ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅತ್ಯಾಧುನಿಕ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ಸ್ಥಾಪನೆ
ಡಿಜಿಟಲ್ ವಂಚನೆಯಿಂದ ಸಿಕ್ಕ ಹಣವನ್ನು ಅಕ್ರಮವಾಗಿ ವರ್ಗಾಯಿಸಲು ಸೈಬರ್ ಅಪರಾಧಿಗಳು ಬಳಸುತ್ತಿರುವ ‘ಮ್ಯೂಲ್ ಖಾತೆ’ಗಳ ವಿರುದ್ಧ ಬಳ್ಳಾರಿಯ ಸೈಬರ್ ಕ್ರೈಂ ಪೊಲೀಸ್ ಇಲಾಖೆ ಕಾರ್ಯಾಚರಣೆಯನ್ನು ಕೈಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಅತ್ಯಾಧುನಿಕ ‘ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ)’ ಅನ್ನು ಸ್ಥಾಪಿಸಿದೆ. ಈ ಘಟಕವು ರಾಜ್ಯದಲ್ಲಿರಬಹುದಾದ ‘ಮ್ಯೂಲ್ ಖಾತೆ’ಗಳನ್ನು ಪತ್ತೆ ಮಾಡುವಲ್ಲಿ ನಿರತವಾಗಿದೆ. ರಾಜ್ಯದಾದ್ಯಂತ ಭಾರಿ ಸಂಖ್ಯೆಯ ‘ಮ್ಯೂಲ್ ಖಾತೆ’ಗಳಿರುವುದು ಪತ್ತೆ ಮಾಡಿರುವ ಈ ಘಟಕ, ಅವುಗಳನ್ನು ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲು ಪ್ರತಿ ಜಿಲ್ಲೆಗಳ ಸಿಸಿಪಿಎಸ್‌ಗಳಿಗೆ ಸೂಚಿಸಿದೆ.

ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 4,596 ಮ್ಯೂಲ್ ಖಾತೆಗಳಿರುವುದನ್ನು ಪತ್ತೆ ಮಾಡಿರುವ ಸಿಐಡಿ ಘಟಕ, ಇವುಗಳನ್ನು ಪರಿಶೀಲಿಸಲು ತಿಳಿಸಿದೆ. ಬಳ್ಳಾರಿ ಸಿಸಿಪಿಎಸ್‌ಗೆ ಸಿಕ್ಕ 4,596 ಮ್ಯೂಲ್ ಅಕೌಂಟ್‌ಗಳ ಪೈಕಿ 1,140 ಖಾತೆಗಳು ವಿಜಯನಗರ ಜಿಲ್ಲೆಗೆ ಸೇರಿದವಾಗಿದ್ದು, ಅವುಗಳ ಪರಿಶೀಲನೆಯನ್ನು ಅಲ್ಲಿನ ಪೊಲೀಸ್ ಇಲಾಖೆಗೆ ವರ್ಗಾಯಿಸಲಾಗಿದೆ. ಉಳಿದ 3,456 ಖಾತೆಗಳು ಮಾತ್ರ ಬಳ್ಳಾರಿಗೆ ಸಂಬಂಧಿಸಿದ್ದಾಗಿವೆ. ಇವುಗಳ ಪರಿಶೀಲನೆಯನ್ನು ಸಿಸಿಪಿಎಸ್ ಪೊಲೀಸರು ತೀವ್ರಗೊಳಿಸಿದ್ದಾರೆ.
ಈ ಖಾತೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಮೊದಲಿಗೆ ಬ್ಯಾಂಕ್‌ಗಳಿಂದ ವಿವರ ಕೇಳಿದ್ದಾರೆ. ಸದ್ಯ 175 ಖಾತೆಗಳ ಕೆವೈಸಿ ತರಿಸಿಕೊಳ್ಳಲಾಗಿದ್ದು, ಇವುಗಳಲ್ಲಿ 40 ಖಾತೆಗಳನ್ನು ತೀವ್ರ ತಪಾಸಣೆಗೆ ಗುರಿಪಡಿಸಲಾಗಿದೆ. ಈ ವೇಳೆ 2 ಖಾತೆಗಳಲ್ಲಿ ಹಣದ ಅಕ್ರಮ ವಹಿವಾಟು ನಡೆದಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಎರಡೂ ಪ್ರಕರಣಗಳಲ್ಲಿ ಒಟ್ಟು ಐವರು ಆರೋಪಿಗಳನ್ನು ಪತ್ತೆ ಮಾಡಲಾಗಿದೆ.
ಕೂಲಿ ಕಾರ್ಮಿಕರು, ಮನೆ ಕೆಲಸದವರು, ಚಿಲ್ಲರೆ ವ್ಯಾಪಾರಿಗಳು ಮುಂತಾದವರಿಗೆ ಕಮಿಷನ್ ಆಮಿಷವೊಡ್ಡುವ ಆನ್‌ಲೈನ್ ವಂಚಕರು, ಖಾತೆಗಳನ್ನು ತೆರೆಯಲು ಅವರ ವೈಯಕ್ತಿಕ ದಾಖಲೆಗಳನ್ನು ಪಡೆಯುತ್ತಾರೆ. ಈ ದಾಖಲೆಗಳ ಆಧಾರದಲ್ಲಿ ಖಾತೆಗಳನ್ನು ತೆರೆಯುತ್ತಾರೆ. ಆನ್‌ಲೈನ್ ವಂಚನೆಯಲ್ಲಿ ಸಿಗುವ ಹಣವನ್ನು ಈ ಖಾತೆಗಳಿಗೆ ಹಾಕಿಸಿಕೊಳ್ಳಲಾಗುತ್ತದೆ. ಸಿಐಡಿ ಸೂಚನೆ ಮೇರೆಗೆ ಖಾತೆಗಳ ಪರಿಶೀಲನೆ ನಡೆಯುತ್ತಿದೆ.
