ಹೀಗೊಂದು ಮಾತು ಕರಾವಳಿಯ ಬಿಜೆಪಿ ರಾಜಕೀಯ ಪಡಸಾಲೆಯಲ್ಲಿ ಭಾರೀ ಜೋರಾಗಿ ಕೇಳಿ ಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ಬ್ಯಾರಿಗಳದ್ದೇ ದೊಡ್ಡ ಪ್ರಭಾವವಿದೆ. ಬಿಲ್ಲವ ಮತದಾರರು ಬಿಜೆಪಿ ಜೊತೆ ಗುರುತಿಸಿಕೊಂಡರೆ, ಬ್ಯಾರಿ ಮತದಾರರು ಕಾಂಗ್ರೆಸ್ ಜೊತೆಯಲ್ಲಿದ್ದಾರೆ. ವಿಚಿತ್ರವೆಂದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ, ಬ್ಯಾರಿಗಳ ಪ್ರಭಾವ ಜಾಸ್ತಿಯಿದ್ದರೂ ಅಧಿಕಾರ ಮಾತ್ರ ಬಂಟರ ಕೈಯಲ್ಲಿ. ಅದು ಕಾಂಗ್ರೆಸ್, ಬಿಜೆಪಿಯಾಗಲಿ ಕರಾವಳಿ ರಾಜಕಾರಣವನ್ನು ಆಳುತ್ತಿರುವುದು ಬಂಟರು ಮಾತ್ರ. ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ಬಿಲ್ಲವರಿಗೆ ಚೊಂಬು ಕೊಟ್ಟು ಬಂಟರು ಅಧಿಕಾರಕ್ಕೆ ಏರುತ್ತಿದ್ದಾರೆ ಅನ್ನುವ ಮಾತು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬಿಲ್ಲವರಲ್ಲಿಯೂ ರಾಜಕೀಯ ಪ್ರಜ್ಞೆ ಮೂಡಿದ್ದು, ಕರಾವಳಿಯಲ್ಲಿ ಬಿಲ್ಲವರು ಅಧಿಕಾರವನ್ನು ತಮ್ಮ ತೆಕ್ಕೆಗೆ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಬಿಜೆಪಿಯಲ್ಲಿ ಬಿಲ್ಲವ ಮತದಾರರೇ ನಿರ್ಣಾಯಕ. ಹಿಂದುತ್ವದ ಹೆಸರಿನಲ್ಲಿ ಬಿಲ್ಲವರನ್ನು ಬಲಿಪಶು ಮಾಡಿ ಇನ್ಯಾರೋ ಪೀಠದಲ್ಲಿ ಕೂರುವುದನ್ನು ಇತ್ತೀಚಿನ ದಿನಗಳಲ್ಲಿ ಬಿಲ್ಲವರು ವಿರೋಧಿಸುತ್ತಾ ಬಂದಿದ್ದು, ತಕ್ಕಮಟ್ಟಿಗೆ ಬಿಜೆಪಿಗೆ ಏಟು ಕೊಡುವಲ್ಲಿಯೂ ಯಶಸ್ವಿಯಾಗಿದ್ದಾರೆ. ಬಿಜೆಪಿಯೊಳಗಡೆ ಬಂಟರ ಪ್ರಾಬಲ್ಯಕ್ಕೆ ಬ್ರೇಕ್ ಹಾಕಲು ಬಿಲ್ಲವ ಸಮುದಾಯ ದೊಳಗಡೆ ಮಾಸ್ಟರ್ ಪ್ಲ್ಯಾನ್ ಸಜ್ಜುಗೊಳ್ಳುತ್ತಿದ್ದು, ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಅದು ಮುನ್ನಲೆಗೆ ಬರುವ ದಟ್ಟ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಸದರಾಗಿ ಆಯ್ಕೆಯಾದವರು ಕ್ಯಾಪ್ಟನ್ ಬ್ರಿಜೇಶ್ ಚೌಟ. ಇಡೀ ಜಿಲ್ಲೆಯಲ್ಲೇ ಬಿಲ್ಲವರ ಸಂಖ್ಯೆ ಜಾಸ್ತಿಯಿದ್ದರೂ ಬಂಟ ಸಮುದಾಯದ ಚೌಟ ಅನಾಯಾಸವಾಗಿ ಗೆದ್ದು ಬಂದಿದ್ದರು. ಚೌಟರಿಗಿಂತ ಮೊದಲು ನಳಿನ್ ಕುಮಾರ್ ಕಟೀಲು ಹ್ಯಾಟ್ರಿಕ್ ವಿಜಯಿಯಾಗಿದ್ದರು. ಬಿಲ್ಲವರು ತಮ್ಮ ಪರಮೋಚ್ಚ ನಾಯಕರು ಎಂದು ಕರೆಯಿಸಿಕೊಳ್ಳುವ ಜನಾರ್ದನ ಪೂಜಾರಿಯವರನ್ನು ಸೋಲಿಸಿ ನಳಿನ್ ಕುಮಾರ್ ಕಟೀಲ್ ರವರನ್ನು ಗೆಲ್ಲಿಸಿದ್ದರು. ಮೋದಿ ಮೇನಿಯಾ ಕೆಲಸ ಮಾಡಿತ್ತು. ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ, ಬಂಟ್ವಾಳದಲ್ಲಿ ರಾಜೇಶ್ ನಾಯಕ್ , ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾ ಹೀಗೆ ಬಂಟ ಶಾಸಕರದ್ದೇ ಅಧಿಪತ್ಯ. ಮತದಾರರು ಮಾತ್ರ ಬಿಲ್ಲವರು!
ಕಳೆದ ಲೋಕಸಭಾ ಚುನಾವಣೆ ವೇಳೆ ಬಿಲ್ಲವರ ಸ್ವಾಭಿಮಾನ ಬೆಳಕಿಗೆ ಬಂದಿತ್ತು. ಬಿಜೆಪಿ ಬಂಟ ಸಮುದಾಯದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಜನಾರ್ದನ ಪೂಜಾರಿ ಅವರ ಆಪ್ತಶಿಷ್ಯ ಬಿಲ್ಲವ ಸಮುದಾಯದ ಪದ್ಮರಾಜ್ ಆರ್ ಪೂಜಾರಿ ಯವರನ್ನು ಕಣಕ್ಕಿಳಿಸಿತ್ತು. ಚುನಾವಣಾ ಪ್ರಚಾರದ ತುಂಬೆಲ್ಲ ಬಿಲ್ಲವ ಸ್ವಾಭಿಮಾನ ಪ್ರತಿಧ್ವನಿಸಿತ್ತು. ಬಿಲ್ಲವರ ಸ್ವಾಭಿಮಾನಕ್ಕೆ ಬೆದರಿದ್ದ ಬಿಜೆಪಿ ಖುದ್ದು ಪ್ರಧಾನಿ ನರೇಂದ್ರ ಮೋದಿಯವರನ್ನು ಕರೆಯಿಸಿ ನಾರಾಯಣ ಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿಸುವ ಕೆಲಸಕ್ಕೆ ಮುಂದಾಗಿತ್ತು. ಈ ಚುನಾವಣೆಯಲ್ಲಿ ಪದ್ಮರಾಜ್ ಪೂಜಾರಿ ಸೋತರೂ ಇತಿಹಾಸದಲ್ಲೇ ಪ್ರಥಮ ಅನ್ನುವಂತೆ ಬಿಲ್ಲವರ ಮತಗಳು ಕಾಂಗ್ರೆಸ್ಸಿಗೆ ಕನ್ವರ್ಟ್ ಆಗಿತ್ತು.
