ರಾಜ್ಯದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಿಂಕ್; ಮಕ್ಕಳೇ ಮಾದಕ ಜಾಲದ ಟಾರ್ಗೆಟ್, ಸಿಂಹಸ್ವಪ್ನರಾದ ‘ಮಂಗಳೂರು ಪೊಲೀಸರು’

ಕರಾವಳಿ

ಕರಾವಳಿ ಅಂದರೆ ಶಿಕ್ಷಣಕ್ಕೆ ಹೆಸರುವಾಸಿ. ಇಲ್ಲಿರುವ ಶಿಕ್ಷಣ ಸಂಸ್ಥೆಗಳು ತಮ್ಮ ಅತ್ಯುತ್ತಮ ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿ. ‘ಎಜ್ಯುಕೇಶನ್ ಹಬ್’ ಎನಿಸಿಕೊಂಡಿರುವ ಮಂಗಳೂರಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹೊರಜಿಲ್ಲೆ, ಹೊರರಾಜ್ಯಗಳ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇವರು ಸೇರಿದಂತೆ ಯುವ ಸಮೂಹ ಡ್ರಗ್ಸ್ ಮಾರುಕಟ್ಟೆಯ ಮುಖ್ಯ ಟಾರ್ಗೆಟ್. ನೆಲ, ಜಲ, ವಾಯು ಸಂಪರ್ಕ ಎಲ್ಲವನ್ನು ಜಿಲ್ಲೆ ಹೊಂದಿರುವುದರಿಂದ ಡ್ರಗ್ಸ್ ಕಾಳದಂಧೆಗೆ ಅನುಕೂಲಕರವಾಗಿ ಪರಿಣಮಿಸಿದೆ. ರಾತ್ರಿಯಾದರೆ ಸಾಕು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ನಶಾ ಲೋಕದಲ್ಲಿ ತೇಲಾಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

