ಮಂಗಳೂರಿನ ಹೃದಯಬಾಗದಲ್ಲಿ ದಿನದ ಅತ್ಯಮೂಲ್ಯ (ಪ್ರೈಮ್ ಟೈಮ್) ವೇಳೆಯಲ್ಲಿ “ತಲಾ 15 ನಿಮಿಷದಂತೆ ಒಟ್ಟು 11 ಬಾರಿ ಸಂಚಾರ ದಿಗ್ಬಂಧನ! ” ರೈಲ್ವೆ ಕಾರ್ಯಾಚರಣೆಯ ಹೆಸರಿನಲ್ಲಿ ನಗರಕ್ಕೆ ದಿಗ್ಬಂಧನ!

ಕರಾವಳಿ

✍️. ಇಸ್ಮಾಯಿಲ್ ಸುನ್ನಾಲ್, ವಕೀಲರು ಮಂಗಳೂರು.

ಮಂಗಳೂರು: ಒಂದು ಕಡೆ ‘ಸ್ಮಾರ್ಟ್ ಸಿಟಿ’ಯ ಕನಸು, ಇನ್ನೊಂದು ಕಡೆ ದಶಕಗಳಷ್ಟು ಹಳೆಯದಾದ ರೈಲ್ವೆ ಗೇಟ್ ಸಮಸ್ಯೆ. ಮಂಗಳೂರಿನ ಹೃದಯಭಾಗದಲ್ಲಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ (LC Gate) ಈಗ ನಗರದ ಸಂಚಾರ ವ್ಯವಸ್ಥೆಯ ಪಾಲಿಗೆ ಕಂಠಕವಾಗಿ ಪರಿಣಮಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ನಾಗರಿಕರು ತಮ್ಮ ಅಮೂಲ್ಯ ಸಮಯವನ್ನು ರಸ್ತೆಯಲ್ಲೇ ಕಳೆಯುವಂತಾಗಿದೆ.

ಅಂಕಿಅಂಶಗಳ ಆಘಾತಕಾರಿ ಸತ್ಯ
ರೈಲ್ವೆ ಇಲಾಖೆ ಪ್ರಕಟಿಸಿದ ವೇಳಾ ಪಟ್ಟಿ ಪ್ರಕಾರವೇ, ಈ ರೈಲ್ವೆ ಗೇಟ್‌ ಕೇವಲ ಹನ್ನೆರಡು (12) ಗಂಟೆಗಳ ಅವಧಿಯಲ್ಲಿ 11 ಬಾರಿ ಮುಚ್ಚಲ್ಪಡುತ್ತದೆ. ಪ್ರತಿಯೊಂದು ಬಾರಿಯೂ 15 ನಿಮಿಷಗಳಂತೆ (ಬಸವನ ಹುಳದ ವೇಗದಲ್ಲಿ ಚಲಿಸುವ ಟ್ರೈನ್ ಎಂದು ಬೇರೆ ಹೇಳಬೇಕಾಗಿಲ್ಲ) ರೇಲ್ವೆ ಗೇಟನ್ನು ಬಂದು ಮಾಡಲಾಗುತ್ತದೆ. ಗಂಟೆಗೆ 5 ರಿಂದ 10 ಕಿಲೀಮೀಟರ್ ವೇಗದಲ್ಲಿ ನಿಧಾನವಾಗಿ ಚಲಿಸುವ ಈ ಟ್ರೈನುಗಳು ಬರುವ 5 ನಿಮಿಸಹಗಳ ಮುಂಚಿತವಾಗಿ ಗೇಟು ಬಂದು ಮಾಡಲ್ಪಟ್ಟು, ರೈಲು ಹಾದು ಹೋದ 3 ನಿಮಿಷಗಳ ಬಳಿಕ ಗೇಟು ತೆರೆದುಕೊಳ್ಳುತ್ತದೆ. ಈ ನಡುವೆ ರಸ್ತೆಯ ಮಧ್ಯೆ ಅಳವಳಿದಿಸಲಾದ ಬ್ಯಾರಿಕೇಡ್ ನ ಮತ್ತೂಂದು ಬದಿಯಿಂದ ದುಮ್ಮಿಕ್ಕಿ ಬರುವ ದ್ವಿಚಕ್ರ ವಾಹನಗಳು ಎಗ್ಗಿಲ್ಲದ್ದಂತೆ ಸಂಚರಿಸಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸುತ್ತದೆ. ಈ ಕಾರ್ಯಾಚರಣೆ ನಗರದ ಜನ ಜೀವನವನ್ನೇ ಅಸ್ತವ್ಯಸ್ತಗೊಳಿಸಿದೆ:

