ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿ ಖಂಡಿಸಿ ಹಾಗೂ ಶಾಂತಿಗಾಗಿ ಒತ್ತಾಯಿಸಿ ಪ್ರತಿಭಟನೆ

ಕರಾವಳಿ

ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದಕೋರ ನೀತಿಗಳನ್ನು ಖಂಡಿಸಿ, ಜಾಗತಿಕ ಮಟ್ಟದಲ್ಲಿ ಶಾಂತಿ ನೆಲೆಗೊಳ್ಳಬೇಕೆಂದು ಒತ್ತಾಯಿಸಿ ಇಂದು ಮಂಗಳೂರು ನಗರದ ಹೃದಯ ಭಾಗದಲ್ಲಿ CITU, DYFI, JMS,DHS,ಆದಿವಾಸಿ ಸಂಘಟನೆಗಳ ಜಂಟಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಮೇರಿಕನ್ ಸಾಮ್ರಾಜ್ಯಶಾಹಿಗಳ ಯುದ್ದದಾಹದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಜಗತ್ತಿನೆಲ್ಲೆಡೆ ಶಾಂತಿ ನೆಲೆಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, ಅಮೇರಿಕನ್ ಸಾಮ್ರಾಜ್ಯಶಾಹಿ ಇಡೀ ಜಗತ್ತನ್ನು ತನ್ನ‌ ನಿಯಂತ್ರಣದಲ್ಲಿಡಲು ಹರಸಾಹಸ ಪಡುತ್ತಿದೆ.ಜಗತ್ತಿನ 80 ದೇಶಗಳಲ್ಲಿ ಸುಮಾರು 750ಕ್ಕೂ ಮಿಕ್ಕಿದ ನೌಕಾನೆಲೆಗಳನ್ನು ಸ್ಥಾಪಿಸಿ ತನಗೆ ವಿರುದ್ಧವಾಗಿರುವ ದೇಶಗಳನ್ನು ಬೆದರಿಸುತ್ತಿದೆ. ಈ ಮೂಲಕ ಮೂರನೇ ಜಗತ್ತಿನ ದೇಶಗಳ ಸಾರ್ವಭೌಮತ್ವವನ್ನು ನಾಶಪಡಿಸುವುದೇ ತನ್ನ ಉದ್ದೇಶವನ್ನಾಗಿಸಿದೆ. ಜಗತ್ತಿನೆಲ್ಲೆಡೆ ಯುದ್ದಗಳು ನಡೆದರೆ ಮಾತ್ರವೇ ಅಮೇರಿಕಾ ದೇಶದ ಆರ್ಥಿಕತೆ ಉಳಿಯುತ್ತದೆ ಎಂದು ಹೇಳಿದರು.

CITU ಜಿಲ್ಲಾ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡಿ, ಯುದ್ಧ ಹಾಗೂ ಸರ್ವನಾಶ ಎಂಬುವುದು ಬಂಡವಾಳಶಾಹಿ ಹಾಗೂ ಸಾಮ್ರಾಜ್ಯಶಾಹಿಗಳ ಉಸಿರು. ಅವುಗಳು ಇಲ್ಲದೆ ಹೋದರೆ ಇವೆರಡೂ ಶಕ್ತಿಗಳು ಕ್ಷಣಮಾತ್ರದಲ್ಲೇ ಸಾಯುತ್ತದೆ. ಅದಕ್ಕೆ ತನ್ನ ಅಸ್ತಿತ್ವಕ್ಕಾಗಿ ಜಗತ್ತಿನ ಹಲವೆಡೆ ಯುದ್ದಗಳನ್ನು ಪ್ರಚೋದಿಸಿ ಅಮಾಯಕ ಜನತೆಯ ಪ್ರಾಣಗಳನ್ನು ಬಲಿ ಪಡೆಯುತ್ತಿದೆ ಎಂದು ಹೇಳಿದರು.

DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡಿ,ಅಮೇರಿಕಾ ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಧಾಳಿ ಜಗತ್ತಿನಾದ್ಯಂತ ವ್ಯಾಪಕ ಪರಿಣಾಮ ಬಿದ್ದಿದ್ದು, ಪೆಟ್ರೋಲ್ ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದ್ದು ಜನಸಾಮಾನ್ಯರ ಬದುಕಂತೂ ತೀರಾ ಸಂಕಷ್ಟಕ್ಕೊಳಗಾಗಿದೆ ಎಂದು ಹೇಳಿದರು

ಪ್ರಾಸ್ತಾವಿಕವಾಗಿ ಮಾತನಾಡಿದ CITU ಜಿಲ್ಲಾ ಖಜಾಂಚಿ ಯೋಗೀಶ್ ಜಪ್ಪಿನಮೊಗರುರವರು ಯುದ್ಧದ ಅಪಾಯಗಳನ್ನು ವಿವರಿಸುತ್ತಾ, ಅಲಿಪ್ತ ನೀತಿಯನ್ನು ಪ್ರತಿಪಾದಿಸುತ್ತಿದ್ದ ಭಾರತವನ್ನು ಅಮೇರಿಕಾದ ಕಿರಿಯ ಪಾಲುದಾರರನ್ನಾಗಿಸಿದ ನರೇಂದ್ರ ಮೋದಿ ಸರಕಾರ ದೇಶದ ಘನತೆ ಗೌರವವನ್ನು ಮಣ್ಣುಪಾಲು ಮಾಡಿದೆ.ದೇಶದ ಪ್ರತಿಯೊಂದು ಆಂತರಿಕ ವಿಷಯಗಳಿಗೆ ಮೂಗು ತೂರಿಸುವ ಅಮೇರಿಕಾದ ದುರ್ವರ್ತನೆಯಿಂದಾಗಿ ದೇಶದ ಪ್ರಧಾನಿ ಟ್ರಂಪೋ ಅಥವಾ ಮೋದಿಯೋ ಎಂಬಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ರವಿಚಂದ್ರ ಕೊಂಚಾಡಿ, ಜಯಂತಿ ಶೆಟ್ಟಿ,ಆಶೋಕ್ ಶ್ರೀಯಾನ್, ಜಯಂತ ನಾಯಕ್, ಜಯಲಕ್ಷ್ಮಿ, ಭಾರತಿ ಬೋಳಾರ, DYFI ನಾಯಕರಾದ ನವೀನ್ ಕೊಂಚಾಡಿ, ತಯ್ಯುಬ್ ಬೆಂಗರೆ, ಮಹಿಳಾ ಸಂಘಟನೆಯ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ ಡಿಸೋಜ, ಆಶಾ ಬೋಳೂರು, ರೋಹಿಣಿ ಜಲ್ಲಿಗುಡ್ಡ,ಮಮತಾ, ಯೋಗಿತಾ ಮುಂತಾದವರು ಉಪಸ್ಥಿತರಿದ್ದರು