ರಾಜಕೀಯ ವ್ಯಕ್ತಿಗಳು ಜಾತಿ ಪ್ರೇಮ ತೋರಿಸುವುದು ಸಹಜ, ಆದರೆ ಅದುವೇ ರಾಜಕೀಯ ಆಗಬಾರದು. ಇತ್ತೀಚೆಗೆ ಮೂಡಬಿದ್ರೆಯ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಮೂಡಬಿದ್ರೆ ಆಯೋಜಿಸಿದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು ಮಾಡಿರುವ ಭಾಷಣ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರು ರಾಜಕಾರಣದಲ್ಲಿ ಬೆಳೆದು ಬಂದಿರುವುದು ಅಹಿಂದ ಸಮುದಾಯಗಳ ಮತಗಳಿಂದ. ಅಲ್ಪಸಂಖ್ಯಾತ ವರ್ಗ ಬಿಟ್ಟರೆ ಬೇರೆ ಸಮುದಾಯಗಳು ಹೋಲ್ ಸೇಲ್ ಆಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುವುದು ವಿರಳ. ಅದರಲ್ಲೂ ಬಿಲ್ಲವ ಸಮುದಾಯದ ಬಹುತೇಕ ಮತಗಳು ಬಿಜೆಪಿ ಪರ ಚಲಾವಣೆಯಾಗುತ್ತಿದೆ. ಒಂದಿಷ್ಟು ಶೇಕಡಾ ಮಾತ್ರ ಕಾಂಗ್ರೆಸಿಗೆ ವಾಲಿದೆ ಅಷ್ಟೇ. ಕರಾವಳಿ ಭಾಗದಲ್ಲಿ ಬಿಜೆಪಿ ಸದೃಢವಾಗಿ ಬೆಳವಣಿಗೆ ಕಂಡಿರುವ ಹಿಂದೆ ಬಿಲ್ಲವ ಸಮುದಾಯದ ಮತಗಳ ಪಾತ್ರ ಗಣನೀಯವಾಗಿದೆ. ಆದರೆ ಕರಾವಳಿ ಭಾಗದಲ್ಲಿ ಬಿಲ್ಲವ ನಾಯಕರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಅಧಿಕಾರದ ಮೇಲೆ ಅಧಿಕಾರ ಪಡೆಯುತ್ತಿದ್ದರೆ, ಆ ನಾಯಕರ ಹಿಂದೆ ಬಿಲ್ಲವ ಸಮುದಾಯ ನಿಂತಿಲ್ಲ ಅನ್ನುವುದೇ ದೊಡ್ಡ ದುರ್ದೈವ. ಓರ್ವ ಕಾಂಗ್ರೆಸ್ ಬಿಲ್ಲವ ನಾಯಕನ ಹಿಂದೆ ಮುಂದೆ ಸುತ್ತಾಡಲು ಹತ್ತಾರು ಅಲ್ಪಸಂಖ್ಯಾತ ಕಾರ್ಯಕರ್ತರು ಬೇಕು, ಆದರೆ ಅವರದೇ ಸಮುದಾಯದ ಹತ್ತಾರು ಕಾರ್ಯಕರ್ತರನ್ನು ಸೃಷ್ಟಿಸದಿರುವುದು ವಿಪರ್ಯಾಸ. ಅಧಿಕಾರ ಪಡೆಯಲಷ್ಟೇ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ ವಿನಃ ಬಿಲ್ಲವ ಮತ ಬ್ಯಾಂಕ್ ಸೃಷ್ಟಿಸಿಲ್ಲ ಅನ್ನುವುದು ಅಷ್ಟೇ ಸತ್ಯ.
