ಮಹಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. 33 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸತತವಾಗಿ ಆಳುತ್ತಿರುವ ಬಿಜೆಪಿ ಕರಾವಳಿ ಜಿಲ್ಲೆಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಿ ಅಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ತುಳುನಾಡಿನ ಬಿಕ್ಕಟ್ಟುಗಳಿಗೆ ಉತ್ತರ ಅಷ್ಟು ಸರಳ ಅಲ್ಲ. ಬಿಜೆಪಿ ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರ ಕೊಡಲೇಬೇಕಾಗುತ್ತದೆ, ಅದಕ್ಕಿಂತ ಪ್ರಧಾನವಾಗಿ ತುಳುನಾಡಿನ ಯುವಜನತೆ ಈ ಪ್ರಶ್ನೆಗಳನ್ನು ಬಿಜೆಪಿ ಎದುರು ಬಲವಾಗಿ ಕೇಳಲೇಬೇಕಾಗಿದೆ.
ತುಳುನಾಡಿನ ಭಾಗ್ಯದ ಬಾಗಿಲು ತೆರೆಯುತ್ತದೆ ಎಂದು ಕೆಂಪು ಹಾಸು ಹಾಕಿ ಮಂಗಳೂರಿನಲ್ಲಿ ನೆಲೆಗೊಳಿಸಿದ mrpl ಈ ನೆಲದಲ್ಲಿ ಉಂಟು ಮಾಡಿರುವ ಅನಾಹುತ ನಮಗೆಲ್ಲಾ ತಿಳಿದಿರುವಂತದ್ದೆ. ಈ ಅನಾಹುತಗಳ ಜೊತೆಗೆ ಸ್ಥಳೀಯರಿಗೆ ತನ್ನ ಚಿನ್ನದಂತಹ ಉದ್ಯೋಗಗಳ ನೇಮಕಾತಿಯಲ್ಲಿ ನಿರಾಕರಣೆ ಮಾಡುತ್ತಿರುವುದನ್ನು ಸಹಿಸಲೇ ಸಾಧ್ಯವಿಲ್ಲ. ಈ ಕುರಿತು ನಾವೆಲ್ಲ ಬಹಳಷ್ಟು ಸಲ ಧ್ವನಿ ಎತ್ತಿದ್ದೇವೆ.
Mrpl ನ ಖಾಯಂ ಉದ್ಯೋಗಗಳಲ್ಲಿ ಸ್ಥಳೀಯರನ್ನು ಹೊರಗಿಡುವ ಪ್ರಶ್ನೆ ಪಕ್ಕಕ್ಕಿರಲಿ, ಗುತ್ತಿಗೆ ಉದ್ಯೋಗದ ನೇಮಕಾತಿಯಲ್ಲಾದರು ಅವಕಾಶ ಇದೆಯೆ ? ಎಂದು ನೋಡಿದರೆ ಅಲ್ಲೂ ಆಘಾತ ಕಾದಿದೆ.

Mrpl ನಲ್ಲಿ ಗಡಿಭದ್ರತಾ ಪಡೆ, mrpl ನ ಭದ್ರತಾ ವಿಭಾಗದ ಸೆಕ್ಯೂರಿಟಿಯ ಜೊತೆಗೆ ಅಗ್ಗದ ವೇತನದ ಗುತ್ತಿಗೆ ಆಧಾರಿತ ಸೆಕ್ಯೂರಿಟಿ ವ್ಯವಸ್ಥೆಯೂ ಇದೆ. ಇದರಲ್ಲಿ ಮಹಾರಾಷ್ಟ್ರದ ಪುಣೆ ಮೂಲದ “ಸನ್ ಸೆಕ್ಯೂರಿಟಿ” ಎಂಬ ಸೆಕ್ಯೂರಿಟಿ ಏಜನ್ಸಿಗೂ ಗುತ್ತಿಗೆ ದೊರಕಿದೆ. ಈ ಏಜನ್ಸಿ ಅಡಿಯಲ್ಲಿ ಸುಮಾರು ಇನ್ನೂರು ಜನ mrpl ನಲ್ಲಿ ಸೆಕ್ಯೂರಿಟಿ ಮೆನ್ ಗಳಾಗಿ ಕಂಪೆನಿಯ ಹೊರ ಭಾಗದಲ್ಲಿ ದುಡಿಯುತ್ತಿದ್ದಾರೆ. ಸುಮಾರು 21 ಸಾವಿರ ರೂಪಾಯಿ ವೇತನ ಏಜನ್ಸಿ ಇವರಿಗೆ ನೀಡುತ್ತದೆ. ಈ ಏಜನ್ಸಿ ಅಡಿ mrpl ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ದುಡಿಯುವ 200 ಜನರಲ್ಲಿ ಸುಮಾರು 130 ರಷ್ಟು ಜನ ಹೊರ ರಾಜ್ಯದವರು.ಇನ್ನುಳಿದ ಸುಮಾರು 70 ಜನರಷ್ಟೆ ಕನ್ನಡಿಗರಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿಯವರನ್ನು ಹುಡುಕಿದರೆ ಬೆರಳೆಣಿಕೆಗೂ ಸಿಗುವುದಿಲ್ಲ.
