ಸಿಂಗಾರಿ ಬೀಡಿ ಮಾಲಿಕನ ಮನೆಗೆ ತಡರಾತ್ರಿಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು.

ಕರಾವಳಿ

ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ. ಮೂಟೆಗಟ್ಟಲೆ ನಗದು ಹಣ, ಮೊಬೈಲ್ ಹೊತ್ತೊಯ್ದ ಖದೀಮರು.

ಬಂಟ್ವಾಳ: ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದ ಪ್ರಸಿದ್ಧ ಬೀಡಿ ಉದ್ಯಮಿ ಸಿಂಗಾರಿ ಹಾಜಿ ಸುಲೈಮಾನ್ ರವರ ಮನೆಯಲ್ಲಿ ಇ.ಡಿ.ಅಧಿಕಾರಿಗಳ ಸೋಗಿನಲ್ಲಿ ಬಂದು ದರೋಡೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಎಂಟೂವರೆ ಗಂಟೆಗೆ ತಮಿಳುನಾಡು ನೋಂದಣಿಯ ಬಿಳಿ ಬಣ್ಣದ ಎರ್ಟಿಗಾ ಕಾರಿನಲ್ಲಿ ಬಂದ ಏಳು ಜನರ ತಂಡ ವ್ಯವಸ್ಥಿತವಾಗಿ ದರೋಡೆ ನಡೆಸಿ ಪರಾರಿಯಾಗಿದೆ.

ಹಿಂದಿ, ತಮಿಳು, ಇಂಗ್ಲಿಷ್ ಮತ್ತು ಕನ್ನಡ ಭಾಷೆ ಮಾತನಾಡುವ ಆರು ಜನ ಬಂದು ಮನೆ ಮುಂದಿನ ಕಾಲಿಂಗ್ ಬೆಲ್ ಒತ್ತಿದ್ದಾರೆ. ಮಾಲಿಕ ಸುಲೈಮಾನ್ ಹಾಜಿಯವರು ಬಾಗಿಲು ತೆರೆಯುತ್ತಿದ್ದಂತೆ ಐಡಿ ಕಾರ್ಡ್ ತೋರಿಸುತ್ತಾ ನಾವು ಇ.ಡಿ.ಅಧಿಕಾರಿಗಳೆಂದು ಪರಿಚಯಿಸಿದ್ದಾರೆ. ಅಧಿಕಾರಿಗಳೆಂಬ ವಿಶ್ವಾಸದಲ್ಲಿ ಒಳಗಡೆ ಕರೆದು ಮಾತನಾಡಿದ್ದಾರೆ. ಆ ಸಮಯ ತಂಡದ ಓರ್ವ ಕನ್ನಡದಲ್ಲಿ ಮಾತನಾಡುತ್ತಾ ಬೀಡಿ ಉದ್ಯಮ ಮತ್ತು ವ್ಯವಹಾರದ ಬಗ್ಗೆ ಪ್ರಶ್ನೆಗಳ ಸುರಿಮಳೆ ಹರಿಸಿದ್ದಾನೆ.

ಅಧಿಕಾರಿಗಳೆಂಬ ನಂಬಿಕೆಯಿಂದ ಮಾಲಿಕ ಸುಲೈಮಾನ್ ಹಾಜಿಯವರು “ನನ್ನ ಲೆಕ್ಕ ಪರಿಶೋಧಕರು ಇದ್ದಾರೆ. ನಾಳೆ ಮಾತನಾಡುವ” ಎಂದು ಹೇಳಿದ್ದಾರೆ. ಅದೆಲ್ಲ ಬೇಡ..ಹಣ ಮತ್ತು ಚಿನ್ನಾಭರಣ ಎಷ್ಟಿದೆ ಎಂದು ತೋರಿಸಿ ಎನ್ನುತ್ತಾ ಮನೆಯವರ ಮೊಬೈಲ್ ಪಡೆದುಕೊಂಡು ತಪಾಸಣೆ ಆರಂಭಿಸಿದ್ದಾರೆ. ಮುಂದಿನ ಮತ್ತು ಹಿಂದಿನ ಬಾಗಿಲು ಬಂದ್ ಮಾಡಿದ ತಂಡ ಮನೆಯವರನ್ನೆಲ್ಲಾ ಒಂದು ಕಡೆ ಕುಳ್ಳಿರಿಸಿ ಸಂಪೂರ್ಣ ತಪಾಸಣೆ ನಡೆಸಿದೆ.

