ದ.ಕ ಜಿಲ್ಲೆ: ಬಂಟರದ್ದೇ ಪಾರುಪತ್ಯ; ಜಿಲ್ಲೆಯ ನಾಲ್ಕು ಮಂದಿ ಶಾಸಕರು, ಒಬ್ಬ ಎಂ ಎಲ್ ಸಿ, ಒಬ್ಬ ಸಂಸದ ಎಲ್ಲಾ ಬಂಟರು.

ಕರಾವಳಿ

ಬಿಲ್ಲವರು-ಬ್ಯಾರಿಗಳು ತಲವಾರು ಝಳಪಿಸಿ ಹೊಡೆದಾಡಿಕೊಂಡದರಲ್ಲಿ ನಂಬರ್ ಒನ್.!

ಇದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ಸುದ್ದಿ. ಜಿಲ್ಲೆಯ ಎರಡು ಪ್ರಬಲ ಪಕ್ಷವಾಗಿರುವ ಕಾಂಗ್ರೆಸ್-ಬಿಜಿಪಿಯಲ್ಲಿ ಗುತ್ತಿನ ಬಂಟರದ್ದೇ ಪಾರುಪತ್ಯ. ನೀವು ಪ್ರತಿಯೊಂದು ವಿಧಾನಸಭಾ ಕ್ಷೇತ್ರವನ್ನೊಮ್ಮೆ ಕೂಲಂಕಷವಾಗಿ ನೋಡಿದಾಗ ನಿಮಗೆ ಖಂಡಿತ ಅರಿವಿಗೆ ಬರಲಿದೆ. ಬಿಲ್ಲವ-ಬ್ಯಾರಿಗಳಲ್ಲಿ ರಾಜಕೀಯ ಪ್ರಜ್ಞೆ, ತಮ್ಮ ಸಮುದಾಯದ ಅಭ್ಯರ್ಥಿಗಳನ್ನು ಗೆಲ್ಲಿಸುವ ಚಾಕಚಕ್ಯತೆ ಇಲ್ಲದರಿಂದ, ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಅವಕಾಶವನ್ನು ಬಂಟರು ಸದುಪಯೋಗಪಡಿಸಿಕೊಂಡು ಮೆರೆಯುತ್ತಿದ್ದಾರೆ. ಬಿಲ್ಲವ-ಬ್ಯಾರಿಗಳು ಪಕ್ಷಕ್ಕೆ ಹೋಲ್ ಸೇಲ್ ಮಾರಾಟ ಆಗಿರುವುದರಿಂದ ಒಂದು ಸಣ್ಣ ಅವಕಾಶಕ್ಕಾಗಿ ಬಂಟರ ಬಾಗಿಲು ಬಡಿಯಬೇಕಾದ ಅನಿವಾರ್ಯತೆ ಬಂದೊಡಗಿರುವುದು ದುರಂತವೇ ಸರಿ.

