ಬಜಪೆ ಪೊಲೀಸರ ಕಾರ್ಯಾಚರಣೆ; ಕಳ್ಳತನ ಆರೋಪಿಗಳ ಬಂಧನ, 27 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 20 ಸಾವಿರ ನಗದು ವಶ

ಕರಾವಳಿ

ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ರವರು ಸಂಬಂಧಿಕರ ಮನೆಗೆ ಮೆಹಂದಿ ಕಾರ್ಯಕ್ರಮಕ್ಕೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 1ಲಕ್ಷದ 25 ಸಾವಿರ ರೂಪಾಯಿ ನಗದು ಹಣ ದಿನಾಂಕ 23-09-2025 ರಂದು ಕಳ್ಳತನವಾಗಿತ್ತು. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಅ.ಕ್ರ ಸಂಖ್ಯೆ 176/2025 ರಂತೆ ಪ್ರಕರಣ ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದರು.

ಬಜಪೆ ಪೊಲೀಸರು ಆರೋಪಿಗಳ ಜಾಡು ಹಿಡಿದು ಮಾಹಿತಿ ಕಲೆ ಹಾಕಿದಾಗ ಅಬ್ದುಲ್ ನಾಸರ್ @ ನಾಸಿರ್ @ ನಾಚಿ, ಕಳವಾರು ಚರ್ಚ್ ಬಳಿ ಮನೆ, ಪ್ರಸ್ತುತ ಬಾಡಿಗೆ ಮನೆ, ಜರಿನಗರ ಬಜಪೆಯಲ್ಲಿ ವಾಸ ಈತನು ಕಳ್ಳತನ ಮಾಡಿ ವಿದೇಶಕ್ಕೆ ಪರಾರಿಯಾಗಿ ತಲೆಮರೆಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ LOC ಹೊರಡಿಸಲಾಗಿತ್ತು. ಅಬ್ದುಲ್ ನಾಸೀರ್ @ ನಾಚಿ ಎಂಬಾತನನ್ನು ಪತ್ತೆ ಮಾಡಿ ವಿಚಾರಣೆ ನಡೆಸಿದಾಗ ಪ್ರಕರಣದ ಪಿರ್ಯಾದಿದಾರರಾದ ಮೊಹಮ್ಮದ್ ಷರೀಫ್ ರವರ ಸಂಬಂಧಿ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಮತ್ತು ತಾನು ಸೇರಿ ಈ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಕಳ್ಳತನ ಪ್ರಕರಣವನ್ನು ಒಪ್ಪಿಕೊಂಡಿರುತ್ತಾರೆ.

ಆರೋಪಿಗಳಿಂದ ಸುಮಾರು 27 ಲಕ್ಷ ರೂಪಾಯಿ ಮೌಲ್ಯದ 222 ಗ್ರಾಂ ತೂಕದ ಚಿನ್ನವನ್ನು, 20,000/- ರೂಪಾಯಿ ನಗದು ಹಣ, ಸುಮಾರು 50,000/- ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವನ್ನೂ ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.