ಕೇಂದ್ರದ ತಂಡಗಳು ಯಶಸ್ವಿ ಕಾರ್ಯಾಚರಣೆ ನಡೆಸಿದೆ.

ಬೆಂಗಳೂರು ಪೊಲೀಸರಿಗೆ ಈ ದಂಧೆಕೋರರ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನಲೆಯಲ್ಲಿ ಈ ಜಾಲವನ್ನು ಬೇಧಿಸಲು ಕಾರ್ಯಾಚರಣೆ ನಡೆಸಿದ್ದರು. ಬೆಂಗಳೂರು ಪೊಲೀಸರ ಪರಿಶ್ರಮವೇ ತಮ್ಮ ಈ ಕಾರ್ಯಾಚರಣೆ ಯಶಸ್ವಿಯಾಗಲು ಕಾರಣವಾಯಿತು ಎಂದು ಮಹಾರಾಷ್ಟ್ರ ಪೊಲೀಸರೆ ಒಪ್ಪಿಕೊಳ್ಳುತ್ತಾರೆ. ಈ ಡ್ರಗ್ ಫ್ಯಾಕ್ಟರಿ ದಂಧೆಯಲ್ಲಿ ಸೆರೆಸಿಕ್ಕವರು ಹೊರ ರಾಜ್ಯದವರೇ ಆಗಿದ್ದು, ಅವರ ಮೂಲವನ್ನು ಪತ್ತೆಹಚ್ಚುವಲ್ಲಿ ಎನ್‌ಸಿಬಿ ಅಧಿಕಾರಿಗಳು ಪ್ರಯತ್ನ ಮುಂದುವರಿಸಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ಡ್ರಗ್ ಜಾಲವನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ರಹಸ್ಯ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಪೊಲೀಸರು ನಿಗಾ ವಹಿಸಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯತಂತ್ರದಿಂದಾಗಿಯೇ ಬೃಹತ್ ಡ್ರಗ್ ಜಾಲ ಖೆಡ್ಡಾಕ್ಕೆ ಬಿದ್ದಿವೆ. ಹೊರ ರಾಜ್ಯಗಳ ಮಾಫಿಯಾದ ಡ್ರಗ್ ಜಾಲವನ್ನು ಬೇಧಿಸುವ ಪ್ರಯತ್ನ ನಡೆದಿರುವಾಗಲೇ ಎನ್‌ಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದರಿಂದ, ಸಹಜವಾಗಿಯೇ ಕಾರ್ಯಾಚರಣೆಯಲ್ಲಿ ಕೇಂದ್ರ ತಂಡದ ನೇತೃತ್ವವು ಕೇಂದ್ರಬಿಂದುವಾಯಿತು ಎನ್ನಲಾಗಿದೆ.