ಗಂಜಿಮಠ ಆರೋಗ್ಯ ಕೇಂದ್ರವನ್ನು ಗುರುಪುರ ಹೋಬಳಿಯ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಹೋಬಳಿಯ ಕುಪ್ಪೆಪದವು, ಕೊಂಪದವು, ವಾಮಂಜೂರು ಆರೋಗ್ಯ ಕೇಂದ್ರಗಳಿಗೆ ವೈದ್ಯರ ಸಹಿತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಜಿಲ್ಲೆಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯದ ಆಸ್ಪತ್ರೆಯ ಘಟಕಗಳನ್ನು ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐಎಂ ಗುರುಪುರ ವಲಯ ಸಮಿತಿ ನೇತೃತ್ವದಲ್ಲಿ ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಗಂಜಿಮಠ ಪ್ರಾಥಮಿಕ ಆರೋಗ್ಯ ಕೇಂದ್ರದವರಗೆ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು.
ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಪಾದಯಾತ್ರೆಯ ಸಮಾರೋಪ ಭಾಷಣ ಮಾಡಿದರು. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಕ್ಷೇತ್ರವನ್ನು ಪೂರ್ಣವಾಗಿ ಕಡೆಗಣಿಸಲಾಗಿದೆ. ಬಹುತೇಕ ಹೋಬಳಿ ಕೇಂದ್ರಗಳಲ್ಲಿ ಸಮುದಾಯ ಆಸ್ಪತ್ರೆಗಳನ್ನು ತೆರೆಯಲು ಇಲ್ಲಿಯವರಗೆ ಸಾಧ್ಯ ಆಗಿಲ್ಲ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ವೈದ್ಯರು, ದಾದಿಯರು ಸಹಿತ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿವೆ. ಹೊಸದಾಗಿ ಸ್ಥಾಪನೆಗೊಂಡಿರುವ ನಾಲಕ್ಕು ತಾಲೂಕುಗಳಲ್ಲಿ ಇಲ್ಲಿಯವರಗೆ ತಾಲೂಕು ಆಸ್ಪತ್ರೆಗಳ ನಿರ್ಮಾಣ ಆಗಿಲ್ಲ ಎಂಬುದು ಗ್ರಾಮೀಣ ಭಾಗಗಳ ಆರೋಗ್ಯ ಕ್ಷೇತ್ರದ ಗಂಭೀರ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದರು. ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರ ಆಗಿರುವ ಗುರುಪುರದಲ್ಲಿ ಎಲ್ಲಾ ಅರ್ಹತೆಗಳ ಹೊರತಾಗಿಯು ಸಮುದಾಯ ಆಸ್ಪತ್ರೆ ಮಂಜೂರು ಮಾಡಲು ಮೀನಾಮೇಷ ಎಣಿಸುತ್ತಿರುವುದು ವಿಷಾದನೀಯ, ಈ ಕುರಿತು ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯ ಮನೋಜ್ ವಾಮಂಜೂರು ಮಾತಾಡುತ್ತಾ, ಜಿಲ್ಲೆಯ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪಿ.ಪಿ.ಪಿ ಮಾದರಿ ಪಿಡುಗಿನಂತೆ ಕಾಡುತ್ತಿದೆ. ಜಿಲ್ಲಾಸ್ಪತ್ರೆ ವೆನ್ಲಾಕ್ ಸಹಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವರಗೆ ಖಾಸಗಿ ಮೆಡಿಕಲ್ ಕಾಲೇಜುಗಳ ವಶವಾಗುತ್ತಿವೆ. ಸರಕಾರ ಪಿ.ಪಿ.ಪಿ ಮಾದರಿ ಕೈ ಬಿಟ್ಟು ಜಿಲ್ಲೆಯ ಸಾರ್ವಜನಿಕ ಆರೋಗ್ಯ ಕ್ಷೇತ್ರವನ್ನು ಬಲಪಡಿಸಬೇಕು ಎಂದು ಆಗ್ರಹಿಸಿದರು.

ಪಾದಯಾತ್ರೆಗೆ ಕುಪ್ಪೆಪದವು ಆರೋಗ್ಯ ಕೇಂದ್ರದ ಬಳಿ ಸಿಪಿಐಎಂ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಚಾಲನೆ ನೀಡಿದರು. ಜಿಲ್ಲಾ ಸಮಿತಿ ಸದಸ್ಯೆ ವಸಂತಿ ಕುಪ್ಪೆಪದವು ಕಾರ್ಯಕ್ರಮ ನಿರ್ವಹಿಸಿದರು. ಬಾಬು ಸಾಲ್ಯಾನ್ ತಿರುವೈಲು, ಆನಂದ ಪೂಜಾರಿ ಇರುವೈಲು, ಲೋಲಾಕ್ಷಿ, ಕುಸುಮ ಕುಪ್ಪೆಪದವು, ಭವ್ಯ ಮುಚ್ಚೂರು, ಹೊನ್ನಯ್ಯ ಅಮೀನ್ ವಾಮಂಜೂರು, ನೋಣಯ್ಯ ಗೌಡ ಮಿಜಾರು, ಗೋಪಾಲ ಮೂಲ್ಯ ಮಳಲಿ, ಭವಾನಿ ಕುಪ್ಪೆಪದವು ಮತ್ತಿತರರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.