ಮುಖದಲ್ಲೊಂದು ಕುರುಚಲು ಗಡ್ಡ, ಮುಖದಲ್ಲಿ ಗೆರೆ ಹಾಕಿರೋ ತರಹ ಮೀಸೆಗಳು, ಅರ್ಥನೇ ಇಲ್ಲದ ಹೇರ್ ಸ್ಟೈಲ್, ಸೊಂಟದಿಂದ ಕೆಳಗೆ ಜಾರುವ ಪ್ಯಾಂಟುಗಳು. ಅದರ ಜೊತೆ ಕೈಯಲ್ಲೊಂದು ಸಿಗರೇಟು, ಇವೆಲ್ಲಾ ಇತ್ತೀಚಿನ ಹುಡುಗರ ಫ್ಯಾಶನ್‍ಗಳು. ಡ್ರಗ್ಸ್ ಅಂದಕೂಡಲೇ ಕೇವಲ ಔಷಧಿಗಳೇ ಅಲ್ಲ. ಅಯೋಡೆಕ್ಸ್ ನ್ನು ಬ್ರೆಡ್ ಜೊತೆ ತಿನ್ನುವುದು, ವೈಟ್ನರ್ ಅನ್ನು ಮೂಸಿ ನೋಡುವುದು, ಕೆಮ್ಮಿನ ಸಿರಪನ್ನು ಕುಡಿಯುವುದು, ಅವತಾರ್ ಎಂಬ ಸೀಸೆಯನ್ನು ಚೀಪುವುದು. ಪಂಕ್ಚರ್ ಗೆ ಉಪಯೋಗಿಸುವ ಟ್ಯೂಬ್ ಅನ್ನು ಬ್ರೆಡ್ ಜೊತೆ ತಿನ್ನುವುದು ಹಾಗೂ ಮಾಮೂಲಿ.. ಟ್ಯಾಬ್ಲೇಟ್, ಆಫೀಮು, ಗಾಂಜಾ ಇವೆಲ್ಲಾ ಡ್ರಗ್ಸ್ ಗಳೇ. ಇದನ್ನು ತಿಂದ್ರೆ ಏನಾಗುತ್ತೆ ಅನ್ನುವ ಪ್ರಶ್ನೆಗೆ ಇದನ್ನು ತಿಂದ ತಕ್ಷಣ ನಮ್ಮ ಮೆದುಳು ಜಾಗೃತವಾಗುತ್ತೆ. ನಾವು ಸ್ವರ್ಗಲೋಕದಲ್ಲೇ ತೇಲಾಡುತ್ತೇವೆ. ಸುಖದ ಪರಾಕಾಷ್ಠೆಗೆ ತಲುಪುತ್ತೇವೆ. ಅದು ಇಲ್ಲ ಅಂದರೆ ಬೇರೆ ಏನೂ ಇಲ್ಲ ಎಂಬೆಲ್ಲಾ ಅನುಭವಕ್ಕೆ ಬರುತ್ತೆ ಅಂತ ಡ್ರಗ್ಸ್ ಉಪಯೋಗಿಸುವವರೇ ಹೇಳುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಹತ್ತಕ್ಕೂ ಅಧಿಕ ಗಡಿರಸ್ತೆಗಳು ಹಾಗೂ ರೈಲಿನ ಮೂಲಕ ಸಂಪರ್ಕ ಹೊಂದಿರುವ ಕೇರಳದಿಂದ ಅವ್ಯಾಹತವಾಗಿ ಡ್ರಗ್ಸ್ ಸರಬರಾಜು ಆಗುತ್ತಿದೆ. ಮಂಗಳೂರಲ್ಲಿ ಶಿಕ್ಷಣ ಪಡೆಯುತ್ತಿರುವ ಕೇರಳ ವಿದ್ಯಾರ್ಥಿಗಳ ಸಂಖ್ಯೆಯೂ ದೊಡ್ಡದಿದೆ. ಈ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡುವ ಮೂಲಕ ವ್ಯಸನಿಗಳ ಜಾಲವನ್ನು ಸ್ಥಳೀಯ ಮಟ್ಟದಲ್ಲೂ ವಿಸ್ತಾರಗೊಳಿಸಲಾಗುತ್ತಿದೆ. ಇತ್ತೀಚೆಗೆ ನಡೆಸಿದ ರ್ಯಾಂಡರ್ಮ್ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಕಾಲೇಜು ವಿದ್ಯಾರ್ಥಿಗಳು ಡ್ರಗ್ಸ್ ಸೇವನೆ ಮಾಡಿರುವುದು ಖಚಿತವಾಗಿದೆ. ನಗರ ಪ್ರದೇಶ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶಗಳಲ್ಲೂ ಡ್ರಗ್ಸ್ ಹಾವಳಿ ಮಿತಿಮೀರುತ್ತಿದೆ. ಎಳೆ ಯುವಕರು ಮಾದಕ ವ್ಯಸನಿಗಳು ಆಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ. ಕಳೆದ ಮಾರ್ಚ್‍ನಲ್ಲಿ ಮಂಗಳೂರು ಪೊಲೀಸರು ರಾಜ್ಯದಲ್ಲೇ ಅತೀ ದೊಡ್ಡ ಡ್ರಗ್ಸ್ ಪ್ರಕರಣವನ್ನು ಭೇದಿಸಿ 75 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡು ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳೆಯರನ್ನು ಬೆಂಗಳೂರಲ್ಲಿ ಬಂಧಿಸಿದ್ದರು. ಆರೋಪಿಗಳು ದೆಹಲಿಯಿಂದ ವಿಮಾನದ ಮೂಲಕ ನಿರಂತರವಾಗಿ ಡ್ರಗ್ಸ್ ಪೂರೈಸುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅನೇಕ ವಿದೇಶಿಗರು ಸ್ಥಳೀಯ ಪೆಡ್ಲರ್ ಗಳ ಮೂಲಕ ಜಾಲ ವಿಸ್ತರಿಸಿದ್ದಾರೆ. ಮುಂಬೈನಿಂದಲೂ ಸರಬರಾಜು ಆಗುತ್ತಿದೆ. ಆದರೆ ಜಾಲದ ಹಿಂದಿನ ಕಾಣದ ಕೈಗಳು ಮಾತ್ರ ನಿಗೂಢವಾಗಿಯೇ ಉಳಿದಿದೆ.

ರಾಜ್ಯದಲ್ಲಿ ಮಾದಕ ವಸ್ತುಗಳ ಪೂರೈಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಲಿಂಕ್ ಇದ್ದು, ಹೈಫೈ ಡ್ರಗ್ಸ್ ಪೂರೈಕೆ ವಿಮಾನದಲ್ಲೇ ನಡೆಯುತ್ತಿದೆ. ಥಾಯ್ಲೆಂಡ್, ನೈಜೀರಿಯಾ, ಆಫ್ರಿಕಾ, ಐವರಿಕೋಸ್ಟ್, ತಾಂಜೇನಿಯಾ, ಮಲೇಷ್ಯಾ, ಆಸ್ಟ್ರೇಲಿಯಾ, ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶ ಮುಂತಾದ ದೇಶಗಳಿಂದ ಯಥೇಚ್ಛವಾಗಿ ಭಾರತಕ್ಕೆ ಮಾದಕ ವಸ್ತುಗಳು ಹರಿದುಬರುತ್ತಿದ್ದು, ಇದರಲ್ಲಿ ಬಹುಪಾಲು ಕರ್ನಾಟಕದ ಮಾರುಕಟ್ಟೆಯನ್ನು ಪ್ರವೇಶಿಸುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ ಸಹಿತ ಪ್ರಮುಖ ಕೇಂದ್ರಗಳಲ್ಲಿ ವಿದೇಶೀ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು ಇವರಲ್ಲಿ ಹಲವರನ್ನು ಮಾದಕ ಜಾಲದ ಪೆಡ್ಲರ್ ಗಳನ್ನಾಗಿ ಬಳಕೆ ಮಾಡಲಾಗುತ್ತಿದೆ.

