ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಲವಾರು ವ್ಯಕ್ತಿಗಳಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ತಂದೆ ಮತ್ತು ಮಗಳನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆರ್.ಟಿ. ನಗರ ನಿವಾಸಿ ಎಂ.ಎ.ಮನ್ಸೂರ್ ಅಹಮದ್ ಮತ್ತು ಶಂಶಾದ್ ಬೇಗಂ ಎಂದು ಗುರುತಿಸಲಾಗಿದೆ.
ಆರೋಪಿಗಳು ಹಲವಾರು ಮಂದಿ ಯುವಕ, ಯುವತಿಯರಿಗಿ ಸರಕಾರಿ ಕೆಲಸ ಕೊಡಿಸುವ ನೆಪದಲ್ಲಿ ಕೊಟ್ಯಾಂತರ ರೂ. ವಂಚಿಸಿರುತ್ತಾರೆ. ಆರೋಪಿಗಳ ವಿರುದ್ಧ ಸಂಗಮೇಶ್ ರಾಚಯ್ಯ ವಸ್ತ್ರದ್ ಎಂಬವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ತಮಗೆ ರಾಜಕೀಯ ಹಿನ್ನೆಲೆ ಇದ್ದು, ಅವರ ಮೂಲಕ ಸರ್ಕಾರದ ಹಿರಿಯ ಅಧಿಕಾರಿಗಳು ಪರಿಚಯವಿದ್ದಾರೆ. ಸರ್ಕಾರದ ವಿವಿಧ ಇಲಾಖೆಯಲ್ಲಿ ಉದ್ಯೋಗ ಕೊಡಿಸುತ್ತೇವೆ ಎಂದು ನಂಬಿಸಿ, ಕೆಲವರ ಮೂಲಕ ಅಭ್ಯರ್ಥಿಗಳನ್ನು ಪರಿಚಯಿಸಿಕೊಂಡು ಲಕ್ಷಾಂತರ ರೂ. ಪಡೆದುಕೊಂಡಿದ್ದಾರೆ. ನಂತರ ನಕಲಿ ನೇಮಕಾತಿ ಪತ್ರ ನೀಡಿ ವಂಚಿಸಿದ್ದಾರೆ. ವಂಚನೆಗೊಳಗಾದವರ ಪೈಕಿ ಹೆಚ್ಚು ಮಂದಿ ಉತ್ತರ ಕರ್ನಾಟದವರು. ರಾಜ್ಯದಲ್ಲಿ ಹೆಚ್ಚಾಗಿ ಸರ್ಕಾರಿ ಉದ್ಯೋಗ ಪಡೆಯಲು ಉತ್ತರ ಕರ್ನಾಟಕದವರು ಆಸಕ್ತಿ ಹೊಂದಿರುತ್ತಾರೆ. ಹೀಗಾಗಿ ಆರೋಪಿಗಳು ಆ ಭಾಗದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಿಕೊಂಡು ಲಾಭ ಪಡೆದಿದ್ದಾರೆ.
ಆರೋಪಿಗಳು ನಕಲಿ ನೇಮಕಾತಿ ಪತ್ರ ನೀಡಿದ ಬಳಿಕ ಮುಂಬೈ, ಬೆಂಗಳೂರು ಮತ್ತು ಕೋಲ್ಕತಾದಲ್ಲಿ ನಕಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ನಾಲ್ಕು ತಿಂಗಳ ಸಂಬಳ ರಹಿತ ತರಬೇತಿಗೆ ಕಳುಹಿಸುತ್ತಿದ್ದರು. ರೈಲ್ವೆ, ಆದಾಯ ತೆರಿಗೆ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಸೇರಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಸಿಕೊಡುವ ಭರವಸೆ ನೀಡುತ್ತಿದ್ದರು ಎನ್ನಲಾಗಿದೆ. ನಿರುದ್ಯೋಗಿ ಅಭ್ಯರ್ಥಿಗಳೇ ಈ ಕತರ್ನಾಕ್ ಆರೋಪಿಗಳ ಟಾರ್ಗೆಟ್. ಬೆಂಗಳೂರು ಕೇಂದ್ರ ಸಿಸಿಬಿ ಡಿಸಿಪಿ ಹರಿಬಾಬು ಮತ್ತು ಸಂಘಟಿತ ಅಪರಾಧ ದಳದ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
