ಹಾಡಹಗಲೇ ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದು ದೋಚಿದ ಘಟನೆ ಬೈಂದೂರಿನ ನಡೆದಿದೆ. ಇಲ್ಲಿನ ಪಟವಾಲ್ ಹೌಸ್ ರವರ ಮನೆಯಿಂದ ಅಂದಾಜು 20 ಪವನ್ ಚಿನ್ನ ಹಾಗೂ 2 ಲಕ್ಷ ರೂಪಾಯಿ ಕಳವಾಗಿದೆ. ಈ ಸಂದರ್ಭ ಮನೆಯಲ್ಲಿ ಯಾರೂ ಇರಲಿಲ್ಲ. ಕಳ್ಳರು ಸ್ಪಷ್ಟ ಮಾಹಿತಿ ಪಡೆದು ಹೊಂಚು ಹಾಕಿದ್ದಾರೆ. ಕಳವಾದ ಮನೆಯ ಸುತ್ತ ಮನೆಗಳಿದ್ದು, ಜನನಿಬಿಡ ಪ್ರದೇಶವಾಗಿದೆ.
ಹಂಚಿನ ಮನೆಯಾಗಿರುವ ಕಾರಣ ಕಳ್ಳರಿಗೆ ಬೀಗ ಮುರಿದು ಒಳನುಗ್ಗಲು ಸುಲಭವಾಗಿದೆ. ಈ ಮನೆಯಲ್ಲಿ ಪರಮೇಶ್ವರ ಪಟವಾಲ್ ಅವರ ಮಗ, ಸೊಸೆ ಮತ್ತು ಇಬ್ಬರು ಮಕ್ಕಳು ವಾಸಿಸುತ್ತಿದ್ದಾರೆ. ಮನೆಯ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ಎಸಗಿರುವ ಶಂಕೆ ಮೂಡಿದೆ. ಶ್ವಾನದಳವು ಮನೆಯ ಪಕ್ಕದ ರಸ್ತೆಯವರೆಗೆ ತೆರಳಿ ಮರಳಿದೆ. ಸ್ಥಳಕ್ಕೆ ಬೆರಳಚ್ಚು ತಂಡ ಹಾಗೂ ಬೈಂದೂರು ಠಾಣೆಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.