ಇನ್ನು ದೇಶೀಯವಾಗಿ ಪೂರೈಕೆಯಾಗುತ್ತಿರುವ ಡ್ರಗ್ಸ್ ಗಳಲ್ಲಿ ಬಹುತೇಕ ರೈಲಿನ ಮೂಲಕವೇ ಸಾಗಾಟವಾಗುತ್ತಿದೆ. ರಾಜ್ಯಕ್ಕೆ ಅಸ್ಸಾಂ, ತ್ರಿಪುರಾ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ, ನೆರೆಯ ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದ ರೈಲುಗಳಲ್ಲಿ ಟನ್‍ಗಟ್ಟಲೇ ಗಾಂಜಾ ಹಾಗೂ ಇತರೆ ಡ್ರಗ್ಸ್ ಸಾಗಣೆ ನಡೆದಿರುವುದು ಪೊಲೀಸರ ತನಿಖೆ ವೇಳೆ ಪತ್ತೆಯಾಗಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ರಾಜ್ಯ ರೈಲ್ವೆ ಪೊಲೀಸರು 16.28 ಕೋಟಿ ಮೌಲ್ಯದ 19.49 ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದಿರುವುದೇ ಇದಕ್ಕೆ ಸಾಕ್ಷಿ ಹೇಳುತ್ತಿದೆ.

ಕೆಲವು ಕಾಲೇಜು ಹುಡುಗರನ್ನೇ ಸೆಟ್ ಮಾಡಿಕೊಳ್ಳುವ ಡ್ರಗ್ಸ್ ಪೆಡ್ಲರ್ ಗಳು ಯುನಿಫಾರ್ಮ್ ಧರಿಸಿದ ಹುಡುಗರ ಸ್ಕೂಲ್ ಬ್ಯಾಗ್‍ನೊಳಗಿನಿಂದಲೇ ವ್ಯವಸ್ಥಿತವಾಗಿ ಗಾಂಜಾ ರವಾನೆ ಮಾಡಿ ಬಿಡುತ್ತಾರೆ. ಕೇವಲ ಗಾಂಜಾ ಮಾತ್ರವೇ ಅಲ್ಲ, ಭಯಾನಕವಾದ ಅಮಲು ಪದಾರ್ಥಗಳೂ ಅದರಲ್ಲಿ ಸೇರಿರುತ್ತವೆ. ಕೆಲವು ಹುಡುಗರಿಗೆ ಟ್ಯಾಬ್ಲೆಟ್ ಪೂರೈಕೆ ಮಾಡುವ ತಂಡಗಳೂ ಇವೆ. ಅಂತಹವುಗಳನ್ನು ಮಾರಾಟ ಮಾಡುವ ಮೆಡಿಕಲ್ ಶಾಪ್‍ಗಳು ಇವೆ. ಕಾಲೇಜುಗಳ ಆವರಣಗಳು, ಕಾಲೇಜು ಸುತ್ತಮುತ್ತಲಿನ ಸಣ್ಣ ಪುಟ್ಟ ಅಂಗಡಿಗಳು, ಗಂಜಿ ಹೊಟೇಲ್‍ಗಳು, ವಸತಿ ಗೃಹಗಳು ಡ್ರಗ್ಸ್ ಅಡ್ಡೆಗಳಾಗಿ ಪರಿವರ್ತನೆಯಾಗಿವೆ. ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಇದಕ್ಕೆ ಪ್ರಮುಖ ಗಿರಾಕಿಗಳಾಗಿರುವುದು ಆತಂಕದ ಸಂಗತಿ. ದೂರ ದೂರುಗಳಿಂದ ಇಲ್ಲಿ ಕಲಿಯಲೆಂದು ಬರುವ ವಿದ್ಯಾರ್ಥಿಗಳು ಹೆತ್ತವರ ಕಟ್ಟುಪಾಡುಗಳಿಲ್ಲದೆ ಎಲ್ಲೆ ಮೀರಿ ವರ್ತಿಸುತ್ತಾರೆ.

ಇವರಿಗೆ ಮಜಾ ಮಾಡಲು ಸಾಕಷ್ಟು ಹಣ ಕೂಡಾ ಸಿಗುತ್ತದೆ. ಇವರ ಜೊತೆ ಸ್ಥಳೀಯ ವಿದ್ಯಾರ್ಥಿಗಳೂ ಸೇರುತ್ತಾರೆ. ಹಣ ಮತ್ತು ಹುಡುಗಿಯರನ್ನು ದುರ್ಬಳಕೆ ಮಾಡಿಕೊಳ್ಳುವ ಉದ್ದೇಶದ ಹುಡುಗರು ಸ್ವಲ್ಪ ಸ್ವಲ್ಪವೇ ಅಮಲು ನೀಡಿ ವ್ಯಸನಿಗಳಾಗಿಸುತ್ತಾರೆ.
ನ್ಯಾಷನಲ್ ಮೆಡಿಕಲ್ ಜರ್ನಲ್ ಡಿಸೆಂಬರ್ ತಿಂಗಳಲ್ಲಿ ಪ್ರಕಟಿಸಿದ ಸಂಶೋಧನಾ ವರದಿಯೊಂದು ಬೆಚ್ಚಿ ಬೀಳಿಸುವಂತಿದೆ. ಭಾರತದ ಹತ್ತು ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಸರಾಸರಿ 9ರಿಂದ 12 ವರ್ಷದ ಮಕ್ಕಳೇ ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಮಾದಕ ವಸ್ತುಗಳ ಕುರಿತ ಕುತೂಹಲ, ಗೆಳೆಯರ ಒತ್ತಡ, ಸಾಮಾಜಿಕ ಜಾಲತಾಣಗಳ ಪ್ರಭಾವ, ಕುಟುಂಬದ ನಿರ್ಲಕ್ಷ್ಯ ಇವುಗಳೆಲ್ಲ ಮಕ್ಕಳನ್ನು ಮಾದಕ ವಸ್ತುಗಳ ಕಡೆ ತಳ್ಳುವ ಪ್ರಮುಖ ಕಾರಣಗಳಾಗಿವೆ. ಇದರಿಂದ ಮಕ್ಕಳ ಆರೋಗ್ಯಕ್ಕೆ ಅಪಾರ ಹಾನಿ ನಿಶ್ಚಿತ. ಡ್ರಗ್ ಎಳೆ ದೇಹಗಳನ್ನು ಹೊಕ್ಕರೆ ಮೆದುಳು ಅಭಿವೃದ್ಧಿಗೆ ಧಕ್ಕೆ, ಮಾನಸಿಕ ಅಸ್ವಸ್ಥತೆ, ದೇಹ ಕೃಶವಾಗುವುದು ಸಾಮಾನ್ಯ. ಜತೆಗೆ ಶಾಲೆ, ತರಗತಿ, ಕಲಿಕೆ ಕಡೆಯಿಂದ ಅವರ ಗಮನ ಚದುರಿ ಮಕ್ಕಳು ಶಾಲೆ ಬಿಡಲಾರಂಭಿಸುತ್ತಾರೆ. ಮಾತ್ರವಲ್ಲ, ಹಣಕ್ಕಾಗಿ ಮನೆಯಲ್ಲಿಯೇ ಕಳ್ಳತನ ಮಾಡುವುದು, ಅಲ್ಲಿ ಸಾಧ್ಯವಾಗದಿದ್ದರೆ ಹೊರಗಿನ ಗ್ಯಾಂಗ್ ಪ್ರಭಾವಕ್ಕೆ ಒಳಗಾಗಿ ಬಿಡುತ್ತಾರೆ.

ಸಿಂಹಸ್ವಪ್ನವಾದ ‘ಮಂಗಳೂರು ಪೊಲೀಸರು’

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಡ್ರಗ್ಸ್ ಪೆಡ್ಲರ್ ಗಳ ವಿರುದ್ಧ ಸಮರ ಸಾರಿದ್ದಾರೆ. ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ, ಜಿಲ್ಲಾ ಎಸ್ಪಿ ಡಾ. ಅರುಣ್ ಡ್ರಗ್ಸ್ ಪೆಡ್ಲರ್ ಗಳನ್ನು ಟಾರ್ಗೆಟ್ ಮಾಡಿ ಬೇಟೆಯಲ್ಲಿ ತೊಡಗಿದ್ದಾರೆ. ಇದು ಡ್ರಗ್ಸ್ ಪೆಡ್ಲರ್ ಗಳಲ್ಲಿ ನಡುಕ ಹುಟ್ಟಿಸಿದೆ. ಡ್ರಗ್ಸ್ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಡ್ರಗ್ಸ್ ಜಾಲದ ಮಾಹಿತಿ ನೀಡಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಕ್ಯೂಆರ್ ಕೋಡ್‍ಗಳನ್ನು ನೀಡಲಾಗಿದೆ. ಈ ಮಾಹಿತಿಯಿಂದಲೇ ಶೇಕಡಾ 25ರಷ್ಟು ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ನಶಾ ಮುಕ್ತ ಮಂಗಳೂರು ಆಗುವತ್ತ ಆಶಾದಾಯಕ ಹೆಜ್ಜೆ ಹಾಕುತ್ತಿದ್ದಾರೆ.