ಸುರತ್ಕಲ್ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ; 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ ಶಹನ್ವಾಝ್ ಅರೆಸ್ಟ್

ಕರಾವಳಿ

ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸುವಲ್ಲಿ ಸುರತ್ಕಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಉತ್ತರ ಪ್ರದೇಶ ರಾಮ್ ಪುರ ನಿವಾಸಿ ಶಹನ್ವಾಝ್ ಯಾನೆ ಶಾನು ಎಂದು ಗುರುತಿಸಲಾಗಿದೆ.

ಘಟನೆಯ ವಿವರ

2014 ಫೆಬ್ರವರಿ 8 ರಂದು ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ಕಲ ದ ನಿವಾಸಿ ಸುಮತಿ ಪ್ರಭು ಎಂಬವರ ಕುತ್ತಿಗೆಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ನಡೆದಿತ್ತು. ಕೊಲೆಗೈದ ಆರೋಪಿಗಳು ಆಕೆಯ ಮೈ ಮೇಲಿದ್ದ 24 ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಸುಮತಿ ಪ್ರಭು ಮಗನಾದ ಗುರುದಾಸ್ ಪ್ರಭು ಎಂಬಾತನು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅಕ್ರ/2014 ಕಲಂ 120(ಬಿ) 449, 392, 302 ಜೊತೆಗೆ 34 ಐಪಿಸಿ ಅನ್ವಯ ಪ್ರಕರಣ ದಾಖಲಾಗಿತ್ತು.

ಕೊಲೆ ಪ್ರಕರಣವನ್ನು ಭೇದಿಸಿದ ಅಂದಿನ ಪೊಲೀಸರು ರಾಜಸ್ಥಾನದ ಭಯಾನ ನಿವಾಸಿಗಳಾದ ಶಿವರಾಮ್, ಬಹುದ್ದೂರ್ ಸಿಂಗ್ ಯಾನೆ ಬಹುದ್ದುರ ಹಾಗೂ ಉತ್ತರ ಪ್ರದೇಶ ರಾಮ್ ಪುರ ನಿವಾಸಿ ಶಹನ್ವಾಝ್ ಯಾನೆ ಶಾನು ಎಂಬುವರನ್ನು ಬಂಧಿಸಿದ್ದರು.

ಬಂಧಿತ ಆರೋಪಿಗಳು ಆ ನಂತರ ಜಾಮೀನಿನ ಮೇಲೆ ಹೊರಬಂದಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಆದರೆ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಕಾರಣ ವಾರಂಟ್ ಜಾರಿಗೊಳಿಸಲಾಗಿತ್ತು.

ಪ್ರಮುಖ ಆರೋಪಿಯಾದ ರಾಜಸ್ಥಾನದ ಭಯಾನ ನಿವಾಸಿ ಶಿವರಾಮ್ ಎಂಬಾತನನ್ನು ಕಳೆದ ಮಾರ್ಚ್ 3 ರಂದು ರಾಜಸ್ಥಾನ ದಲ್ಲಿ ಬಂಧಿಸಿ ಜೈಲಿಗಟ್ಟಿದ್ದರು. ಉಳಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದರು.

ಇದೀಗ ಕ್ಷಿಪ್ರ ಕಾರ್ಯಾಚರಣೆಗಿಳಿದ ಪೊಲೀಸರು ಪ್ರಕರಣದ ಮತ್ತೊಬ್ಬ ಆರೋಪಿಯಾದ ಉತ್ತರಪ್ರದೇಶದ ಶಹನ್ವಾಝ್ ಯಾನೆ ಶಾನು ಎಂಬಾತನನ್ನು ಮಧ್ಯಪ್ರದೇಶದ ಭೋಪಾಲ್ ಎಂಬಲ್ಲಿ ಅಗಸ್ಟ್ 8 ರಂದು ಹೆಡೆಮುರಿ ಕಟ್ಟಲು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.