ಸುರತ್ಕಲ್: ಮಹಿಳೆಯ ಕೊಲೆಗೈದು, 24 ಪವನ್ ಚಿನ್ನದ ಒಡವೆ ದೋಚಿದ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಕರಾವಳಿ

ಸರಿ-ಸುಮಾರು ಹನ್ನೆರಡು ವರ್ಷಗಳ ಹಿಂದೆ (2014 ರಲ್ಲಿ ) ಕುಳಾಯಿ ಹೊಸಬೆಟ್ಟುವಿನ ಕೋರ್ದಬ್ಬು ‘ಕಲ’ದ ಬಳಿಯ ನಿವಾಸಿ ಶ್ರೀಮತಿ ಸುಮತಿ ಪ್ರಭು ಎಂಬವರ ಕುತ್ತಿಗೆಗೆ ಚೂರಿಯಿಂದ ಕೊಯ್ದು, ಕೊಲೆ ಮಾಡಿ ಮೈಮೇಲಿದ್ದ ಸರಿ-ಸುಮಾರು 3 ಲಕ್ಷದ 80 ಸಾವಿರ ರೂಪಾಯಿ ಬೆಲೆ ಬಾಳುವ, 24 ಪವನ್ ತೂಕದ ಚಿನ್ನದ ಒಡವೆಗಳನ್ನು ದೋಚಿದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ 44/2014 ರಂತೆ ಪ್ರಕರಣನ್ನು ದಾಖಲಿಸಿಕೊಂಡ ಸುರತ್ಕಲ್ ಪೊಲೀಸರು ಪ್ರಕರಣದ ಆರೋಪಿಗಳಾದ ಶಿವರಾಮ್, ಭರತ್ ಪುರ ಜಿಲ್ಲೆ, ರಾಜಸ್ಥಾನ. ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ, ತಂದೆ: ಗೋವಿಂದ ಸಿಂಗ್, ಭರತ್ ಪುರ ಜಿಲ್ಲೆ, ರಾಜಸ್ಥಾನ. ಶಹನ್ವಾಜ್ @ಶಾನು, ತಂದೆ: ಯಹಶಾನ್, ಉತ್ತರ ಪ್ರದೇಶ ಎಂಬವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿತರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದಂತೆ, ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್.ಸಿ ನಂ: 80/2014 & ಎಸ್.ಸಿ ನಂ: 105/2024 ರಂತೆ ಪ್ರಕರಣ ವಿಚಾರಣೆಯಲ್ಲಿರುತ್ತದೆ.

ಈ ಪ್ರಕರಣದ ಆರೋಪಿತನಾದ ಬಹದ್ದೂರ್ ಸಿಂಗ್ @ ಬಹದ್ದೂರ್ @ ಬಯ್ಯ ಎಂಬಾತನು ಕಳೆದ ಆರು ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಮಾನ್ಯ ನ್ಯಾಯಾಲಯವು ಆರೋಪಿತನ ಮೇಲೆ ದಸ್ತಗಿರಿ ವಾರಂಟ್ ನ್ನು ಹೊರಡಿಸಿದ್ದು ಆರೋಪಿಯು ರಾಜಸ್ಥಾನದ ವಿಳಾಸದಲ್ಲಿ ವಾಸವಿರದೇ ಬೇರೆ ಕಡೆ ತಲೆಮರೆಸಿಕೊಂಡಿದ್ದ. ಈತನ ಮೇಲೆ ಮಾನ್ಯ ನ್ಯಾಯಾಲಯವು ಉದ್ಘೋಷಣೆ ಹೊರಡಿಸಿರುತ್ತದೆ.

ಈ ಬಗ್ಗೆ ಆರೋಪಿತನನ್ನು ಶೀಘ್ರವೇ ಪತ್ತೆ ಮಾಡಿ, ನ್ಯಾಯಾಲಯಕ್ಕೆ ಹಾಜರುಪಡಿಸುವ ಸಲುವಾಗಿ ಮೇಲಾಧಿಕಾರಿಗಳ ಆದೇಶದಂತೆ ವಿಶೇಷ ತಂಡ ರಚಿಸಿ, ವಿಶೇಷ ತಂಡದಲ್ಲಿ ನೇಮಕಗೊಂಡ ಸುರತ್ಕಲ್ ಠಾಣೆಯ ಸಿಬ್ಬಂದಿಗಳಾದ ಅಜಿತ್ ಮ್ಯಾಥ್ಯು, ಸುನಿಲ್ ಕುಶನಾಳ ಮತ್ತು ಮೋಹನ್ ಎಂಬವರು ಈತನ ಬಗ್ಗೆ ಮಾಹಿತಿ ಕಲೆಹಾಕಿ, ಈತನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಗುರುಮಾರನಹಳ್ಳಿಯಲ್ಲಿ ವಾಸವಿರುವ ಬಗ್ಗೆ ಖಚಿತ ಪಡಿಸಿ, ಅಲ್ಲಿಗೆ ತೆರಳಿದ ವಿಶೇಷ ತಂಡದ ಪೊಲೀಸ್ ಸಿಬಂಧಿಗಳು ಆರೋಪಿ ಬಹುದ್ದೂರ್ ಸಿಂಗ್ @ ಬಹುದ್ದುರ @ ಬುಯ್ಯ ಎಂಬಾತನನ್ನು ದಿನಾಂಕ: 03.05.2026 ರಂದು ದಸ್ತಗಿರಿ ಮಾಡಿ ತಂದು, ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.