ಮಂಗಳೂರು ನಗರದಲ್ಲಿ ವಾಯುಮಾಲಿನ್ಯ ವಿಪರೀತವಾಗಿರುವುದರಿಂದ ಗಾಳಿಯ ಗುಣಮಟ್ಟ ಸತತ ಕುಸಿತ ಕಾಣುತ್ತಿದ್ದು, ಅದೀಗ ಎಕ್ಯೂಐ ಸೂಚ್ಯಂಕದಲ್ಲಿ 200 ರ ಗಡಿ ತಲುಪಿದೆ. ಎಕ್ಯೂಐ ಮಾಪನದ ಪ್ರಕಾರ 200 ರಿಂದ 300 ಸೂಚ್ಯಂಕ ಕಂಡುಬಂದರೆ ಅದು ಗಂಭೀರ ಹಂತ ತಲುಪಿದೆ ಎಂದರ್ಥ.
ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಮಂಗಳೂರಿನ ಗಾಳಿ ವಿಷಕಾರಿಯಾಗಿದ್ದು, ಪುಟಾಣಿಗಳು, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆ ಉಳ್ಳವರು ಹಾಗೂ ವೃದ್ಧರ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಎದುರಾಗಿದೆ.
ಮಂಗಳೂರಿನ ಈಗಿನ ವಾಯು ಗುಣಮಟ್ಟಗಳು ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಹಲವಾರು ರೋಗಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
