ಮೂಲ್ಕಿ: ಕಂಬಳದ ಕೋಣ ಮಾಲೀಕರಿಗೆ ಹಲ್ಲೆ, ಸುಲಿಗೆ ಪ್ರಕರಣ; ಮೂವರು ಆರೋಪಿಗಳ ವಿರುದ್ಧ ಕೆಕೋಕಾ ಪ್ರಕರಣ ದಾಖಲು

ಕರಾವಳಿ

ಪಡು ಪಣಂಬೂರು ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ 2 ನೇ ಬಹುಮಾನ ಗೆದ್ದ ಸಂಶುದ್ದೀನ್ ಅವರ ಬಳಿ ಸುಲಿಗೆ ಮಾಡಲು ಯತ್ನಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮೂಲ್ಕಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಹಲವು ಪ್ರಕರಣಗಳಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರ ವಿರುದ್ಧ ಕೆಕೋಕಾ (ಕರ್ನಾಟಕ ಕಂಟ್ರೋಲ್ ಅರ್ಗನೈಸ್ಡ್ ಕ್ರೈಂ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲು ಆದೇಶ ನೀಡಲಾಗಿದೆ.

ಹಲವು ಪ್ರಕರಣಗಳಲ್ಲಿ ಭಾಗಿಯಾದ ಸುವಿನ್ ಕಾಂಚನ್ ಹೆಜಮಾಡಿ, ಅಕ್ಷಯ್ ಪೂಜಾರಿ ಕಾರ್ನಾಡ್ ಮೂಲ್ಕಿ ಮತ್ತು ಶ್ಯಾಂ ಸುಂದರ್ ಶೆಟ್ಟಿ ವಿರುದ್ಧ ಕೆಕೋಕಾ ದಾಖಲಾಗಿದೆ.

ಡಿಸೆಂಬರ್ 28 ರಂದು ನಡೆದ ಕಂಬಳದಲ್ಲಿ ಸಂಶುದ್ದೀನ್ ಅವರ ಕೋಣ ದ್ವಿತೀಯ ಬಹುಮಾನ ಗಳಿಸಿತ್ತು. ಜನವರಿ ಒಂದರಂದು ಮೂವರು ಆರೋಪಿಗಳು ಸಂಶುದ್ದೀನ್ ಅವರ ಮನೆಗೆ ಬಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಕೋಣಗಳ ವಿಡಿಯೋ ದಾಖಲಿಸಿಕೊಂಡು ಮತ್ತೊಮ್ಮೆ ಆಗಮಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದರು.ಪ್ರಕರಣ ದಾಖಲಿಸಿಕೊಂಡ ಮೂಲ್ಕಿ ಪೊಲೀಸರು ಮೂವರನ್ನು ಬಂಧಿಸಿ ಸಮಗ್ರ ತನಿಖೆ ಮುಂದುವರಿಸಿದಾಗ ಮೂವರ ಪೈಕಿ ಇಬ್ಬರು ಆರೋಪಿಗಳು ನಾನಾ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ತಿಳಿದು ಬಂದಿತ್ತು. ಸುವಿನ್ ಕಾಂಚನ್ ವಿರುದ್ಧ ಮೂಲ್ಕಿ, ನರಸಿಂಹರಾಜಪುರ, ಪಡುಬಿದ್ರಿ, ಸುರತ್ಕಲ್, ಬರ್ಕೆ ಠಾಣೆಗಳಲ್ಲಿ 2 ಕೊಲೆ ಕೇಸು, 2 ಕೊಲೆ ಯತ್ನ, ಒಂದು ಡಕಾಯಿತಿ ಕೇಸು ಸಹಿತ 7 ಪ್ರಕರಣ, ಅಕ್ಷಯ್ ಪೂಜಾರಿ ವಿರುದ್ಧ ಮೂಲ್ಕಿ ಠಾಣೆಯಲ್ಲಿ 307 ಕೇಸು, ಅಟ್ರಾಸಿಟಿ ಕೇಸು, ಸೇರಿದಂತೆ ಮೂರು ಪ್ರಕರಣ ದಾಖಲಾಗಿತ್ತು. ಶ್ಯಾಂ ಸುಂದರ್ ವಿರುದ್ಧ ಇದು ಪ್ರಥಮ ಪ್ರಕರಣವಾಗಿತ್ತು.

ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿದ ಬಳಿಕ ತನಿಖಾಧಿಕಾರಿಗಳು ಸಲ್ಲಿಸಿದ ವರದಿ ಅನ್ವಯ ಪೊಲೀಸ್ ವರಿಷ್ಠಾಧಿಕಾರಿಯವರು ಮೂವರ ವಿರುದ್ಧ ಕೆಕೋಕಾ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚಿಸಿದ್ದಾರೆ.