ಇತ್ತೀಚೆಗೆ ಮೂಡಬಿದ್ರೆಯಲ್ಲಿ ಬಿಲ್ಲವ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಪಕ್ಷದಿಂದ ವಿವಿಧ ಹುದ್ದೆ ಅಲಂಕರಿಸಿ, ನಿಗಮ ಮಂಡಳಿಯಲ್ಲೂ ಹುದ್ದೆ ಪಡೆದಿರುವ ಕಾಂಗ್ರೆಸ್ ಪಕ್ಷದ ಕರಾವಳಿ ಭಾಗದ ಬಿಲ್ಲವ ನಾಯಕಿಯೊಬ್ಬರು ಬಿಲ್ಲವ ಸಮುದಾಯದ ವ್ಯಕ್ತಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದಲ್ಲಿ ಬೇಕಾದರೆ ನಿಲ್ಲಲಿ, ಅವರನ್ನು ಗೆಲ್ಲಿಸುವುದು ಬಿಲ್ಲವ ಸಮುದಾಯದ ಕರ್ತವ್ಯ ಎಂದು ಬಹಿರಂಗ ವೇದಿಕೆಯಲ್ಲೇ ಭಾಷಣ ಮಾಡಿದ್ದಾರೆ. ಈ ಮಹಿಳಾ ನಾಯಕಿ ಇವತ್ತು ಇಷ್ಟು ಎತ್ತರಕ್ಕೆ ಏರಿರುವುದು ಕಾಂಗ್ರೆಸ್ ಪಕ್ಷದ ಕಾರಣದಿಂದಲೇ. ಉಂಡ ಮನೆಗೆ ದ್ರೋಹ ಬಗೆಯುವುದು ಅನ್ನುವುದು ಇದೇ ಕಾರಣಕ್ಕಾಗಿ ಇರಬಹುದು.
ಈ ಮಹಿಳಾ ನಾಯಕಿ ಮುಂದಿನ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಾ ತಿರುಗಾಡುತ್ತಿದ್ದು, ಈಕೆಯ ವಿರುದ್ಧ ಮುಸ್ಲಿಂ ಅಥವಾ ಇನ್ನಾವುದೇ ಸಮುದಾಯದ ವ್ಯಕ್ತಿ ಬೇರೊಂದು ಪಕ್ಷದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಆ ಸಮುದಾಯ ತಮ್ಮದೇ ಸಮುದಾಯದ ವ್ಯಕ್ತಿಗೆ ಮತ ಹಾಕಿ ಎಂದು ಫರ್ಮಾನು ಹೊರಡಿಸಿದರೆ ಈ ಮಹಿಳಾ ಮಣಿಗೆ ಇಡುಗಂಟು ಇರಬಹುದೇ?
ಜಾತಿಯ ಕಾರಣಕ್ಕೆ ಸಮುದಾಯ ಒಗ್ಗಟ್ಟಾಗಿ ಮತ ಹಾಕಿ ಅನ್ನುವುದು ಅದು ಪಕ್ಷ ಯಾವುದೇ ಇರಲಿ ಅನ್ನುವ ಹೇಳಿಕೆ ಜಾತ್ಯತೀತ ಕಾಂಗ್ರೆಸ್ ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಅನ್ನುವ ಮಾತುಗಳು ಪಕ್ಷದ ಹಲವು ಕಾರ್ಯಕರ್ತರೆಡೆಯಲ್ಲಿ ಕೇಳಿ ಬರುತ್ತಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಪಕ್ಷದ ವಿವಿಧ ಹುದ್ದೆ ಅಲಂಕರಿಸುವ ನಾಯಕಿಯೊಬ್ಬರ ಮಾತುಗಳು ಒಪ್ಪುವಂತದ್ದಲ್ಲ ಅನ್ನುವುದು ಸ್ವ ಸಮುದಾಯದವರಿಂದಲೇ ಕೇಳಿ ಬರುತ್ತಿದೆ. ಒಟ್ಟಾರೆ ತಾನು ಪ್ರಚಾರದಲ್ಲಿ ಇರಬೇಕೆನ್ನುವ ಕಾರಣಕ್ಕಾಗಿ ಇಂತಹ ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಅನ್ನುವ ಗುಸು ಗುಸು ಗಳು ಇವೆ. ಸಂಘ ಪರಿವಾರದ ವಿರುದ್ಧ ತೊಡೆ ತಟ್ಟಿ ಚಪ್ಪಾಳೆ ಗಿಟ್ಟಿಸುವ ಈ ನಾಯಕಿಯು ಪಕ್ಷ ಯಾವುದೇ ಇರಲಿ, ಸಮುದಾಯದ ವ್ಯಕ್ತಿಯನ್ನು ಗೆಲ್ಲಿಸಿ ಎಂದು ಕರೆ ಕೊಡುತ್ತಿರುವುದು, ಇವರ ಸೈದ್ಧಾಂತಿಕ ಬದ್ಧತೆ ಏನು ಅನ್ನುವ ಮಾತುಗಳು ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಕೇವಲ ಬಿಲ್ಲವರೆ ಬಿಲ್ಲವರಿಗೆ ಮತ ಹಾಕಿದರೆ ಗೆದ್ದು ಬರಲು ಸಾಧ್ಯವೇ ಎಂಬುದು ಯಕ್ಷ ಪ್ರಶ್ನೆ.
