ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸಂಘಟನೆಯಲ್ಲಿ ಭಾರಿ ಬದಲಾವಣೆಗಳಾಗುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಹೈಕಮಾಂಡ್ ವಿಜಯೇಂದ್ರ ಅವರ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದೆ. 19ಕ್ಕೂ ಹೆಚ್ಚು ರಾಜ್ಯಗಳ ಅಧ್ಯಕ್ಷರ ಬದಲಾವಣೆಯ ನಡುವೆಯೂ ವಿಜಯೇಂದ್ರ ಕುರ್ಚಿ ಅಲುಗಾಡದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಕೇವಲ ಅಧ್ಯಕ್ಷ ಸ್ಥಾನದ ಚರ್ಚೆಯಷ್ಟೇ ಅಲ್ಲದೆ, ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹೊಸ ರಾಷ್ಟ್ರೀಯ ಅಧ್ಯಕ್ಷರು ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯ ಬಿಜೆಪಿ ನಾಯಕತ್ವದಲ್ಲಿಯೂ ಬದಲಾವಣೆಗಳು ಬರುತ್ತವೆ ಎಂಬ ಮಾತುಗಳು ಹಲವು ತಿಂಗಳುಗಳಿಂದ ಕೇಳಿ ಬಂದಿದ್ದವು.
ಇದೀಗ 45 ವರ್ಷದ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಇದರಿಂದ ಇಷ್ಟು ದಿನ ಕಿರಿಯ ಕಿರಿಯ ಎಂದು ಹೇಳಿ ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ವಿಜಯೇಂದ್ರ ಅವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ನಾಯಕರ ಸ್ಪಷ್ಟ ಸಂದೇಶ ನೀಡಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆಗಳಲ್ಲಿ ಅಂದರೆ ಸುಮಾರು 28 ತಿಂಗಳ ನಂತರ ನಡೆಯುವ ವಿಧಾನಸಭಾ ಚುನಾವಣೆಯಲ್ಲೂ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದು, ಇದು ಹೈಕಮಾಂಡ್ ವಿಜಯೇಂದ್ರ ಅವರ ನಾಯಕತ್ವದ ಮೇಲಿನ ವಿಶ್ವಾಸವನ್ನು ಪ್ರತಿಬಿಂಬಿಸಿದಂತಾಗಿದೆ
