ಸತ್ಯಾಂಶಕ್ಕೆ ದೂರವಿರುವ ವಿಷಯಗಳನ್ನು ಹರಡುತ್ತಿರುವುದು ಆರೋಗ್ಯ ಸಚಿವರೇ ಹೊರತು ಸಂಘಟನೆಗಳಲ್ಲ; ಡಿವೈಎಫ್ಐ ತಿರುಗೇಟು

ರಾಜ್ಯ

ಜನರ ಧಿಕ್ಕು ತಪ್ಪಿಸುತ್ತಿರುವುದು ಯಾರು.? ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಬೇಡಿಕೆಗಳನ್ನು ಕಡೆಗಣಿಸುತ್ತಿರುವುದು ಯಾರು.?

ಬೆಳ್ತಂಗಡಿ, ಬಂಟ್ವಾಳದ ತಾಲೂಕು ಆಸ್ಪತ್ರೆ, ಮೂಡಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಟ್ಲ ಸಮುದಾಯ ಆಸ್ಪತ್ರೆಯನ್ನು ಖಾಸಗೀ ಸಂಸ್ಥೆಗಳೊಂದಿಗೆ ಕರಾರು ಒಪ್ಪಂದ ಮಾಡಿರುವ ಆರೋಗ್ಯ ಇಲಾಖೆಯ ನಡೆಯನ್ನು ಡಿವೈಎಫ್ಐ ವಿರೋಧಿಸಿದ್ದು ಮತ್ತು ಈ ಒಪ್ಪಂದ ರದ್ದುಗೊಳಿಸಲು ಜನ ಚಳುವಳಿಗಳನ್ನು ಕೈಗೆತ್ತಿಕೊಂಡಿರುವ ವೇಳೆ ಸರಕಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಮೂಲಕ ” ಕೆಲವು ಸಂಘಟನೆಗಳು ಈ ಕುರಿತು ನಕರಾತ್ಮಕ ವಿಷಯಗಳನ್ನು ಹರಡುತ್ತಿದ್ದು ಇದು ಸತ್ಯಾಂಶಕ್ಕೆ ದೂರವಾಗಿದೆ” ಎಂದು ನೀಡಿದ ಹೇಳಿಕೆಯು ಬಾಲಿಶವಾದದ್ದು, ಜಿಲ್ಲೆಯಲ್ಲಿ ಈ ಕುರಿತು ಸೃಷ್ಡಿಯಾಗಿರುವ ವಿರೋಧವನ್ನು ಧಿಕ್ಕು ತಪ್ಪಿಸುವ ಮತ್ತು ಆರೋಗ್ಯ ಇಲಾಖೆಯ ಈ ತೀರ್ಮಾನವನ್ನು ಸಮರ್ಥಿಸಿಕೊಳ್ಳುವ ನಡೆಯಾಗಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಆರೋಪಿಸಿದೆ.

ಡಿವೈಎಫ್ಐ ಕಳೆದ ಹಲವು ವರುಷಗಳಿಂದ ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ಕಡೆಗಣನೆಯ ವಿರೋಧಿಸಿ ಸರಕಾರಿ ಆಸ್ಪತ್ರೆ ಬಲಪಡಿಸಿರಿ, ಖಾಸಗೀ ಆಸ್ಪತ್ರೆ ನಿಯಂತ್ರಿಸಿರಿ ಜಿಲ್ಲೆಯಲೊಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಸಹಿತ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸುತ್ತಾ ಬಂದಿದೆ. ಅಲ್ಲದೆ ಜಿಲ್ಲೆಯ ಜನರ ಪ್ರಬಲ ಬೇಡಿಕೆಯಾದ ಹೃದ್ರೋಗ ಮತ್ತು ಕ್ಯಾನ್ಸರ್ ಗೆ ಸಂಬಂಧಿಸಿ ಕಿದ್ವಾಯಿ ಹಾಗೂ ಜಯದೇವ ಆಸ್ಪತ್ರೆ ನಿರ್ಮಾಣಕ್ಕೆ ಆಗ್ರಹಿಸುತ್ತಾ ಬಂದಿದ್ದರೂ ಈ ಕುರಿತು ಆರೋಗ್ಯ ಇಲಾಖೆಯು ಯಾವ ಪ್ರಯತ್ನವನ್ನೂ ಮಾಡಿದ ಉದಾಹರಣೆಗಳಿಲ್ಲ. ಸದ್ಯ ಇರುವ ಸರಕಾರಿ ಆಸ್ಪತ್ರೆಗಳನ್ನಾದರೂ ಖಾಸಗೀ ಸಂಸ್ಥೆಗೆ ಹಸ್ತಾಂತರಿಸಿ ಬಿಡಿ ಎಂದು ಜಿಲ್ಲೆಯ ಜನ ಕೇಳಿಕೊಂಡಿದ್ದಾರೆಯೇ ? ಇಲ್ಲ. ಹಾಗಿದ್ದು ಇರುವ ಆಸ್ಪತ್ರೆಗಳನ್ನು ಬಲಪಡಿಸದ, ಹೊಸ ಆಸ್ಪತ್ರೆಗಳನ್ನು ಸ್ಥಾಪಿಸಲು ಸಾಧ್ಯವಾಗದ ಆರೋಗ್ಯ ಇಲಾಖೆಗೆ ಇರುವ ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಸಂಸ್ಥೆಗೆ ವಹಿಸುಕೊಡಲು ಹಿಂದಿರುವ ಆಸಕ್ತಿ ಏನು ಎಂದು ಜಿಲ್ಲೆಯ ಜನರಿಗೆ ಉತ್ತರಿಸಬೇಕು.

