ಏಪ್ರಿಲ್ ಒಂದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ (NHIA) ಟೋಲ್ ದರ ಏರಿಕೆಯ ಬಿಸಿ.!

ರಾಷ್ಟ್ರೀಯ

ವಾಹನ ಸವಾರರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವ್ಯಾಪ್ತಿಗೆ ಬರುವ ಕರ್ನಾಟಕದ ಒಟ್ಟು 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರವನ್ನು ಹೆಚ್ಚಿಸಲಾಗಿದ್ದು, ಈ ಹೊಸ ದರಗಳು ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸಂಚರಿಸುವವರಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ. ಪ್ರತಿ ವರ್ಷ ಹಣದುಬ್ಬರ ಮತ್ತು ಸಗಟು ಬೆಲೆ ಸೂಚ್ಯಂಕವನ್ನು ಆಧರಿಸಿ ಟೋಲ್ ದರಗಳನ್ನು ಪರಿಷ್ಕರಿಸಲಾಗುತ್ತದೆ. ರಸ್ತೆಗಳ ನಿರ್ವಹಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಹೆಚ್ಚಳ ಅನಿವಾರ್ಯ ಎಂದು NHAI ಅಧಿಕಾರಿಗಳು ತಿಳಿಸಿದ್ದಾರೆ.

ಕೇವಲ ದಿನನಿತ್ಯದ ಟೋಲ್ ಮಾತ್ರವಲ್ಲದೆ, ಫಾಸ್ಟ್‌ಟ್ಯಾಗ್, ವಾರ್ಷಿಕ ಪಾಸ್ ದರದಲ್ಲೂ ಏರಿಕೆಯಾಗಿದೆ. ಪ್ರಸ್ತುತ ರೂ. 3,000 ಇರುವ ವಾರ್ಷಿಕ ಪಾಸ್ ದರ ಏಪ್ರಿಲ್ ಒಂದರಿಂದ ರೂ. 3,075 ಆಗಲಿದೆ. ಈ ಪಾಸ್ ಮೂಲಕ ವರ್ಷಕ್ಕೆ 200 ಬಾರಿ ಟೋಲ್ ದಾಟಲು ಅವಕಾಶವಿರುತ್ತದೆ. ವಾಹನಗಳ ಫಾಸ್ಟ್‌ಟ್ಯಾಗ್‌ನಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಡ್ಡಾಯ. ಇಲ್ಲದಿದ್ದಲ್ಲಿ ಏಪ್ರಿಲ್ ಒಂದರಿಂದ ದ್ವಿಗುಣ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗಬಹುದು.

ಕರ್ನಾಟಕದ 9 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಹೆಚ್ಚಳವಾಗಲಿದೆ. ಮೈಸೂರು ಎಕ್ಸ್‌ಪ್ರೆಸ್‌ವೇ, ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ, ಪುಣೆ ರಾಷ್ಟ್ರೀಯ ಹೆದ್ದಾರಿ, ಹೊಸೂರು ರಸ್ತೆ, ಚೆನ್ನೈ ರಾಷ್ಟ್ರೀಯ ಹೆದ್ದಾರಿ, ಸಾದಹಳ್ಳಿ ಟೋಲ್. ಸಂಚಾರ ದಟ್ಟಣೆ ಹೆಚ್ಚಿರುವ ಈ ಮಾರ್ಗಗಳಲ್ಲಿ ಪ್ರಯಾಣಿಸುವ ವಾಹನ ಸವಾರರಿಗಂತು ದರ ಏರಿಕೆಯ ಬಿಸಿ ಖಚಿತವಾಗಿದೆ.