ಬೆಳ್ತಂಗಡಿ ಉಪ-ವಿಭಾಗದ ಡಿವೈಎಸ್ಪಿ ರೋಹಿಣಿ. ಸಿ. ಕೆ ರವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ, ಬೆಳ್ತಂಗಡಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿ ಅಕ್ರಮವಾಗಿ ಬ್ಯಾರಲ್ ಮತ್ತು ಕ್ಯಾನ್ ಗಳಲ್ಲಿ ಶೇಖರಿಸಿಟ್ಟಿದ ಡೀಸೆಲನ್ನು ಉಪ್ಪಿನಂಗಡಿ ವೃತ್ತ ನಿರೀಕ್ಷರು ಮತ್ತು ಉಪ್ಪಿನಂಗಡಿ ಠಾಣಾಧಿಕಾರಿಗಳು ಸ್ಥಳಕ್ಕೆ ತೆರಳಿ, ಜಗದೀಶ್ ಎಂಬಾತನ ಮನೆಯ ಸಮೀಪದ ಶೆಡ್ ತಪಾಸಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ ಸರಿ-ಸುಮಾರು 200 ಲೀಟರ್ ಸಾಮರ್ಥ್ಯದ 20 ಬ್ಯಾರೆಲ್ ಗಳು ಹಾಗೂ ಸುಮಾರು 35 ಲೀಟರ್ ಸಾಮರ್ಥ್ಯದ 05 ಕ್ಯಾನ್ ಗಳಲ್ಲಿ ಒಟ್ಟು ಸುಮಾರು 4,175 ಲೀಟರ್ ಡೀಸೆಲ್ ಪತ್ತೆ ಹಚ್ಚಿ ವಶ ಪಡಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಇನ್ನಷ್ಟು ಖಾಲಿ ಬ್ಯಾರೆಲ್ ಗಳು ಹಾಗೂ ಖಾಲಿ ಕ್ಯಾನ್ ಮತ್ತು ಇತರೆ ಸೊತ್ತುಗಳು ಪತ್ತೆಯಾಗಿರುತ್ತದೆ.
ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ ರೂ 3,50,000. ಎಂದು ಅಂದಾಜಿಸಲಾಗಿದೆ. ಪ್ರಕರಣದ ಆರೋಪಿ ಜಗದೀಶ್ ಎಂಬಾತನಲ್ಲಿ ಈ ಬಗ್ಗೆ ವಿಚಾರಿಸಿದಾಗ, ಇವುಗಳನ್ನು ಯಾವುದೇ ಪರವಾನಿಗೆ ಹೊಂದದೇ ಹಾಗೂ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅಕ್ರಮವಾಗಿ ಡೀಸೆಲ್ ಶೇಖರಿಸಿಟ್ಟಿರುವುದು ತಿಳಿದುಬಂದಿರುತ್ತದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 35/2026, ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