ಇದು ಬಿಜೆಪಿಯ ಕಥೆಯಾದರೆ, ಕಾಂಗ್ರೆಸ್ಸಿನಲ್ಲೂ ಬ್ಯಾರಿ ಮತದಾರರ ಸಂಖ್ಯೆ ಗಣನೀಯವಾಗಿದ್ದರೂ, ಅಧಿಕಾರ ಮಾತ್ರ ಬಂಟರ ಕೈಗೆ. ಕಾಂಗ್ರೆಸ್ ಪಕ್ಷದ ಪ್ರಮುಖ ಪದಾಧಿಕಾರಿಗಳಲ್ಲಿ ಬಂಟರದ್ದೇ ಮಿಂಚಿಂಗ್. ಅಲ್ಪಸಂಖ್ಯಾತರು ಜೈಕಾರ ಕೂಗುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಬಿಜೆಪಿಯಲ್ಲಿ ಬಿಲ್ಲವರ ಸ್ಥಿತಿ, ಕಾಂಗ್ರೆಸ್ಸಿನಲ್ಲಿ ಬ್ಯಾರಿಗಳ ಸ್ಥಿತಿ ಒಂದೇ ತೆರನಾದುದು. ಇನ್ನಾದರೂ ಪಾಠ ಕಲಿಯದಿದ್ದರೆ, ಅಸ್ಮಿತೆ ರೂಪಿಸದಿದ್ದರೆ ಗಂಡಾಂತರ ಖಂಡಿತ.
ಈ ಬಾರಿ ಬಿಜೆಪಿಯೊಳಗಡೆ ಬಿಲ್ಲವರ ಸ್ವಾಭಿಮಾನ ಮತ್ತಷ್ಟು ಪ್ರಖರವಾಗುವ ಸಾಧ್ಯತೆ ದಟ್ಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯಾಗಿ ಎರಡು ಸ್ಥಾನ ಮಾತ್ರ ಬಂಟರಿಗೆ ನೀಡಬೇಕು. ಇಲ್ಲವಾದರೆ ನಮ್ಮ ದಾರಿ ನಮಗೆ ಅನ್ನುವ ಪ್ರಬಲ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಗೆ ರವಾನಿಸಿದ್ದಾರೆ. ಬಿಲ್ಲವರ ಮುನಿಸು ಕಟ್ಟಿಕೊಂಡು ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಂದರ್ಭದಲ್ಲೂ ಹಿಂದುತ್ವ ಕೈ ಹಿಡಿಯುವುದಿಲ್ಲ ಅನ್ನುವ ಅರಿವು ಬಿಜೆಪಿಗೆ ದಟ್ಟವಾಗಿದೆ. ಒಟ್ಟಾರೆಯಾಗಿ ಬಿಲ್ಲವರ ಸೂತ್ರಕ್ಕೆ ಬಿಜೆಪಿ ಹೈಕಮಾಂಡ್ ಅಸ್ತು ಅಂದಿದೆಯಂತೆ! ಹಾಗಾದರೆ ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಬಂಟರ ಅಧಿಪತ್ಯಕ್ಕೆ ಬ್ರೇಕ್ ಬೀಳುತ್ತಾ..? ಕಾದು ನೋಡೋಣ.
ಮಂಗಳೂರು ಉತ್ತರದಲ್ಲಿ ಶೆಟ್ರಿಗೆ ಗೇಟ್ ಪಾಸ್ ಹೌದಾ.?