ಆ ಸಂದರ್ಭ ಮೂಟೆಗಟ್ಟಲೆ ಹಣ ಚಿನ್ನಾಭರಣ ಪತ್ತೆಯಾಗಿದೆ. ಸುಮಾರು ಎರಡೂವರೆ ಗಂಟೆಗಳ ಕಾಲ ತಪಾಸಣೆ ನಾಟಕ ಮಾಡಿದ ದರೋಡೆಕೋರರು ಮೊಬೈಲಲ್ಲಿ ಹಿಂದಿ ಭಾಷೆ ಮಾತನಾಡುತ್ತಾ ನಂಬಿಕೆ ಹುಟ್ಟಿಸಿದ್ದಾರೆ. ತಪಾಸಣೆ ಮುಗಿದು ಕೋಟಿ ಕೋಟಿ ಹಣ ಗೋಣಿಗೆ ತುಂಬಿಸಿದ ನಕಲಿ ಅಧಿಕಾರಿಗಳ ತಂಡ ಚಿನ್ನಾಭರಣಗಳನ್ನು ಅಲ್ಲೇ ಬಿಟ್ಟು ಮೂರು ಮೊಬೈಲುಗಳನ್ನು ಪಡೆದು ಎರ್ಟಿಗಾ ಕಾರಿನಲ್ಲಿ ತೆರಳಿದೆ.

ನಮ್ಮ ಜೊತೆ ಹಿಂದಿನಿಂದ ಬನ್ನಿ, ತನಿಖೆ ನಡೆದ ಬಳಿಕ ಮೊಬೈಲು ಕೊಡುತ್ತೇವೆಂದು ಹೇಳಿದ್ದಾರೆ. ಅವರ ಮಾತು ನಂಬಿದ ಸಿಂಗಾರಿ ಮಾಲಿಕನ ಪುತ್ರ ಆಕ್ಟಿವಾದಲ್ಲಿ ಮತ್ತು ಹಾಜಿ ಸುಲೈಮಾನ್ ಕಾರಿನಲ್ಲಿ ಹಿಂಬಾಲಿಸಿದ್ದಾರೆ. ನಾರ್ಶದಿಂದ ಬೋಳಂತೂರು ರಸ್ತೆ ಮೂಲಕ ಕಲ್ಲಡ್ಕದ ಕಡೆಗೆ ಎರ್ಟಿಗಾ ಸಂಚರಿಸಿದೆ. ಬೋಳಂತೂರು ತುಳಸೀವನ ಭಜನಾ ಮಂದಿರ ತಲುಪುತ್ತಿದ್ದಂತೆ ಎರ್ಟಿಗಾ ಶರವೇಗದಲ್ಲಿ ಸಾಗಿದೆ. ಕಾರು ಕಾಣದೇ ಇದ್ದಾಗ ಸಿಂಗಾರಿ ಪುತ್ರ ಕರೆ ಮಾಡಲು ಮುಂದಾಗಿದ್ದಾರೆ. ಆ ಸಮಯ ಸ್ವಿಚ್ಡ್ ಆಫ್ ಬಂದ ಕಾರಣ ಸಂಶಯ ಮೂಡುವಂತಾಗಿದ್ದು ಕಲ್ಲಡ್ಕ ತಲುಪಿ ಹುಡುಕಾಡಿದ್ದರೂ ಖದೀಮರ ಎರ್ಟಿಗಾ ನಾಪತ್ತೆಯಾಗಿದೆ.

ಅಷ್ಟರಲ್ಲಿ ಬಂದವರು ನಕಲಿ ಅಧಿಕಾರಿಗಳೆಂಬುದು ಸಿಂಗಾರಿ ಮಾಲಿಕನಿಗೆ ಮತ್ತು ಪುತ್ರನಿಗೆ ಅರಿವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನ ರಾತ್ರಿಯೇ ಜಮಾಯಿಸಿದ್ದಾರೆ. ಪೊಲೀಸರೂ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಆದರೆ ಇ.ಡಿ.ಮುಖವಾಡ ತೊಟ್ಟ ನಟೋರಿಯಸ್ ದರೋಡೆಕೋರರು ಮಾತ್ರ ತಮ್ಮ ಅಡ್ಡೆ ಸೇರುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು ಜಿಲ್ಲಾ ಎಸ್ಪಿ, ಬಂಟ್ವಾಳ ಡಿವೈಎಸ್ಪಿಯವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಗೊಂಡಿದೆ.