ಮಂಗಳೂರು: ಬಜಪೆಯ ಪಟಾಕಿ ಅಂಗಡಿಗೆ ನುಗ್ಗಿ, ದಾಂಧಲೆಗೈದು ಹಫ್ತಾ ವಸೂಲಿ ಪ್ರಕರಣ; KCOCA ಪ್ರಕರಣದ ಬಂಧಿತ ಆರೋಪಿಗಳಿಗೆ ಜಾಮೀನು

ಕರಾವಳಿ

ಬಜಪೆ ಠಾಣಾ ವ್ಯಾಪ್ತಿಯಲ್ಲಿ ಪಟಾಕಿ ಅಂಗಡಿಗೆ ನುಗ್ಗಿ, ದಾಂಧಲೆಗೈದ ಪ್ರಕರಣದಲ್ಲಿ ದಾಖಲಾಗಿದ್ದ KCOCA ಪ್ರಕರಣದ ಆರೋಪಿಗಳಾದ, ಪ್ರಶಾಂತ್ @ ಪಚ್ಚು, ಗಣೇಶ್ @ ಗಣಿ, ಅಶ್ವಿತ್ ಎಂಬವರಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ KCOCA ವಿಶೇಷ ನ್ಯಾಯಾಲಯ, ಮೈಸೂರು, ಈ ಮೂರೂ ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.

ದಿನಾಂಕ 22-10-2025 ರಂದು ಸಂಜೆ ಸುಮಾರು 4:00ರ ಸಮಯಕ್ಕೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಮಾರ್ಕೆಟ್ ಬಳಿ ಇರುವ ದಾಮೋದರ್ ಎಂಬವರ ಮಾಲೀಕತ್ವದಲ್ಲಿರುವ ಪಟಾಕಿ ಅಂಗಡಿಯಲ್ಲಿ ಓಂ ಪ್ರಸಾದ್ ಎಂಬವರು ಕೆಲಸ ಮಾಡುತ್ತಿದಂತಹ ಸಮಯದಲ್ಲಿ, ಆರೋಪಿಗಳಾದ ಪ್ರಶಾಂತ್ @ ಪಚ್ಚು, ಗಣೇಶ್ @ ಗಣಿ, ಅಶ್ವಿತ್ ಅಂಗಡಿಗೆ ಬಂದು ಪಟಾಕಿಗೆ ಬೇಡಿಕೆ ಇಟ್ಟಿರುತ್ತಾರೆ. ಬಜಪೆಯ ಪಟಾಕಿ ಆಂಗಡಿಯ ಕೆಲಸದಾತ ಓಂ ಪ್ರಸಾದ್ ರವರು ಎಷ್ಟು ಮೊತ್ತದ ಪಟಾಕಿಯನ್ನು ಕೊಡಬೇಕು ಎಂದು ವಿಚಾರಿಸಿದಾಗ, ಆರೋಪಿಗಳು ಪಟಾಕಿಯನ್ನು ಉಚಿತವಾಗಿ ಹಫ್ತಾದ ರೂಪದಲ್ಲಿ ನೀಡಬೇಕು ಎಂದು ಅವಾಜ್ ಹಾಕಿದ್ದರು. ಪಟಾಕಿ ಹಫ್ತಾದ ರೀತಿಯಲ್ಲಿ ನೀಡಲು ಸಾಧ್ಯವಿಲ್ಲವೆಂದು ನಿರಾಕರಿಸಿದಾಗ, ಆರೋಪಿಗಳು ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ಜೀವ ಬೆದರಿಕೆ ನೀಡಿ, ಹಲ್ಲೆಗೈಯ್ಯಲು ಮುಂದಾಗಿದ್ದರು.

ಈ ಸಂಬಂಧ ಪಟಾಕಿ ಅಂಗಡಿ ಕೆಲಸಗಾರ ಓಂ ಪ್ರಸಾದ್ ಎಂಬವರು ದಿನಾಂಕ: 23-10-25 ರಂದು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರನ್ನು ಸ್ವೀಕರಿಸಿದ ಬಜಪೆ ಪೊಲೀಸರು ಆರೋಪಿಗಳ ವಿರುದ್ದ BNS ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ, ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿದಿಸಿತ್ತು. ಆರೋಪಿಗಳ ಪೈಕಿ ರೌಡಿ ಶೀಟರ್ ಪ್ರಶಾಂತ್ @ ಪಚ್ಚು ಮತ್ತು ಅಶ್ವಿತ್ ಎಂಬವರು, ಸುರತ್ಕಲ್ ಮಂಗಳಪೇಟೆಯ ಅಮಾಯಕ ಯುವಕ ಫಾಝಿಲ್ ಕೊಲೆ ಪ್ರಕರಣದ ಆರೋಪಿಗಳಾಗಿದ್ದು, ಇತ್ತೀಚೆಗೆ ಹತ್ಯೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಆಪ್ತ ಸಹಚರರಾಗಿದ್ದರು.

ತದ ನಂತರ ಪ್ರಕರಣ ಬಗ್ಗೆ ಕೂಲಂಕುಷ ತನಿಖೆ ನಡೆಸಿದ ಬಜಪೆ ಪೊಲೀಸರು, ಆರೋಪಿಗಳು ಸಂಘಟಿತ ಅಪರಾಧವನ್ನು ಎಸಗಿರುತ್ತಾರೆ ಎಂದು “ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ” (KCOCA ) ಕಾಯ್ದೆಯನ್ವಯ ಮೂರೂ ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ, ಮಾನ್ಯ ನ್ಯಾಯಾಲಯಕ್ಕೆ ನಿವೇದನೆ ಸಲ್ಲಿಸಿದ್ದರು.

ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳು, ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಮೈಸೂರಿನ KCOCA ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ವಾದ-ವಿವಾದವನ್ನು ಆಲಿಸಿ, ದಿನಾಂಕ: 27-05-2026 ರಂದು ಮೂರೂ ಮಂದಿ ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶ ನೀಡಿರುತ್ತದೆ. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಪರವಾಗಿ ಪುತ್ತೂರಿನ “ಕಜೆ ಲಾ ಛೇಂಬರ್ಸ್” ಇದರ ಮುಖ್ಯಸ್ಥರಾದ ನ್ಯಾಯವಾದಿ ಶ್ರೀ ಮಹೇಶ್ ಕಜೆ ಹಾಗೂ ರಾಘವೇಂದ್ರ ಸಿ.ವಿ, ವಾದ ಮಂಡಿಸಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿರುತ್ತಾರೆ.