ಹೀಗೊಂದು ಮಹತ್ವದ ಸುದ್ದಿ ಕರಾವಳಿಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಜೆಡಿಎಸ್ ಯುವ ಮುಖಂಡರಾಗಿ ರಾಜಕಾರಣಕ್ಕೆ ಕಾಲಿಟ್ಟ ಭರತ್ ಶೆಟ್ಟಿ ಬಿಜೆಪಿ ಸೇರಿ ಎರಡು ಬಾರಿ ಮಂಗಳೂರು ಉತ್ತರದ ಎಂಎಲ್ ಎ ಆಗಿದ್ದಾರೆ. ಎಂಎಲ್ಎ ಆಗುತ್ತಿದ್ದಂತೆ ಕರಾವಳಿಯ ಪ್ರಬಲ ಹಿಂದುತ್ವದ ಧ್ವನಿಯಾಗಿ ಮಿಂಚಿದರು. ಕಾರ್ಯಕರ್ತರ ನೋವುಗಳಿಗೆ ಧ್ವನಿಯಾದರು. ಹೈಕಮಾಂಡ್ ಮಟ್ಟದಲ್ಲೂ ಪ್ರಭಾವ ಇದ್ದುದರಿಂದ ಕಳೆದ ಬಾರಿಯೇ ಸೀಟು ಇಲ್ಲ ಅನ್ನುವ ಗುಸು ಗುಸು ಹಬ್ಬಿತ್ತಾದರೂ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಈ ಬಾರಿ ಶೆಟ್ಟರಿಗೆ ಸೀಟ್ ಇಲ್ಲ ಅನ್ನುವ ಸುದ್ದಿ ಹರಿದಾಡುತ್ತಿದೆ. ಭರತ್ ಶೆಟ್ಟರ ಬದಲು ಪ್ರಬಲ ಬಂಟ ಸಮುದಾಯದ ಉದ್ಯಮಿಯೊಬ್ಬರು ಕಣಕ್ಕಿಳಿಯಲಿದ್ದಾರೆ ಅನ್ನುವ ಸುದ್ದಿ ಹರಿದಾಡುತ್ತಿದೆ.
ರಾಜೇಶ್ ನಾಯಕ್ -ಭಟ್ಟರ ಮುಸುಕಿನ ಗುದ್ದಾಟ ಅಂತ್ಯವಾಯಿತೇ.?
ಬಂಟ್ವಾಳದಲ್ಲಿ ರಾಜೇಶ್ ನಾಯಕ್ ರಿಗೆ ಕಳೆದ ಬಾರಿಯೇ ಸೀಟು ಸಿಗುವುದು ಡೌಟು ಅನ್ನುವ ಮಾತಿತ್ತು. ಆದರೂ ಸೀಟು ಪಡೆದುಕೊಂಡಿದ್ದರು. ಆದರೆ ಈ ಬಾರಿ ರಾಜಕಾರಣದಲ್ಲಿ ನಿವೃತ್ತರಾಗುತ್ತಾರೆ ಅನ್ನುವ ಮಾತು ಕೇಳಿ ಬಂದಿತ್ತು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಅನ್ನುವ ಮಾತು ಹರಿದಾಡಿತ್ತು. ರಾಜೇಶ್ ನಾಯಕ್ ಸ್ಪರ್ಧಿಸುವುದಿಲ್ಲ ಅನ್ನುವ ಮಾತು ವೇಗ ಪಡೆಯುತ್ತಿದ್ದಂತೆ ಅಭ್ಯರ್ಥಿತನಕ್ಕೆ ಬಿಜೆಪಿಯಲ್ಲಿಯೇ ಹಲವಾರು ಮಂದಿ ಟವೆಲ್ ಹಾಕಿ ಕೂತಿದ್ದರು. ರಾಜೇಶ್ ನಾಯಕ್ ನಿವೃತ್ತಿಯ ಹಿಂದಿನ ಗುಟ್ಟು ಏನೆಂದರೆ ಸಂಘಪರಿವಾರದ ಪ್ರಬಲ ನಾಯಕರಾಗಿರುವ ಕಲ್ಲಡ್ಕ ಭಟ್ಟರೊಂದಿಗಿನ ಮುನಿಸು. ಕಲ್ಲಡ್ಕ ಭಟ್ಟರೇ ರಾಜೇಶ್ ನಾಯಕ್ ರಿಗೆ ಟಿಕೆಟ್ ಕೊಟ್ಟಿದ್ದರೂ ಆ ನಂತರ ಇವರಿಬ್ಬರ ಮಧ್ಯೆ ಸಂಬಂಧ ಹಳಸಿತ್ತಂತೆ! ಇದೇ ಕಾರಣಕ್ಕೆ ಭಟ್ರು ಮುಂದಿನ ಬಾರಿ ನಾಯಕ್ ರಿಗೆ ಟಿಕೆಟ್ ಇಲ್ಲ ಅನ್ನುವ ಫರ್ಮಾನು ಹೊರಡಿಸಿದ್ದರು. ಆದರೆ ಇದೀಗ ಬಂದ ಬಲ್ಲ ಮಾಹಿತಿಯ ಪ್ರಕಾರ ಭಟ್ರು ನಾಯಕ್ ಮಧ್ಯೆ ಸಂಧಾನ ನಡೆದಿದೆಯಂತೆ. ರಾಜ್ಯ ಬಿಜೆಪಿ ಅಧ್ಯಕ್ಷರ ಸಮ್ಮುಖದಲ್ಲೇ ದೋಸ್ತಿ ನಡೆದಿದೆ. ಹಾಗಾಗಿ ಮುಂದಿನ ಬಾರಿ ನಾಯಕ್ ಅವರೇ ಅಭ್ಯರ್ಥಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಅಭ್ಯರ್ಥಿತನಕ್ಕೆ ಟವೆಲ್ ಹಾಕಿದವರ ಮುಖ ಸಪ್ಪೆಯಾಗಿದೆಯಂತೆ.
ಬರೋಡ ಶೆಟ್ರ ಕಥೆ ಏನು?
ಕಳೆದ ಒಂದು ವರ್ಷದಿಂದ ತೆರೆಮರೆಯಲ್ಲಿ ಬಿಜೆಪಿಯಲ್ಲಿ ಕೇಳಿ ಬರುತ್ತಿರುವ ದೊಡ್ಡ ಹೆಸರೇ ಬರೋಡಾ ಶಶಿಧರ್ ಶೆಟ್ಟಿ ಅವರದ್ದು. ಮುಂಬೈಯ ಪ್ರತಿಷ್ಠಿತ ಉದ್ಯಮಿಯಾಗಿರುವ ಬರೋಡಾ ಶೆಟ್ಟಿ ಅವರಿಗೆ ಬಿಜೆಪಿಯಲ್ಲಿ ಟಿಕೆಟ್ ಪಿಕ್ಸ್ ಅನ್ನುವ ಮಾತಿದೆ. ಕಾಪುವಿನಲ್ಲಿ ಮುಂಬೈ ಉದ್ಯಮಿಯಾಗಿದ್ದ ಗುರ್ಮೆ ಸುರೇಶ್ ಶೆಟ್ಟಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದಂತೆ, ಈ ಬಾರಿ ಬರೋಡಾ ಶೆಟ್ಟರಿಗೆ ಒಂದು ಛಾನ್ಸ್ ಕೊಡಲು ಬಿಜೆಪಿಯೊಳಗಡೆ ಭಾರೀ ಕಸರತ್ತು ನಡೆಯುತ್ತಿದೆ. ಆದರೆ ಯಾವ ಕ್ಷೇತ್ರದಿಂದ ನಿಲ್ಲಿಸುವುದು ಅನ್ನುವುದೇ ಈಗ ಯಕ್ಷ ಪ್ರಶ್ನೆಯಾಗಿದೆ. ಬಂಟ್ವಾಳದಲ್ಲಿ ಸೀಟು ಫಿಕ್ಸ್ ಅನ್ನುವ ಸುದ್ದಿ ಹರಿದಾಡಿದರೂ, ಅದು ಪಕ್ಕಾ ಆಗಿಲ್ಲ. ಮತ್ತೊಂದು ಮಾಹಿತಿಯ ಪ್ರಕಾರ ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟರ ಬದಲಿಗೆ ಬರೋಡಾ ಶೆಟ್ಟರಿಗೆ ಸ್ಥಾನ ಸಿಗುತ್ತಾ..? ಅಥವಾ ಬೆಳ್ತಂಗಡಿಯಲ್ಲಿ ಹರೀಶ್ ಪೂಂಜಾರಿಗೆ ಗೇಟ್ ಪಾಸ್ ಕೊಟ್ಟು ಬರೋಡಾ ಶೆಟ್ಟರನ್ನು ನಿಲ್ಲಿಸುತ್ತರಾ..? ಅನ್ನುವ ಪ್ರಶ್ನೆ ಹಾಗೆಯೇ ಇದೆ.