ನೀವು ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರವನ್ನೊಮ್ಮೆ ಕಣ್ಣು ಹಾಯಿಸಿ ನೋಡಿದಾಗ ಬಂಟರ ಪಾರುಪತ್ಯ ಎಷ್ಟಿದೆ ಎಂಬುದು ಅರಿವಿಗೆ ಬರುತ್ತದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿಯಲ್ಲಿ ಬಂಟರದ್ದೇ ದರ್ಬಾರ್. ಪುತ್ತೂರಿನಲ್ಲಿ ಕೂಡ ಶಾಸಕರಾಗಿರುವುದು ಬಂಟ ಅಶೋಕ್ ರೈ. ಸುಳ್ಯ ಮೀಸಲು ಕ್ಷೇತ್ರವಾಗಿರುವುದರಿಂದ ಸೈಲೆಂಟಾಗಿದೆ. ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಬಿಲ್ಲವ ಬಲ ವನ್ನು ನಂಬಿಕೊಂಡರೂ ಅಲ್ಲಿ ಬಿಜೆಪಿ ಬಂಟ ಪೂಂಜಾ ಶಾಸಕರಾಗಿದ್ದಾರೆ. ಮೂಡುಬಿದಿರೆಯಲ್ಲಿ ಬಿಜೆಪಿ ಬಿಲ್ಲವ ಸಮುದಾಯಕ್ಕೆ ಮಣೆ ಹಾಕಿದೆ; ಕಾಂಗ್ರೆಸ್ ಅಲ್ಲಿ ಬಂಟ ಶಕ್ತಿಯನ್ನೇ ನೆಚ್ಚಿಕೊಂಡಿದೆ. ಮಂಗಳೂರು ಉತ್ತರದಲ್ಲಿ ಬಿಜೆಪಿ ಬಂಟರದ್ದೇ ಪಾರುಪತ್ಯ. ಬ್ಯಾರಿಗಳಿಗೆ ಉಳ್ಳಾಲ, ಬಿಲ್ಲವರಿಗೆ ಮೂಡುಬಿದಿರೆ ಬಿಟ್ಟು ಬೇರೆ ಕಡೆ ತಮ್ಮ ಅವಕಾಶವನ್ನು ಬಳಸಿಕೊಳ್ಳಲು ವಿಫಲರಾಗಿರುವುದು ದುರಂತವೇ ಸರಿ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ, ಬ್ಯಾರಿಗಳ ಸಂಖ್ಯೆಯೇ ಗಣನೀಯವಾಗಿ ಇದ್ದರೂ ಎರಡು ಸಮಾಜದಿಂದ ಶಾಸಕರಿರುವುದು ಬರೀ ಎರಡು. ಬಂಟರ ಜನಸಂಖ್ಯೆ ಬೆರಳೆಣಿಕೆಯಷ್ಟು ಇದ್ದರೂ ಜಿಲ್ಲೆಯಲ್ಲಿ ಈಗಿರುವ ಬಂಟ ಶಾಸಕರ ಸಂಖ್ಯೆ ನಾಲ್ಕು, ಬಂಟ ಎಂಎಲ್ಸಿ ಒಂದು. ಬಂಟ ಎಂ.ಪಿ ಒಂದು. ಆದರೆ ಬಿಲ್ಲವ-ಬ್ಯಾರಿಗಳು ಸಜ್ಜಿಗೆ ಬಜಿಲಿಗೆ ಮಾತ್ರ ಸೀಮಿತ. ಅಧಿಕಾರದ ಎಂಟೆದೆ ಬಂಟರಿಗೆ ಮಾತ್ರ.

ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಲ್ಲವರಿಗೆ ಟಿಕೆಟ್ ಕೊಟ್ಟರೆ, ಬಿಜೆಪಿ ಬಂಟ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಬಿಲ್ಲವ ಸಮುದಾಯ ಗಣನೀಯ ಸಂಖ್ಯೆಯಲ್ಲಿ ಇರುವುದರಿಂದ ತಮ್ಮ ಸಮುದಾಯದ ಅಭ್ಯರ್ಥಿಯನ್ನು ಗೆಲ್ಲಿಸುವ ಅವಕಾಶ ಇದ್ದರೂ, ಅದನ್ನು ಮಾಡದೆ ಬಿಜೆಪಿಯ ಬಂಟ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿತ್ತು. ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಬಿಲ್ಲವ ಮತಗಳೇ ನಿರ್ಣಾಯಕ. ಆದರೂ ಈವರೆಗೂ ಒಂದೇ ಒಂದು ಬಿಲ್ಲವ ಅಭ್ಯರ್ಥಿಗೆ ಸ್ಥಾನ ನೀಡಿಲ್ಲ. ಇತ್ತ ಕಾಂಗ್ರೆಸ್ ಪಕ್ಷಕ್ಕೆ ಬ್ಯಾರಿಗಳೇ ನಿರ್ಣಾಯಕ ಮತದಾರರು. ಆದರೆ ಒಮ್ಮೆಯೂ ಟಿಕೆಟ್ ನೀಡಿಲ್ಲ. ಎರಡು ಸಮುದಾಯದ ಸಂಖ್ಯೆಯೇ ಹೆಚ್ಚಿದ್ದರೂ, ಕಡಿಮೆ ಸಂಖ್ಯೆಯಲ್ಲಿರುವ ಬಂಟರು ಕಳೆದ ಏಳೆಂಟು ಅವಧಿಗಳಿಂದ ಸಂಸದರಾಗಿ ಆಯ್ಕೆಯಾಗುತ್ತಿದ್ದಾರೆ. ಮಿರಾಕಲ್ ಅಂದರೆ ಇದೇ ಅಲ್ಲವೇ?

