ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ತಂಡದ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ
ಪೊಲೀಸರೆಂದರೆ ಸಾಕು ನಾಗರೀಕರು ಭಯ ಬೀಳುವ ಪ್ರಸಂಗವೇ ಹೆಚ್ಚು. ಅಪರಾಧಿಗಳ ಹೆಡೆಮುರಿ ಕಟ್ಟಿ ಜೈಲು ಕಂಬಿಗೆ ದೂಡುವುದೇ ಪೊಲೀಸರ ಕೆಲಸ ಅಂದುಕೊಂಡವರೆ ಹೆಚ್ಚು. ಆದರೆ ಪಣಂಬೂರು ಪೊಲೀಸರು ಇದಕ್ಕಿಂತ ಭಿನ್ನ. ಮಾನವೀಯ ಕಾಳಜಿಗೆ ಪಣಂಬೂರು ಪೊಲೀಸರು ಎತ್ತಿದ ಕೈ ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ಕಳೆದ ಆರು ತಿಂಗಳ ಹಿಂದೆ ಪಣಂಬೂರು ಇನ್ಸ್ ಪೆಕ್ಟರ್ ಸಲೀಂ ಅಬ್ಬಾಸ್ ವಳಾಲ್ ನೇತೃತ್ವದ ಪೊಲೀಸ್ ತಂಡ ತಣ್ಣೀರುಬಾವಿ ಬೀಚ್‌ನಲ್ಲಿ ತನ್ನ ನಾಲ್ಕು ವರ್ಷದ ಸಣ್ಣ ಮಗಳೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಾಟ್ಸಾಪ್‌ನಲ್ಲಿ ವಿಡಿಯೋ ಹರಿಬಿಟ್ಟು ನಂತರ ತನ್ನ ಮನೆಗೆ ಹೋಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದ ತಂದೆ ಮತ್ತು ಮಗಳ ಪ್ರಾಣ ರಕ್ಷಿಸಿ ಕರಾವಳಿ ಜನತೆಯ ಹೃದಯ ಗೆದ್ದಿದ್ದರು. ಇದೀಗ ಮತ್ತೆ ಪಣಂಬೂರು ಪೊಲೀಸರ ಮಾನವೀಯ ಕಾರ್ಯ ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ. ಹಾಸನ ಮೂಲದ ಕೃಷಿಕರೊಬ್ಬರ ಜೀವ ರಕ್ಷಿಸುವ ಮೂಲಕ ಅಮೂಲ್ಯ ಜೀವವೊಂದನ್ನು ರಕ್ಷಿಸಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣ ಬೆಳಗೊಳ ಸಮೀಪದ ಹಳ್ಳಿಯ ನಿವಾಸಿಯಾಗಿರುವ ಕೃಷಿಕನೊಬ್ಬ ಆರೋಗ್ಯ ಮತ್ತು ಹಣಕಾಸಿನ ಸಮಸ್ಯೆಯಿಂದ ಮನನೊಂದು ಶುಕ್ರವಾರ ಬೆಳಿಗ್ಗೆ ಮನೆಯಿಂದ ಯಾರಿಗೂ ತಿಳಿಸದೆ ಹೊರಟಿದ್ದ. ಮೊಬೈಲ್ ಪೋನ್ ಮಾತ್ರ ಆನ್ ಲೈನ್ ನಲ್ಲಿಟ್ಟುಕೊಂಡಿದ್ದ ಆತ. ಮನೆಯವರು ಹಾಗೂ ಸಂಬಂಧಿಕರು ಮನೆಗೆ ಮರಳುವಂತೆ ಮನವಿ ಮಾಡಿದರೂ ತನ್ನಿರುವ ಸ್ಥಳ ತಿಳಿಸದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಸಂಬಂಧಿಕರು ನಿವೃತ್ತ ಅಧಿಕಾರಿಯೊಬ್ಬರ ಮೂಲಕ ಪಣಂಬೂರು ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್‌ರವರನ್ನು ಸಂಪರ್ಕಿಸಿ ವಿಚಾರ ತಿಳಿಸಿ ಹೇಗಾದರೂ ಮಾಡಿ ತಮ್ಮವರನ್ನು ಕಾಪಾಡುವಂತೆ ಕೇಳಿಕೊಂಡಿರುತ್ತಾರೆ. ಕೂಡಲೇ ಈ ಬಗ್ಗೆ ಪೊಲೀಸ್ ಇನ್ಸ್‌ಪೆಕ್ಟರ್ ವಿಚಾರವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ತಮ್ಮ ತಂಡದೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದ ವ್ಯಕ್ತಿಯ ಪತ್ತೆಗಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ.ಪೊಲೀಸ್ ಕಮೀಷನರ್ ಕಛೇರಿಯ ತಾಂತ್ರಿಕ ಘಟಕದೊಂದಿಗೆ ಸಮನ್ವಯ ಸಾಧಿಸಿ ಆತ್ಮಹತ್ಯೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿರುತ್ತಾರೆ. ಮೊದಲಿಗೆ ಫೋನ್ ಮಾಡಿ ಸಂಪರ್ಕ ಸಾಧಿಸಿದ ಪೊಲೀಸರು ಕೌನ್ಸಿಲಿಂಗ್ ಮಾಡಿ ಎಷ್ಟು ಸಾಂತ್ವಾನ ಹೇಳಿದರೂ ವ್ಯಕ್ತಿ ಸ್ಪಂದಿಸಿರುವುದಿಲ್ಲ. ಕೊನೆಗೆ ನಿರಂತರ ಒಂದುವರೆ ಗಂಟೆ ಕಾಲ ಹುಡುಕಾಡಿದ ನಂತರ ಸಂಜೆ ಸುಮಾರು 7:00 ಗಂಟೆಗೆ ಕೂಳೂರು ಸೇತುವೆ ಬಳಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ವ್ಯಕ್ತಿ ಪತ್ತೆಯಾದ ಸ್ಥಳವು ಪಣಂಬೂರು ಠಾಣಾ ವ್ಯಾಪ್ತಿಯ ಹೊರಗಡೆ ಕಾವೂರು ಠಾಣಾ ವ್ಯಾಪ್ತಿಗೆ ಸೇರಿದ್ದರೂ ಒಂದು ಅಮೂಲ್ಯ ಜೀವವನ್ನು ಉಳಿಸುವ ಸದುದ್ದೇಶದಲ್ಲಿ ಸರಹದ್ದಿನ ಬಗ್ಗೆ ಚಿಂತಿಸದೇ ಸಕಾಲಿಕ ಕ್ರಮ ಕೈಗೊಂಡು ಅವರನ್ನು ಪಣಂಬೂರು ಠಾಣೆಗೆ ಕರೆದುಕೊಂಡು ಬಂದು ನೀರು,ಆಹಾರ ನೀಡಿ ಸತ್ಕರಿಸಿ , ಕೌನ್ಸೆಲಿಂಗ್ ನಡೆಸಿ ಆತ್ಮಹತ್ಯೆ ಸಮಸ್ಯೆಗಳಿಗೆ ಪರಿಹಾರವಲ್ಲ ಎಂಬ ಬುದ್ದಿ ಮಾತು ಹೇಳಿ ಆತ್ಮ ವಿಶ್ವಾಸ ತುಂಬಿರುತ್ತಾರೆ. ಕೊನೆಗೆ ಅವರ ಊರಿನಿಂದ ಬಂದ ಸಂಬಂಧಿಕರ ಜೊತೆ ಅವರನ್ನು ಮನೆಗೆ ಕಳಿಸಿ ಕೊಟ್ಟಿರುತ್ತಾರೆ. ತಮ್ಮವರ ಪ್ರಾಣವನ್ನು ಉಳಿಸಿದ ಪಣಂಬೂರು ಪೊಲೀಸರ ಕಾರ್ಯಕ್ಕೆ ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿರುತ್ತಾರೆ.