ಬೆಳ್ತಂಗಡಿಯಲ್ಲಿ ಹ್ಯಾಟ್ರಿಕ್ ಗೆದ್ದವರಿಲ್ಲ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹರೀಶ್ ಪೂಂಜಾ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ. ತನ್ನ ವಿವಾದದ ಮೂಲಕ ಸದ್ದು ಮಾಡಿರುವ ಪೂಂಜಾರಿಗೆ ಮೂರನೇ ಬಾರಿ ಟಿಕೆಟ್ ಸಿಗುತ್ತಾ ಅನ್ನುವುದೇ ಇದೀಗ ಎದ್ದಿರುವ ಪ್ರಶ್ನೆ. ಒಂದು ಮೂಲದ ಪ್ರಕಾರ ಹರೀಶ್ ಪೂಂಜರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ನಿರ್ಧರಿಸಿದೆಯಂತೆ. ಆದರೆ ಅದಿನ್ನು ಪಕ್ಕಾ ಆಗಿಲ್ಲ. ವಿಶೇಷ ಅಂದರೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ ಈವರೆಗೂ ಎರಡು ಬಾರಿ ಗೆದ್ದಿದ್ದೆ ಇತಿಹಾಸ. ಮೂರನೇ ಬಾರಿ ಸ್ಪರ್ಧಿಸಿ ಸೋತ ಉದಾಹರಣೆಯಿದೆ. ಹರೀಶ್ ಪೂಂಜ ಟಿಕೆಟ್ ಲಭಿಸಿ ಮೂರನೇ ಬಾರಿ ಸ್ಪರ್ಧಿಸಿದರೆ ಗೆಲ್ಲಬಹುದೇ ಅನ್ನುವುದು ಈಗಿನ ಪ್ರಶ್ನೆ. 1962 ಮತ್ತು 67 ಈ ಎರಡು ಅವಧಿಯಲ್ಲಿ ಬಂಟ್ವಾಳದ ವೈಕುಂಠ ಬಾಳಿಗಾ ಶಾಸಕರಾಗಿ ಆಯ್ಕೆಯಾಗಿದ್ದರು. 1983 ಮತ್ತು 85 ಈ ಎರಡು ಅವಧಿಯಲ್ಲಿ ಬೆಳ್ತಂಗಡಿಯಲ್ಲಿ ಬಿಜೆಪಿ ಬಾವುಟ. 2008 ಮತ್ತು 2013 ರಲ್ಲಿ ವಸಂತ ಬಂಗೇರ ಸತತ ಎರಡು ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಮೂರನೇ ಬಾರಿ ಸ್ಪರ್ಧಿಸಿದಾಗ ಸೋಲು ಕಂಡಿದ್ದರು. ಹರೀಶ್ ಪೂಂಜರನ್ನು ಮುಂದಿನ ಅವಧಿಯಲ್ಲಿ ಬದಲಾಯಿಸುತ್ತಾರೋ ಅನ್ನುವುದು ಈಗ ಎದ್ದಿರುವ ಪ್ರಶ್ನೆ.
