ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಪಾಠ ಕಲಿಯಬೇಕಾದ ಅವಶ್ಯಕತೆ ಇದೆ. ಕಾನೂನು ಸುವ್ಯವಸ್ಥೆ ಎನ್ನುವುದು ಕೇವಲ ಕಾನೂನಿನಿಂದ ಮಾತ್ರ ಜಾರಿಯಲ್ಲಿರುವುದಲ್ಲ. ನಮ್ಮ ನಡತೆಯೂ ಕಾನೂನು ಸುವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ದಂಡಾಧಿಕಾರಿ ಹುದ್ದೆಯವರಂತೂ ಈ ಬಗ್ಗೆ ಹೆಚ್ಚು ಎಚ್ಚರ ಹೊಂದಿರಬೇಕಾಗುತ್ತದೆ.
ಇಂದು ನಡೆಯುತ್ತಿರುವ ಮೂಡಬಿದ್ರೆ ಕಂಬಳದ ಆಹ್ವಾನ ಪತ್ರಿಕೆಯಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮತ್ತು ಜಿಲ್ಲಾಧಿಕಾರಿ ದರ್ಶನ ಎಚ್ ವಿ ಹೆಸರುಗಳಿದ್ದವು. ಆ ಕಂಬಳ ಕಾರ್ಯಕ್ರಮದ ಆಯೋಜಕರಲ್ಲಿ 17 ದ್ವೇಷ ಭಾಷಣ ಪ್ರಕರಣಗಳನ್ನು ಮಾಡಿ ಜಾಮೀನಿನ ಮೇಲೆ ಹೊರಗಿರುವ ಕಲ್ಲಡ್ಕ ಪ್ರಭಾಕರ ಭಟ್ ಕೂಡಾ ಒಬ್ಬರಾಗಿದ್ದಾರೆ. ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ನಮೂದಾಗಿದೆ. ದ್ವೇಷಭಾಷಣಕಾರರು ಆಯೋಜಿಸಿರುವ ಮತ್ತು ಭಾಷಣ ಮಾಡುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಮುಖ್ಯ ಅಧಿಕಾರಿಗಳು ವೇದಿಕೆ ಹಂಚಿಕೆಕೊಳ್ಳುವ ಈ ಬಗ್ಗೆ ನಿನ್ನೆ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಆಕ್ಷೇಪ ವ್ಯಕ್ತಡಿಸಿದ್ದರು.

ಅಮಂತ್ರಣ ಪತ್ರಿಕೆಯಲ್ಲಿ ಹೆಸರಿದ್ದರೂ ಮಂಗಳೂರು ಪೊಲೀಸ್ ಆಯುಕ್ತರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ದ್ವೇಷಭಾಷಣ ಮತ್ತು ಆ ಮೂಲಕ ಕೋಮುಗಲಭೆ ನಡೆಸಿ ಸಾವು ನೋವುಗಳಿಗೆ ಕಾರಣರಾಗುವ ಆರೋಪಿಗಳ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ, ಅವರು ಮುಖ್ಯ ಅಭ್ಯಾಗತರಾಗಿರುವ, ಆಯೋಜಕರಾಗಿರುವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಮಂಗಳೂರು ಕಮಿಷನರ್ ನೀಡಿದ್ದಾರೆ.

ಕೋಮುವಾದಿಗಳು, ದ್ವೇಷಭಾಷಣದ ಆರೋಪಿಗಳು ಅತಿಥಿಗಳು, ಮುಖ್ಯ ದಿಕ್ಸೂಚಿ ಭಾಷಣಕಾರರಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ವಿರುದ್ದ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ದ್ವೇಷ ಭಾಷಣ ಮತ್ತು ಕೋಮುವಾದದ ಆರೋಪಿಗಳನ್ನು ಗೌರವಾನ್ವಿತ ಅತಿಥಿಗಳಾಗಿ ಮಾನ್ಯತೆ ನೀಡುವ ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿಗಳ ಭಾಗವಹಿಸುವಿಕೆಯ ನಡೆ ಭಾರತೀಯ ಆಡಳಿತ ಸೇವಾ ನಿಯಮ ( All India Services (Conduct) Rules, 1968) 3(1), 3(1A), 5, 7 ಮತ್ತು 13ರ ಪ್ರಕಾರ ಅಪರಾಧವಾಗಿದೆ. ಜಿಲ್ಲಾಧಿಕಾರಿ ವಿರುದ್ದ ಕ್ರಮ ತೆಗೆದುಕೊಳ್ಳದಿದ್ದರೆ ಮಂಗಳೂರಿನ ಕಾನೂನು ಸುವ್ಯವಸ್ಥೆಗಾಗಿ ಶ್ರಮಿಸುತ್ತಿರುವ ದಕ್ಷ, ಪ್ರಾಮಾಣಿಕ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮತ್ತು ದಕ ಎಸ್ಪಿ, ಜಾತ್ಯಾತೀತರ ಶ್ರಮ ಹೊಳೆಯಲ್ಲಿ ಹುಣಸೇಹಣ್ಣು ತೊಳೆದಂತಾಗುತ್ತದೆ.
