ಭೂ ಸ್ವಾಧೀನದ ಹೆಸರಲ್ಲಿ ನೂರಾರು ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆ ಆರೋಪ; ಇಡಿ ಅಧಿಕಾರಿಗಳಿಂದ ದಾಳಿ

ರಾಜ್ಯ

ಭೂ ಸ್ವಾಧೀನದ ಹೆಸರಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಅಧಿಕಾರಿಗಳು ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಧಾರವಾಡದ ನವಲೂರು ಬಳಿ ಇರುವ KIADB (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಕಚೇರಿ ಹಾಗೂ ಬೆಂಗಳೂರು ಕಚೇರಿ ಮೇಲೆ ಇಂದು ED (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ರೇಡ್​ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ 10 ವರ್ಷಗಳಲ್ಲಿ ನಡೆದ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು, KIADB ಖಾತೆಯಿಂದ ಹಣ ವರ್ಗಾವಣೆ ಆಗಿದೆ ಎನ್ನಲಾದ ಬಗ್ಗೆ ಶೋಧ ಮಾಡುತ್ತಿದ್ದಾರೆ. ಆಡಿಟ್ ವರದಿ ಪರಿಶೀಲನೆ ಚುರುಕುಗೊಳಿಸಿದ್ದಾರೆ.

ರೈತರ ಹೆಸರಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ‌ಹಣ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಬಂದಿದ್ದು, ಒಂದೇ ಭೂಮಿಗೆ ಎರಡೆರಡು ಸಲ ಪರಿಹಾರದ ಹೆಸರಲ್ಲಿ ವಂಚನೆ ಎಸೆಗಿರುವ ಶಂಕೆ ವ್ಯಕ್ತವಾಗಿದೆ. ಇದಲ್ಲದೇ ಐಡಿಬಿಐ ಬ್ಯಾಂಕ್ ಒಂದೇ ಶಾಖೆಯಲ್ಲಿ 24 ಖಾತೆಗಳನ್ನು ತೆರೆಯಲಾಗಿತ್ತು ಎಂದೂ ಹೇಳಲಾಗುತ್ತಿದೆ. ಸದ್ಯ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡದಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.