ದಿನದ ಅತ್ಯಮೂಲ್ಯ (ಪ್ರೈಮ್ ಟೈಮ್) ವೇಳೆಯಲ್ಲಿ ಕೇವಲ ಹನ್ನೆರಡು (12) ಗಂಟೆಗಳ ಅವಧಿಯಲ್ಲಿ 11 ಬಾರಿ ಸಂಚಾರ ಸ್ಥಗಿತ:
ದಿನದ ಅತ್ಯಮೂಲ್ಯ (ಪ್ರೈಮ್ ಟೈಮ್) ವೇಳೆಯಲ್ಲಿ ಕೇವಲ ಹನ್ನೆರಡು (12) ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 11 ಬಾರಿ ಈ ಗೇಟ್ ಮುಚ್ಚಲ್ಪಡುತ್ತಿದೆ.

ಅಲ್ಪಾವಧಿಯ ಅಂತರ (Short Gaps): ಅತ್ಯಂತ ಅಪಾಯಕಾರಿ ಸಂಗತಿಯೆಂದರೆ, ಒಮ್ಮೆ ಗೇಟ್ ತೆರೆದು ಸಂಚಾರ ಸುಗಮವಾಗುವ ಮೊದಲೇ, ಅಂದರೆ ಕೆಲವೇ ನಿಮಿಷಗಳ ಅಂತರದಲ್ಲಿ ಮತ್ತೆ ಗೇಟ್ ಬೀಳುತ್ತಿದೆ. ಇದರಿಂದ ಟ್ರಾಫಿಕ್ ಜಾಮ್ ಎಂದಿಗೂ ಪೂರ್ಣವಾಗಿ ಕ್ಲಿಯರ್ ಆಗುತ್ತಿಲ್ಲ.
ಕೇವಲ ಹನ್ನೆರಡು (12) ಗಂಟೆಗಳ ಅವಧಿಯಲ್ಲಿ 3+ ಗಂಟೆಗಳ ನಷ್ಟ: ಸರಾಸರಿ 15 ನಿಮಿಷದಂತೆ 11 ಬಾರಿ ಗೇಟ್ ಹಾಕಿದರೆ, ದಿನಕ್ಕೆ ಕನಿಷ್ಠ 165 ರಿಂದ 180 ನಿಮಿಷಗಳು ಸಾರ್ವಜನಿಕ ರಸ್ತೆ ಸಂಪೂರ್ಣ ಬಂದ್ ಆಗಿರುತ್ತದೆ.
ಆರ್ಥಿಕ ಮತ್ತು ಇಂಧನ ನಷ್ಟ: ಸಾವಿರಾರು ವಾಹನಗಳು ಎಂಜಿನ್ ಆಫ್ ಮಾಡದೆ ಕಾಯುವುದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಇಂಧನ ವ್ಯರ್ಥವಾಗುತ್ತಿದ್ದು, ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ.

ಶಂಟಿಂಗ್ (Shunting) ಅನಿವಾರ್ಯವೇ?
ಈ ಗೇಟ್ ಪದೇ ಪದೇ ಮುಚ್ಚಲು ಮುಖ್ಯ ಕಾರಣ ಪ್ರಯಾಣಿಕರ ರೈಲುಗಳಲ್ಲ. ಮಂಗಳೂರು ಸೆಂಟ್ರಲ್‌ನಿಂದ ಗೂಡ್ಸ್ ಶೆಡ್‌ಗೆ ರೈಲು ಬೋಗಿಗಳನ್ನು ಶುಚಿಗೊಳಿಸಲು ಮತ್ತು ಎಂಜಿನ್ ಬದಲಾಯಿಸಲು (Shunting) ಮಾಡುವ ಕಾರ್ಯಾಚರಣೆಗಳಿಗಾಗಿ ಈ ರಸ್ತೆಯನ್ನು ಬಳಸಲಾಗುತ್ತಿದೆ.

