ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದು ಸುಮಾರು 14 ವರ್ಷಗಳೇ ಕಳೆದು ಹೋಗಿದೆ. ಇದೀಗ ಸುಪ್ರೀಂ ಕೋರ್ಟ್ ಪ್ರಕರಣದ ತನಿಖೆಯ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚನೆ ನೀಡಿದೆ. 2012ರ ಅಕ್ಟೋಬರ್‌ನಲ್ಲಿ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ನಾಪತ್ತೆಯಾಗಿದ್ದರು. ಮರುದಿನ ಅರಣ್ಯ ಪ್ರದೇಶದಲ್ಲಿ ಆಕೆಯ ಮೃತದೇಹ ಪತ್ತೆಯಾಗಿತ್ತು. ಪ್ರಾಥಮಿಕ ತನಿಖೆಯ ನಂತರ ಈಕೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂಬುದು ದೃಢಪಟ್ಟಿತ್ತು.
ಈ ಪ್ರಕರಣದ ಕುರಿತು ಆರಂಭದಲ್ಲಿ ಬೆಳ್ತಂಗಡಿ ಠಾಣೆಯ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸಿದ್ದರು. ನಂತರದಲ್ಲಿ ಸಿಬಿಐ ಪ್ರಕರಣದ ತನಿಖೆ ನಡೆಸಿತ್ತು. ಸಂತೋಷ್ ರಾವ್ ಎಂಬಾತನನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆತನನನ್ನು ಬಂಧಿಸಲಾಗಿತ್ತು. ಆದರೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಸಾಕ್ಷಾಧಾರಗಳ ಕೊರತೆಯಿಂದ ಸಂತೋಷ್ ರಾವ್‌ನನ್ನು ನಿರ್ಧೋಷಿ ಎಂದು ತೀರ್ಪು ನೀಡಿತ್ತು.
ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ತನಿಖಾ ಸಂಸ್ಥೆಗಳ ಲೋಪದೋಷಗಳನ್ನು ಎತ್ತಿ ತೋರಿಸಿದೆ. “ನೈಜ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾ ತಂಡ ವಿಫಲವಾಗಿದೆ” ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು. ಇದೇ ಅಂಶವನ್ನು ಆಧಾರವಾಗಿಟ್ಟು ಕೊಂಡು ಸೌಜನ್ಯ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸೌಜನ್ಯ ಕುಟುಂಬದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠ, ಕೆಳ ನ್ಯಾಯಾಲಯದ ತೀರ್ಪನ್ನು ಗಮನಿಸಿ, ಪ್ರಕರಣದಲ್ಲಿನ ತನಿಖೆಯ ವರದಿಯನ್ನು ಸಲ್ಲಿಸುವಂತೆ ಹೇಳಿದೆ. ಮಾತ್ರವಲ್ಲ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಕ್ಕೂ, ತನಿಖಾ ಸಂಸ್ಥೆಯಾಗಿರುವ ಸಿಬಿಐಗೂ ನೋಟೀಸ್ ಜಾರಿ ಮಾಡಿದೆ.
