ಅನ್ನದಾತರ ಬದುಕಿಗೆ ‘ಗ್ಯಾರಂಟಿ’ ಯೇ ಇಲ್ಲ.! ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 981 ರೈತರ ಆತ್ಮಹತ್ಯೆ

ರಾಜ್ಯ

ಹಾವೇರಿಯಲ್ಲಿ ಅತೀ ಹೆಚ್ಚು 128 ಪ್ರಕರಣ, ಉಡುಪಿಯಲ್ಲಿ ಶೂನ್ಯ. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅತೀ ಹೆಚ್ಚು ಆತ್ಮಹತ್ಯೆ ಪ್ರಕರಣ..ಪಂಚ ಗ್ಯಾರಂಟಿ ರೈತರ ಬದುಕಿನಲ್ಲಿ ಬದಲಾವಣೆ ತಂದಿಲ್ಲ

ರಾಜ್ಯದಲ್ಲಿ ಒಂದು ವರ್ಷದಲ್ಲಿ ಬರೋಬ್ಬರಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿದ್ಯುತ್, ಶಕ್ತಿ, ಶೂನ್ಯ ಬಡ್ಡಿದರದಲ್ಲಿ ಸಾಲ, ಸರಕಾರದ ಗ್ಯಾರಂಟಿಗಳೂ ಸಹ ರೈತರ ಆತ್ಮಹತ್ಯೆಗೆ ತಡೆಯಲು ಆಗದಂತೆ ಆಗಿದೆ. ಕಳೆದ 2024 ರ ಏಪ್ರಿಲ್ ಒಂದರಿಂದ 2025 ಮೇ 25 ರವರೆಗೆ ರಾಜ್ಯದಲ್ಲಿ 981ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 807 ಪ್ರಕರಣದಲ್ಲಿ ಸರಕಾರದಿಂದ ಪರಿಹಾರ ದೊರೆತಿದೆ.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರತಿ ಸರಕಾರವೂ ಹೇಳುತ್ತಲೇ ಬಂದಿದೆಯಾದರೂ ರೈತರ ಆತ್ಮಹತ್ಯೆ ಪ್ರಕರಣಗಳು ಮಾತ್ರ ನಿಂತಿಲ್ಲ.

ಹಾವೇರಿಯಲ್ಲಿ 128, ಕಲಬುರ್ಗಿಯಲ್ಲಿ 82, ಮೈಸೂರಿನಲ್ಲಿ 73, ಧಾರವಾಡ ದಲ್ಲಿ 72 , ಬೆಳಗಾವಿಯಲ್ಲಿ 71 ಹೀಗೆ ಪ್ರತಿಯೊಂದು ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ಉಡುಪಿ ಜಿಲ್ಲೆಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. 21 ಜಿಲ್ಲೆಗಳಲ್ಲಿ ಹತ್ತಕ್ಕಿಂತ ಹೆಚ್ಚು, ಆರು ಜಿಲ್ಲೆಗಳಲ್ಲಿ 10 ಕ್ಕಿಂತ ಕಡಿಮೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರಾಜ್ಯ ಸರಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಜನರ ನೆರವಿಗೆ ಧಾವಿಸಿದೆ. ಆದರೂ ಕಳೆದೊಂದು ವರ್ಷದ ಅವಧಿಯಲ್ಲೇ ರಾಜ್ಯದಲ್ಲಿ 981 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.‌ 2020-21 ರ ಸಾಲಿನಲ್ಲಿ 718, 2021-22 ರಲ್ಲಿ 775, 2022-23 ರಲ್ಲಿ 188 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ 2024-22 ರಲ್ಲಿ ಆ ಸಂಖ್ಯೆ 981 ಕ್ಕೇರಿದೆ. ಸಾಲದಬಾಧೆ, ಬೆಳೆನಷ್ಟ ಮೊದಲಾದ ಕಾರಣಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತರು ಸಾಲ -ಸೋಲ ಮಾಡಿ ಬಿತ್ತನೆ ಬೀಜ, ರಸಗೊಬ್ಬರ ತಂದು ಬಿತ್ತಿದರೆ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದಾಗಿ ಬೆಳೆದ ಬೆಳೆ ಕೈಗೆ ಸಿಗದಂತೆ ಆಗುತ್ತಿದೆ. ಮಳೆರಾಯ ಕರುಣೆ ತೋರಿ ವಾಡಿಕೆಯ ಮಳೆ ಬಿದ್ದು ಬೆಳೆಗಳು ಕೈಗೆ ಬರುವಷ್ಟರಲ್ಲಿ ಬೆಳೆದ ದರವೇ ಇರುವುದಿಲ್ಲ. ಸಾಲಗಾರರ ಕಾಟ ಹೆಚ್ಚಾಗುತ್ತಲೇ ಸಾಲ ತೀರಿಸಲು ಆಗುವುದಿಲ್ಲ. ಆಗ ವಿಧಿಯಿಲ್ಲದೆ ರೈತರು ಆತ್ಮಹತ್ಯೆ ದಾರಿ ಹಿಡಿಯುತ್ತಾರೆ.

ಸರಕಾರಗಳೂ ಬೆಲೆಗಳಿಗೆ ಬೆಂಬಲ ಬೆಲೆ ಘೋಷಿಸಿ ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ನಮ್ಮದು ರೈತಪರ ಸರಕಾರ ಎಂದು ಪ್ರತಿ ಸರಕಾರಗಳೂ ಹೇಳುತ್ತಲೇ ಬರುತ್ತಿವೆ.