ಇದು mrpl ಒಂದರ ಕತೆ ಮಾತ್ರ ಅಲ್ಲ, sez ಸಹಿತ ದ.ಕ. ಉಡುಪಿ ಜಿಲ್ಲೆಯ ಬಹುತೇಕ ದೊಡ್ಡ ಕೈಗಾರಿಕೆಗಳ ಕತೆಯೂ ಹೌದು. ಬೇಕಿದ್ದರೆ mrpl, HPCL, SEZ, ಉಡುಪಿಯ ಕೊಜಂಟ್ರಿಕ್ಸ್, ಅದಾನಿ, ಅಂಬಾನಿಯ ಕರಾವಳಿಯಲ್ಲಿರುವ ಹಲವು ಉದ್ಯಮಗಳಿಗೆ ಒಂದು ಸುತ್ತು ಹಾಕಿ ಬನ್ನಿ. ಕನಿಷ್ಟ 20 ಸಾವಿರ ರೂಪಾಯಿ ವೇತನ ಇರುವ ಗುತ್ತಿಗೆ ಸೆಕ್ಯೂರಿಟಿ ನೌಕರರಲ್ಲಿ ಸ್ಥಳೀಯರು ಎಷ್ಟಿದ್ದಾರೆ ಎಂದು ಲೆಕ್ಕ ಸಿಗುತ್ತದೆ. ರಾಮ್ ದೇವ್ ರ ಪತಂಜಲಿಯಲ್ಲಂತೂ ಸೆಕ್ಯೂರಿಟಿ ಕೆಲಸಕ್ಕೆ ಕನ್ನಡಿಗರನ್ನು ನೇಮಕ ಮಾಡಲೇಬಾರದು ಎಂದು ಗುತ್ತಿಗೆ ಏಜನ್ಸಿಗಳಿಗೆ ಶರತ್ತನ್ನೆ ವಿಧಿಸಲಾಗಿದೆ.
ನಿರುದ್ಯೋಗದಿಂದ ತತ್ತರಿಸಿರುವ ತುಳುನಾಡಿನ ಯುವಕ, ಯುವತಿಯರಿಗೆ 20 ಸಾವಿರ ರೂಪಾಯಿ ವೇತನದ ಗುತ್ತಿಗೆ ಸೆಕ್ಯೂರಿಟಿ ಕೆಲಸ ಪಡೆಯುವ ಅರ್ಹತೆ/ಯೋಗ್ಯತೆಯೂ ಇಲ್ಲವೆ ? ಈ ಕುರಿತು ಕಳೆದ ಮೂರು ದಶಕದಿಂದ ತುಳುನಾಡಿನ ಯುವಜನತೆಯ ಅಖಂಡ ಬೆಂಬಲದೊಂದಿಗೆ ಸತತವಾಗಿ ಗೆದ್ದು ಅಭೇದ್ಯ ಕೋಟೆ ಕಟ್ಟಿಕೊಂಡಿರುವ ಬಿಜೆಪಿ ಪಕ್ಷ, ಅದರ ಸಂಸದ, ಶಾಸಕರು ಯಾವತ್ತಾದರೂ ಮಾತಾಡಿದ್ದಾರೆಯೆ ? ಈಗ ಹೊಸ ಅಭ್ಯರ್ಥಿಗಳಾಗಿ ಘೋಷಿಸಲ್ಪಟ್ಟವರು ಒಂದು ದಿನವಾದರು ಧ್ವನಿ ಎತ್ತಿದ್ದಾರೆಯೆ ? ಈ ಕುರಿತು ಅವರಿಗೆ ಅರಿವಿದೆಯೆ ?

ಬಿಜೆಪಿ ಪರಿವಾರದ ಅಜೆಂಡಾದಂತೆ ಮತೀಯವಾದದಿಂದ ಪ್ರೇರಿತರಾಗಿ ಬೀದಿಗಿಳಿಯುವುದು, ಮುಸ್ಲಿಂ ದ್ವೇಷದಿಂದ ಕುರುಡಾಗುವುದನ್ನು ಬಿಟ್ಟು ಕರಾವಳಿಯ ಯುವಜನತೆ ಈ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ತಮ್ಮನ್ನು ಕರಾಳವಾದ ನಿರುದ್ಯೋಗದ ಕೂಪಕ್ಕೆ ತಳ್ಳಿದ, ತಮ್ಮ ಕಣ್ಣೆದುರಿನ ಉದ್ಯೋಗಳನ್ನು ನಿರಾಕರಿಸುತ್ತಿರುವ ಬಿಜೆಪಿಯನ್ನು ಈ ಕುರಿತು ಪ್ರಶ್ನಿಸಬೇಕಿದೆ. “ನೆಲ ನಮ್ಮದು, ಜಲ ನಮ್ಮದು, ಉದ್ಯೋಗವೂ ನಮ್ಮದೆ” ಎಂಬ ಘೋಷಣೆ ಮೊಳಗಿಸಲು ಮುಂದಾಗಬೇಕಿದೆ. ಹೀಗೆ ಬದಲಾಗದಿದ್ದರೆ, ತುಳುನಾಡಿನ ಭವಿಷ್ಯ ಮತ್ತಷ್ಟು ಕತ್ತಲೆಗೆ ಸರಿಯಲಿದೆ. ಎಚ್ಚರ.