ಪ್ರಶ್ನೆ ಏನೆಂದರೆ: ರೈಲ್ವೆ ಇಲಾಖೆಯ ಈ ಆಂತರಿಕ ನಿರ್ವಹಣಾ ಕಾರ್ಯಕ್ಕಾಗಿ ಇಡೀ ನಗರದ ಜನಜೀವನವನ್ನು ಕೇವಲ ಹನ್ನೆರಡು (12) ಗಂಟೆಗಳ ಅವಧಿಯಲ್ಲಿ 11 ಬಾರಿ ಬಲಿ ಕೊಡಬೇಕೆ?

ಜೀವಕ್ಕೆ ಸಂಚಕಾರ

  1. ಅಂಬ್ಯುಲೆನ್ಸ್ ಸಮಸ್ಯೆ: ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಹೋಗುವ ಅಂಬ್ಯುಲೆನ್ಸ್‌ಗಳು ಈ 11 ಗೇಟ್‌ನ ಸುಳಿಯಲ್ಲಿ ಸಿಲುಕುತ್ತಿವೆ. ತುರ್ತು ಚಿಕಿತ್ಸೆಯ ಅವಧಿಯಲ್ಲಿ (Golden Hour) ಸಂಭವಿಸುವ ಈ ವಿಳಂಬಕ್ಕೆ ಹೊಣೆ ಯಾರು?
  2. ವಿದ್ಯಾರ್ಥಿಗಳ ಗೋಳು: ಶಾಲೆ ಮತ್ತು ಕಾಲೇಜುಗಳಿಗೆ ಹೋಗುವ ಸಾವಿರಾರು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತಲುಪಲಾಗದೆ ಪರೀಕ್ಷೆ ಮತ್ತು ತರಗತಿಗಳಿಗೆ ಹಾಜರಾಗಲು ಪರದಾಡುತ್ತಿದ್ದಾರೆ.

ನಮ್ಮ ಆಗ್ರಹಗಳು (Demands)
ನಾವು ದಕ್ಷಿಣ ರೈಲ್ವೆ (ಪಾಲಕ್ಕಾಡ್ ವಿಭಾಗ) ಮತ್ತು ಜಿಲ್ಲಾಡಳಿತವನ್ನು ಈ ಕೆಳಗಿನಂತೆ ಒತ್ತಾಯಿಸುತ್ತೇವೆ:

  1. ಶಂಟಿಂಗ್ ಸ್ಥಳಾಂತರ: ರೈಲುಗಳ ನಿರ್ವಹಣೆ ಮತ್ತು ಎಂಜಿನ್ ಬದಲಾವಣೆಯನ್ನು ನಗರದ ಹೊರವಲಯದ ರೈಲ್ವೆ ಯಾರ್ಡ್‌ಗಳಿಗೆ ಸ್ಥಳಾಂತರಿಸಿ.
  2. ಪೀಕ್ ಅವರ್ ನಿರ್ಬಂಧ: ಬೆಳಿಗ್ಗೆ (8:30 – 11:00) ಮತ್ತು ಸಂಜೆ (4:30 – 7:30) ಸಂಚಾರ ದಟ್ಟಣೆ ಇರುವ ಸಮಯದಲ್ಲಿ ರೈಲ್ವೆ ಆಂತರಿಕ ಕಾರ್ಯಾಚರಣೆಗಳನ್ನು ಸಂಪೂರ್ಣ ನಿಷೇಧಿಸಿ.
  3. ಮೇಲ್ಸೇತುವೆ/ಕೆಳಸೇತುವೆ (ROB/RUB): ಕಾರ್ಯಾಚರಣೆ ನಿಲ್ಲಿಸಲು ಸಾಧ್ಯವಿಲ್ಲದಿದ್ದರೆ, ಯುದ್ಧೋಪಾದಿಯಲ್ಲಿ ಮೇಲ್ಸೇತುವೆ ಅಥವಾ ಕೆಳಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ.

ಜನಪ್ರತಿನಿಧಿಗಳ ಗಮನಕ್ಕೆ
ಮಂಗಳೂರಿನ ನಾಗರಿಕರ ತಾಳ್ಮೆ ಮಿತಿ ಮೀರಿದೆ. ನಾವು ಆಯ್ಕೆ ಮಾಡಿ ಕಳುಹಿಸಿದ ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಈ ಕೂಡಲೇ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ “11-ಗೇಟ್ ಸಂಚು”ವಿನಿಂದ ನಗರಕ್ಕೆ ಮುಕ್ತಿ ನೀಡಬೇಕು.