ಸ್ಪೀಕರ್ ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ; “ಇದು ಕಲಾಪ ನಡೆಸುವ ರೀತಿನಾ? ಗಲಾಟೆ ಮಾಡುವವರನ್ನು ಎತ್ತಿ ಹೊರಗೆ ಹಾಕಿಸಿ

ರಾಜ್ಯ

ಸ್ಪೀಕರ್ ಖಾದರ್ ಅವರ ಕಾರ್ಯವೈಖರಿಗೆ ಸಿಎಂ ಸಿದ್ದರಾಮಯ್ಯ ಗರಂ ಆದ ಪ್ರಸಂಗ ಅಧಿವೇಶನದಲ್ಲಿ ನಡೆದಿದೆ. ಅಬಕಾರಿ ಕಿಕ್ ಬ್ಯಾಕ್ ಪ್ರಕರಣದ ಚರ್ಚೆ ಹಾಗೂ ಮನರೇಗ ಸಂಬಂಧ ನಿರ್ಣಯ ಮಂಡನೆ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ಅಡ್ಡಿಪಡಿಸಿದ ಬಗ್ಗೆ ಸ್ಪೀಕರ್ ಖಾದರ್ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ತಾಳಿರುವುದನ್ನು ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪೀಕರ್ ವಿರುದ್ಧವೇ ಕೆಂಡಾಮಂಡಲರಾದರು.

ಇತ್ತೀಚೆಗೆ ಕಲಾಪದಲ್ಲಿ ದುರ್ವತನೆ ತೋರಿದ ಬಿಜೆಪಿ ಹಾಗೂ ಜೆಡಿಎಸ್ ನ ಹದಿನಾರರಷ್ಟು ಸದಸ್ಯರನ್ನು ಸ್ಪೀಕರ್ ಖಾದರ್ ಶಿಸ್ತು ಕ್ರಮ ಕೈಗೊಂಡಿದ್ದರು. ಆದರೆ ಹಜ್ಜ್ ಯಾತ್ರೆಗೆ ತೆರಳುವ ಸಂದರ್ಭದಲ್ಲಿ ಅಶಿಸ್ತು ತೋರಿದ ಸದಸ್ಯರ ಮೇಲಿನ ಶಿಸ್ತು ಕ್ರಮ ತೆಗೆದಿದ್ದರು. ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ಕಾರ್ಯವೈಖರಿಯೇ ಪ್ರಮುಖವಾದುದು. ಪ್ರಮುಖ ಬಿಲ್ ಪಾಸಾಗುವ ಸಂದರ್ಭದಲ್ಲಿ ಪ್ರತಿಪಕ್ಷಗಳು ಅಡ್ಡಿಪಡಿಸಿದಾಗ ಅಂತಹ ಸದಸ್ಯರನ್ನು ಸದನದಿಂದ ಹೊರಹಾಕುವುದು ಸ್ಪೀಕರ್ ಕರ್ತವ್ಯ. ಸಿಎಂ ಸಿದ್ದರಾಮಯ್ಯರಂತೂ ಸ್ಪೀಕರ್ ಅವರನ್ನು ಉದ್ದೇಶಿಸಿ ‘ಏನು ಈ ರೀತಿ ಸದನ ನಡೆಸುವುದಾ? ಅವರನ್ನು ಎತ್ತಿ ಹೊರಗೆ ಹಾಕ್ರೀ.. ಈ ರೀತಿ ನೀವು ಸದನ ನಡೆಸುವುದಾದರೆ ಇನ್ನು ಯಾವತ್ತೂ ನೀವು ಕರೆಯುವ ಕಲಾಪ ಸಲಹಾ ಸಮಿತಿ ಸಭೆಗಳಿಗೇ ಬರುವುದಿಲ್ಲ’ ಎಂದು ಖಡಕ್ಕಾಗಿಯೇ ಉತ್ತರಿಸಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಹಲವಾರು ಮಂದಿ ಸಭಾಧ್ಯಕ್ಷ ಹುದ್ದೆ ಅಲಂಕರಿಸಿದ್ದರು. ರಮೇಶ್ ಕುಮಾರ್ ಸೇರಿದಂತೆ ಹಲವಾರು ಮೇಧಾವಿಗಳು ಈ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಪ್ರಮುಖ ಬಿಲ್ ಪಾಸಾಗುವ ಸಂದರ್ಭದಲ್ಲಿ ಅಡ್ಡಿಪಡಿಸುವ ಸದಸ್ಯರನ್ನು ಮುಲಾಜಿಲ್ಲದೆ ಸದನದಿಂದ ಹೊರ ಹಾಕುವ ಪ್ರಕ್ರಿಯೆ ಮಾಮೂಲು. ಆದರೆ ಸ್ಪೀಕರ್ ಖಾದರ್ ಮಾತ್ರ ಪ್ರತಿಪಕ್ಷದವರ ವಿರುದ್ಧ ಮೃದು ಧೋರಣೆ ತಾಳುತ್ತಿದ್ದು, ಆಡಳಿತಾರೂಢರ ವಿರುದ್ಧವೇ ಗರಂ ಆಗುವ ಪ್ರಸಂಗಗಳು ಕಾಣಸಿಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದ್ದು ನಿಂತು ಪ್ರಮುಖ ಅಜೆಂಡಾ ಜೊತೆ ಚರ್ಚೆ ನಡೆಸುವಾಗ ಪ್ರತಿಪಕ್ಷದವರು ಅಡ್ಡಿಪಡಿಸಿದಾಗಲೂ ಖಾದರ್ ಅಶಿಸ್ತು ತೋರಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವಾಗ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸ್ಪೀಕರ್ ವಿರುದ್ಧ ಕೆಂಡಾಮಂಡಲರಾಗಿ ಪ್ರಶ್ನಿಸಿದ ಘಟನೆ ನಡೆದಿರುವುದು ಇದೇ ಮೊದಲ ಬಾರಿಗೆ ಆಗಿರಬೇಕು.