ಕಡಿಮೆ ಬಡ್ಡಿ ದರದಲ್ಲಿ ಸಾಲ.. ವರ್ಷಕ್ಕೆ 22 ಲಕ್ಷ ವಿದ್ಯಾರ್ಥಿಗಳಿಗೆ ಲಾಭ..!
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವ ಪ್ರಧಾನಮಂತ್ರಿ -ವಿದ್ಯಾಲಕ್ಷ್ಮೀ ಯೋಜನೆಗೆ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆ ಅನ್ವಯ ಉನ್ನತ ಶಿಕ್ಷಣಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳಿಗೆ ಯಾವುದೇ ಮೇಲಾಧಾರ ಇಲ್ಲದೆ ಗ್ಯಾರಂಟಿ ರಹಿತವಾಗಿ ಸಾಲ ನೀಡಲಾಗುತ್ತದೆ. ಕುಟುಂಬದ ಆದಾಯ 8 ಲಕ್ಷ ರೂಪಾಯಿ ಗಿಂತ ಕಡಿಮೆ ಇದ್ದವರು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಏಳೂವರೆ ಲಕ್ಷದವರೆಗಿನ ಸಾಲಕ್ಕೆ ಕೇಂದ್ರ ಸರಕಾರ ಶೇಕಡಾ 75 ರಷ್ಟು ಖಾತರಿಯನ್ನು ನೀಡುತ್ತದೆ. 10 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಕೇವಲ ಶೇಕಡಾ 3 ರ ಬಡ್ಡಿಯಲ್ಲಿ ನೀಡಲಾಗುವುದು. ಈಗಾಗಲೇ 4.5 ಲಕ್ಷ ರೂಪಾಯಿ ಗಿಂತ ಕಡಿಮೆ ಆದಾಯ ಇರುವವರಿಗೆ ನೀಡುತ್ತಿರುವ ಸಂಪೂರ್ಣ ಬಡ್ಡಿ ರಹಿತ ಆದಾಯಕ್ಕೆ ಈಗಿನದು ಹೆಚ್ಚುವರಿ ಸೇರ್ಪಡೆಯಾಗುತ್ತದೆ.

ಆರ್ಥಿಕ ಪರಿಸ್ಥಿತಿಯಿಂದಾಗಿ ಉನ್ನತ ಶಿಕ್ಷಣದ ಕನಸನ್ನು ವಿದ್ಯಾರ್ಥಿಗಳು ಕೈ ಬಿಡಬಾರದು ಅನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಇದರ ಲಾಭ ದೊರೆಯಲಿದೆ. ಉನ್ನತ ಶಿಕ್ಷಣ ಇಲಾಖೆಯು ಪಿಎಂ -ವಿದ್ಯಾಲಕ್ಷ್ಮೀ ಎಂಬ ಏಕೀಕೃತ ಪೋರ್ಟಲ್ ಅನ್ನು ಹೊಂದಿದ್ದು , ಸರಳೀಕೃತ ಅಪ್ಲಿಕೇಶನ್ ಪ್ರಕ್ರಿಯೆಯ ಮೂಲಕ ವಿದ್ಯಾರ್ಥಿಗಳು ಶಿಕ್ಷಣ ಸಾಲ ಮತ್ತು ಬಡ್ಡಿ ರಿಯಾಯಿತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. 2024-25 ರಿಂದ 2030-31 ರ ಅವಧಿಯಲ್ಲಿ ಇದಕ್ಕೆ 3,600 ಕೋಟಿ ರೂಪಾಯಿ ವೆಚ್ಚ ಅಂದಾಜಿಸಲಾಗಿದ್ದು, 7 ಲಕ್ಷ ಹೊಸ ವಿದ್ಯಾರ್ಥಿಗಳು ಈ ಬಡ್ಡಿ ರಿಯಾಯಿತಿಯ ಲಾಭವನ್ನು ಪಡೆಯುವ ನಿರೀಕ್ಷೆ ಇದೆ.
