ಮಂಗಳೂರು: ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಸುಲಿಗೆ ಮಾಡಿದ ಆರೋಪಿಯ ಬಂಧನ; 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ವಶ.

ಕರಾವಳಿ

ದಿನಾಂಕ: 25-12-2025 ರಂದು ಸಂಜೆ ಗುರುನಗರ ನಿವಾಸಿಯಾದ ಮಹಿಳೆಯೊಬ್ಬರು ತಮ್ಮ ಮಗಳೊಂದಿಗೆ ಯೆಯ್ಯಾಡಿಯಲ್ಲಿರುವ ತಮ್ಮ ಅಂಗಡಿಯಿಂದ ಮನೆಯ ಕಡೆಗೆ ಶಂಕರಭವನ ಹೊಟೇಲ್ ಬಳಿಯ ಕೊಪ್ಪಳಕಾಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ, ಸಂಜೆ ಸುಮಾರು 6.30 ಗಂಟೆಗೆ ಹಿಂದಿನಿಂದ ಬಂದ ಓರ್ವ ಅಪರಿಚಿತ ವ್ಯಕ್ತಿ ಏಕಾಏಕಿ ರತ್ನಾವತಿಯವರ ಕುತ್ತಿಗೆಯಲ್ಲಿದ್ದ 32 ಗ್ರಾಂ ತೂಕದ ಬೆಲೆ ಬಾಳುವ ಚಿನ್ನದ ಕರಿಮಣಿ ಸರವನ್ನು ಕಸಿದುಕೊಂಡು ಓಡಿ ಹೋಗಿರುತ್ತಾನೆ. ಈ ಬಗ್ಗೆ ಅದೇ ದಿನ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ: 128/2025 ರಂತೆ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆ ಕಾರ್ಯಕ್ಕೆ ಪೊಲೀಸರು ಬಲೆ ಬೀಸಿದ್ದರು.

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಗವಿರಾಜ್‌ ಮತ್ತು ಶ್ರೀ ಅರುಣ್‌ ಕುಮಾರ್‌, ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಮತ್ತು ಎಸಿಪಿ ದಕ್ಷಿಣ ಉಪವಿಭಾಗದ ಕ್ರೈಂ ಸಿಬ್ಬಂದಿಗಳು ಸೇರಿ ಆರೋಪಿಯ ಪತ್ತೆ ಕಾರ್ಯವನ್ನು ನಡೆಸಿದ್ದು, ಸಾಕ್ಷ್ಯಾಧಾರಗಳ ಮೇಲೆ ದಿನಾಂಕ: 28-12-2025 ರಂದು ಬೆಳಿಗ್ಗೆ ಸುಮಾರು 9.30 ಗಂಟೆಗೆ ಪ್ರಕರಣದ ಆರೋಪಿ ರೋಹಿತ್ .ಬಿ ದಾಸ್ ಎಂಬಾತನನ್ನು ಬಂಟ್ವಾಳದ ಕುಕ್ಕೆಪದವು ಎಂಬಲ್ಲಿ ಆರೋಪಿ ರೋಹಿತ್ .ಬಿ ದಾಸ್, ವಾಸ: ಡೋರ್ ನಂ 1-13/1, ಬಿತ್ತ ಮನೆ, ಪಂಚದುರ್ಗ ಪ್ರೌಢಶಾಲೆಯ ಹಿಂಭಾಗ, ಕಕ್ಕೆಪದವು, ಬಂಟ್ವಾಳ. ಎಂಬಾತನನ್ನು ದಸ್ತಗಿರಿ ಮಾಡಿ, ಸುಲಿಗೆ ಮಾಡಿದ 3 ಲಕ್ಷ 50 ಸಾವಿರ ರೂ. ಮೌಲ್ಯದ 32 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಎಲೆಕ್ಟ್ರಿಕ್ ಸ್ಕೂಟರನ್ನು ಪೊಲೀಸರು ವಶಪಡಿಸಿಕೊಂಡಿರುತ್ತಾರೆ.

ತನಿಖೆಯಲ್ಲಿ ಆರೋಪಿಯು ಸ್ವಿಗ್ಗಿ ಮತ್ತು ಝೋಮೆಟೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಸ್ಕೂಟರ್‌ ಖರೀದಿಸಿದ್ದು, ಮತ್ತು ಇತರ ವಿಚಾರಗಳಿಗೆ ಲಕ್ಷಾಂತರ ರೂಪಾಯಿಗಳ ಸಾಲ ಮಾಡಿದ್ದು, ಸಾಲವನ್ನು ತೀರಿಸಲು ಈ ಕೃತ್ಯವನ್ನು ಎಸಗಿರುವುದು ಈವರೆಗಿನ ತನಿಖೆಯಲ್ಲಿ ತಿಳಿದುಬಂದಿರುತ್ತದೆ.

2025 ನೇ ಸಾಲಿನಲ್ಲಿ ಮಂಗಳೂರು ನಗರ ಪೊಲೀಸ್‌ ಕಮೀಷನರೇಟ್‌ ವ್ಯಾಪ್ತಿಯಲ್ಲಿ 07 ಚಿನ್ನದ ಸರಗಳ್ಳತನ (ಚೈನ್‌ಸ್ಟಾಚಿಂಗ್‌) ಪ್ರಕರಣಗಳು ವರದಿಯಾಗಿದ್ದು, ಎಲ್ಲಾ 07 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿರುತ್ತಾರೆ.