ಇನ್ನೂ ಬಿಜೆಪಿ-ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಸಂಘಟನೆಯಿಂದ ಹಿಡಿದು ಯೂತ್ ಕಾಂಗ್ರೆಸ್, ಯುವ ಮೋರ್ಚಾದಲ್ಲೂ ಬಂಟರದ್ದೇ ಪಾರುಪತ್ಯ. ಪಕ್ಷದ ಪ್ರಮುಖ ಆಯಕಟ್ಟಿನ ಜಾಗಗಳಲ್ಲಿ ಬಂಟರಿಗೆ ಅವಕಾಶ. ಬಿಲ್ಲವ-ಬ್ಯಾರಿಗಳು ನಾಮಕಾವಸ್ಥೆ ಸದಸ್ಯತ್ವಕ್ಕೆ ಮಾತ್ರ ಸೀಮಿತ. ಕಡಿಮೆ ಸಂಖ್ಯೆಯಲ್ಲಿರುವ ಕ್ರೈಸ್ತರು ಕಾಂಗ್ರೆಸ್ ಪಕ್ಷದಿಂದ ಅನಾಯಾಸವಾಗಿ ಎಂಎಲ್ಸಿ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ. ಆದರೆ ಬ್ಯಾರಿಗಳು ಅರ್ಜಿ ಹಾಕಿ ಕೂತರೂ, ಲಾಬಿ ನಡೆಸಿದರೂ ಫಲಿತಾಂಶ ಶೂನ್ಯ.!

ಇನ್ನಾದರೂ ಬಿಲ್ಲವ-ಬ್ಯಾರಿಗಳು ಇದನ್ನು ಅರ್ಥ ಮಾಡಿಕೊಳ್ಳಬೇಕು. ಎರಡು ಪಕ್ಷಕ್ಕೆ ಹೋಲ್ ಸೇಲ್ ಆಗಿ ಮಾರಾಟ ಆಗುವ ಬದಲು ಅವಕಾಶ ಸಿಕ್ಕಲೆಲ್ಲ ಪಕ್ಷ, ಪಾರ್ಟಿ ಎಂದು ನೋಡದೆ ಗೆಲ್ಲಿಸುವ ಆಟ ಕಲಿಯಬೇಕಿದೆ. ಬಂಟರು ಇದರಲ್ಲಿ ನಿಪುಣರು. ಪಕ್ಷ ಯಾವುದೇ ಇರಲಿ. ಸಣ್ಣ ಸಂಖ್ಯೆಯಲ್ಲಿ ಸಮುದಾಯ ಇದ್ದರೂ ಬಂಟರ ನಾಲ್ಕು ಶಾಸಕರು, ಒಂದು ಎಂಎಲ್ಸಿ, ಒಂದು ಸಂಸದರು ಜಿಲ್ಲೆಯಲ್ಲಿದ್ದಾರೆ. ರಾಜಕೀಯ ಚಾಣಾಕ್ಷತೆ ಇವರನ್ನು ನೋಡಿ ಕಲಿಯಬೇಕಿದೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ನೂತನ ಸಂಸದರಾಗಿ ಆಯ್ಕೆಯಾಗಿರುವುದರಿಂದ ಶ್ರೀಘ್ರದಲ್ಲೇ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಿದೆ. ಈ ಹಿನ್ನಲೆಯಲ್ಲಿ ಬಿಲ್ಲವ ಸಮುದಾಯದಕ್ಕೆ ನೀಡಿರುವ ಪರಿಷತ್ ಸದಸ್ಯತ್ವ ಹಾಗೂ ಪ್ರತಿಪಕ್ಷ ನಾಯಕರ ಸ್ಥಾನವು ಕೈ ತಪ್ಪಲಿದೆ. ಮುಖ್ಯಮಂತ್ರಿ, ಸ್ಪೀಕರ್ ಹುದ್ದೆಯ ನಂತರದ ಸ್ಥಾನದಲ್ಲಿ ಕೋಟಾ ರಾರಾಜಿಸಿದ್ದರು. ಆದರೆ ಇದೀಗ ಆ ಸ್ಥಾನವು ಬಿಲ್ಲವರಿಂದ ಕೈ ತಪ್ಪುವ ಸಾಧ್ಯತೆಯೇ ಹೆಚ್ಚಿದೆ. ಬಿಲ್ಲವರಿಗೆ ಸಂಸದ ಸ್ಥಾನ ಕೊಟ್ಟು ಬೀಗುತ್ತಿರುವವರು ಅತ್ತ ಅದಕ್ಕಿಂತ ಮಹತ್ವ ಪಡೆದಿದ್ದ ವಿಧಾನ ಪರಿಷತ್ ಪ್ರತಿಪಕ್ಷ ಸ್ಥಾನ ಸದ್ದಿಲ್ಲದೆ ಕಸಿದುಕೊಂಡಿರುವುದು ಬಿಲ್ಲವರ ರಾಜಕೀಯ ಪ್ರಜ್ಞೆ ಎಷ್ಟಿದೆ ಅನ್ನುವುದಕ್ಕೆ ಸ್ಪಷ್ಟ ನಿದರ್ಶನ.