ರಾಜ್ಯ ನಾಯಕತ್ವದ ಕುರಿತ ಸ್ವಷ್ಟ ನಿರ್ಧಾರದ ಅನಿವಾರ್ಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್

ರಾಜ್ಯ

ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನು ಮುಂದೆ ಕಾಂಗ್ರೆಸ್‌‍ ಹೈಕಮಾಂಡ್‌ಗೆ ಕರ್ನಾಟಕ ರಾಜ್ಯದ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರದ ಕಾರ್ಯದಲ್ಲಿ ನಿರತರಾಗಿದ್ದ ಕಾರಣ ರಾಜ್ಯದಿಂದ ತೆರಳುವ ಶಾಸಕರು, ಸಚಿವರ ನಿಯೋಗಕ್ಕೆ ಸಮಯ ನೀಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ಚುನಾವಣೆಗಳು ಮುಕ್ತಾಯವಾಗಿವೆ. ರಾಹುಲ್‌ ಗಾಂಧಿ ದೆಹಲಿಗೆ ಮರಳಿದ್ದಾರೆ. ಕರ್ನಾಟಕದ ನಾಯಕತ್ವ ಬದಲಾವಣೆ ಅಥವಾ ಸಚಿವ ಸಂಪುಟ ಪುನರ್ರಚನೆ ಕುರಿತಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ.

ನಾಯಕತ್ವ ಬದಲಾವಣೆ ರಾಹುಲ್‌ಗಾಂಧಿ ಅವರಿಗೆ ಇಷ್ಟವಿಲ್ಲದೇ ಇರುವ ಕಾರಣಕ್ಕಾಗಿ ಇಲ್ಲಿವರೆಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಪ್ರತ್ಯೇಕವಾಗಿ ಭೇಟಿ ಮಾಡಲು ಸಮಯ ನೀಡಿಲ್ಲ. ಆದರೆ ಡಿ.ಕೆ.ಶಿವಕುಮಾರ್‌ ಪದೇ ಪದೇ ದೆಹಲಿಗೆ ಹೋಗಿ ಒತ್ತಡ ಹಾಕುತ್ತಲೇ ಬಂದಿದ್ದಾರೆ. ಹಲವಾರು ಬಾರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡಿ, ತಮ್ಮ ಅಹವಾಲನ್ನು ಹೇಳಿಕೊಂಡಿದ್ದಾರೆ. ಆದರೆ ರಾಹುಲ್‌ಗಾಂಧಿಯವರ ಭೇಟಿ ಸಾಧ್ಯವಾಗಿಲ್ಲ. ಸಿದ್ದರಾಮಯ್ಯನವರು ರಾಹುಲ್‌ಗಾಂಧಿ ಹೇಳಿದರೆ ಮಾತ್ರ ಕುರ್ಚಿ ಬಿಡುತ್ತೇನೆ ಎಂದಿದ್ದಾರೆ. ಆ ವಿಚಾರವನ್ನು ವಿವರಿಸಿ ನಾಯಕತ್ವ ಬದಲಾವಣೆಗೆ ಮುನ್ನುಡಿ ಬರೆಯಲು ನಾನಾ ರೀತಿ ಕಸರತ್ತುಗಳಾಗುತ್ತಿವೆ. ಆದರೂ ರಾಹುಲ್‌ ಗಾಂಧಿ ಭೇಟಿಗೆ ಸಮಯ ನೀಡಿಲ್ಲ. ಮಲ್ಲಿಕಾರ್ಜುನ್‌ ಖರ್ಗೆ ಅವರು ಪ್ರತಿ ಬಾರಿಯೂ ಡಿ.ಕೆ.ಶಿವಕುಮಾರ್‌ ಅವರನ್ನು ಸಮಾಧಾನ ಪಡಿಸಿ ಕಳುಹಿಸುತ್ತಿದ್ದಾರೆ.

ರಾಹುಲ್‌ ಗಾಂಧಿ ದೆಹಲಿಗೆ ಮರಳಿರುವುದರಿಂದ ಈ ಬಾರಿ ಡಿ.ಕೆ. ಶಿವಕುಮಾರ್‌ ಈ ವಾರದೊಳಗೆ ಮತ್ತೆ ದೆಹಲಿಗೆ ಮುಖ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಈ ವರೆಗೂ ಚುನಾವಣೆ ಹಾಗೂ ಇತರ ಕಾರ್ಯಗಳ ನೆಪವೊಡ್ಡಿ ಸಮಯ ದೂಡುತ್ತಿದ್ದ ರಾಹುಲ್‌ ಗಾಂಧಿ, ಈಗ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದ ಸಚಿವರಾದ ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿಯವರು ಇಂದು ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ಚುನಾವಣೆಯ ಪ್ರಕ್ರಿಯೆಗಳು ಮುಗಿದರೂ ಚುನಾವಣೆ ಫಲಿತಾಂಶ ಬರುವವರೆಗೂ ತಾಳೆಯಿಂದ ಇರುವಂತೆ ಡಿ.ಕೆ.ಶಿವಕುಮಾರ್‌ ಅವರಿಗೆ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಕಾಂಗ್ರೆಸ್‌‍ ಹೈಕಮಾಂಡ್‌ಗೆ ರಾಜ್ಯ ರಾಜಕಾರಣಕ್ಕೆ ಸಂಬಂಧಪಟ್ಟಂತೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.