ಇತ್ತೀಚೇಗೆ ಡಿಸೆಂಬರ್ ನಲ್ಲಿ ನಡೆದ ಬೆಳಗಾವಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ಅವರು ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ, ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಹುದ್ದೆಗಳನ್ನು ತಿಂಗಳೊಳಗೆ ಭರ್ತಿ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದವರು , ಮತ್ತು ಕಲ್ಯಾಣ ಕರ್ನಾಟಕ ಸಹಿತ ರಾಜ್ಯಾದ್ಯಂತ ಹೊಸದಾಗಿ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳನ್ನು ಎಲ್ಲೆಲ್ಲಿ ಸ್ಥಾಪಿಸಬೇಕೆಂಬುದರ ಕುರಿತು ರಾಷ್ಟ್ರೀಯ ಆರೋಗ್ಯ ನೀತಿ ಮಾನದಂಡಗಳ ಅನ್ವಯ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ ಹಿಮಾಂಶು ಭೂಷಣ್ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ ಎಂದು ಹೇಳಿಕೊಂಡಿರುವ ಸಚಿವರು ಈಗ ಕೆಲದಿನಗಳಿಂದ ಯೂಟರ್ನ್ ಹೊಡೆದಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಸಂಸ್ಥೆಗೆ ಕರಾರು ಒಪ್ಪಂದ ಮಾಡಿರುವ ತೀರ್ಮಾನವನ್ನು ಇದು ಪ್ರಾಯೋಗಿಕ ಮುಂದೆ ರಾಜ್ಯಾದ್ಯಂತ ಇದನ್ನು ಜಾರಿಗೊಳಿಸಲು ಮುಂದಾಗಲಿವೆ ಎಂದು ಹೇಳಿಕೊಳ್ಳುತ್ತಿರುವಾಗ ಇಲ್ಲಿ ಜನರನ್ನು ಧಿಕ್ಕು ತಪ್ಪಿಸುತ್ತಿರುವುದು ಯಾರು? ಸುಳ್ಳು ಹೇಳಿಕೆಗಳನ್ನು ನೀಡಿ ಜನರ ಬೇಡಿಕೆಗಳನ್ನು ಕಡೆಗಣಿಸುತ್ತಿರುವುದು ಯಾರು? ಸಚಿವರ ಯಾವ ಹೇಳಿಕೆಗಳನ್ನು ನಿಜ ಎಂದು ನಾವು ನಂಬಿಕೊಳ್ಳಬೇಕು. ಹೀಗಿದ್ದು ಆರೋಗ್ಯ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಚಿವರ ನಾಟಕೀಯ ಬೆಳವಣೆಗೆಯನ್ನು ಅರ್ಥ ಮಾಡಿಕೊಳ್ಳದಷ್ಟು ಜನ ದಡ್ಡರೇನಲ್ಲ ಎಂದು ಡಿವೈಎಫ್ಐ ಅಪಾದಿಸಿದೆ.

ಡಿವೈಎಫ್ಐ ಆರೋಗ್ಯ ಇಲಾಖೆಯ ಮುಂದಿಟ್ಟಿರುವ ಬೇಡಿಕೆಯಲ್ಲಿ ಸಂಪೂರ್ಣ ಸ್ಪಷ್ಟತೆಯನ್ನು ಹೊಂದಿದೆ. ಇದರಲ್ಲಿ ಯಾವುದೇ ನಕರಾತ್ಮಕ ಅಥವಾ ಸತ್ಯಾಂಶಕ್ಕೆ ದೂರವಾಗಿರುವ ಯಾವುದೇ ಅಂಶಗಳನ್ನು ಹರಡುತ್ತಿಲ್ಲ. ಜನರ ಆರೋಗ್ಯದ ಹಕ್ಕನ್ನು ಖಾತ್ರಿಪಡಿಸಬೇಕಾಗಿದ್ದು ಸರಕಾರದ, ಆರೋಗ್ಯ ಇಲಾಖೆಯ ಕರ್ತವ್ಯ ಅಂತಹ ಕರ್ತವ್ಯ ನಿಭಾವಣೆಯಲ್ಲಿ ಲೋಪಗಳಾದ, ಜನರ ಬೇಡಿಕೆಗಳನ್ನು, ಹಕ್ಕುಗಳನ್ನು ಕಡೆಗಣಿಸಿದಾಗ ಡಿವೈಎಫ್ಐ ಪ್ರಶ್ನೆಸುತ್ತೆ ಮತ್ತದರ ವಿರುದ್ಧ ಜನಚಳುವಳಿಯನ್ನು ರೂಪಿಸುತ್ತದೆ. ಆರೋಗ್ಯ ಇಲಾಖೆ ಈ ಕೂಡಲೇ ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿರುವ ಕರಾರು ಒಪ್ಪಂದ ರದ್ದುಗೊಳಿಸಬೇಕು. ಹಾಗೂ ಸರಕಾರದ ಮುಂದಿಟ್ಟಿರುವ ಬೇಡಿಕೆ ಈಡೇರಿಸಲು ಮುಂದಾಗಬೇಕೆಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.