ಎಂಟು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ, ಹಣ ದ್ವಿಗುಣಗೊಳಿಸುವುದಾಗಿ ಸಾವಿರಾರು ಜನರಿಗೆ ಮಕ್ಮಲ್ ಟೋಪಿ ಹಾಕಿದ ಮೈತ್ರಿ ವಂಚಕ ಖಾಕಿ ಬಲೆಗೆ

ಕರಾವಳಿ

‘ಮೈತ್ರಿ ಪ್ಲಾಂಟೇಶನ್ ಅಂಡ್ ಹಾರ್ಟಿಕಲ್ಚರ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಹೆಸರಿನಲ್ಲಿ ಹೆಚ್ಚಿನ ಲಾಭಾಂಶದ ಆಮಿಷ ತೋರಿಸಿ ಸಾರ್ವಜನಿಕರಿಂದ ಹಣವನ್ನು ಡೆಪಾಸಿಟ್ ಮಾಡಿಸಿ ವಂಚಿಸಿದ ಆರೋಪಿಯನ್ನು ಮಂಗಳೂರು ಪೊಲೀಸರು ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶದ ನೆಲ್ಲೂರು ನಿವಾಸಿ ಲಕ್ಕು ಕೊಂಡಾ ರೆಡ್ಡಿ ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಎಂಟು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಲಕ್ಕು ಕೊಂಡಾ ರೆಡ್ಡಿ ಮೇಲೆ ನ್ಯಾಯಾಲಯ ವಾರಂಟ್ ಕೂಡ ಜಾರಿ ಮಾಡಿತ್ತು.

ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಸಾವಿರಾರು ಹೂಡಿಕೆದಾರರಿಂದ ಹಣ ಸಂಗ್ರಹಿಸಿ ಸಾರ್ವಜನಿಕರಿಗೆ ಮೋಸ, ವಂಚನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 32/2025 ಕಲಂ 415, 417, 418, 419, 420, 421, 422, 406, 409, 120 (ಬಿ) ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಮಂಗಳೂರು ಉತ್ತರ ಪೊಲೀಸರು ಆಂಧ್ರಪ್ರದೇಶದ ನೆಲ್ಲೂರು ಎಂಬಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಆರೋಪಿ ಲಕ್ಕು ಕೊಂಡಾ ರೆಡ್ಡಿ ವಿರುದ್ಧ ಕರ್ನಾಟಕ ರಾಜ್ಯದ
ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಆಂಧ್ರಪ್ರದೇಶದ ಹಲವು ಜಿಲ್ಲೆಗಳಲ್ಲೂ ಈತನ ವಿರುದ್ಧ ವಂಚನೆಯ ಹಲವಾರು ಪ್ರಕರಣಗಳು ದಾಖಲಾಗಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.