ಕಿರುತೆರೆ ನಟಿಯ ವಂಚನೆ ಬಯಲು; ಶ್ರೀಮಂತ ಯುವಕರೇ ಈಕೆಯ ಟಾರ್ಗೆಟ್, ಹನಿಟ್ರ್ಯಾಪ್ ಶಂಕೆ, ನಟಿಯ ಬಂಧನ

ರಾಜ್ಯ

ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯಮಿಗಳನ್ನು ಸಂಪರ್ಕಿಸಿ, ಆಭರಣ ಬಿಡಿಸುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಕಿರುತೆರೆ ನಟಿ ವನಿತಾ ಎಂಬಾಕೆಯನ್ನು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಈಕೆಯ ಮಾಯದ ಮಾತುಗಳಿಗೆ ಮರುಳಾಗಿ ಲಕ್ಷ ರೂಪಾಯಿ ಕಳೆದುಕೊಂಡ ಯುವಕನೊಬ್ಬ ನೀಡಿದ ದೂರಿನ ಮೇರೆಗೆ ಈಕೆಯನ್ನು ಪೊಲೀಸರು ಬಂಧಿಸಿರುತ್ತಾರೆ.

ಈಕೆ ಚಾಲಾಕಿ ವಂಚಕಿ. ತುಂಬಾ ಚಾಣಾಕ್ಷತನದಿಂದ ವಂಚನೆ ಮಾಡುತ್ತಿದ್ದಳು. ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ಗಳ ಮೂಲಕ ತಾನು ಸೀರಿಯಲ್ ನಟಿ ಎಂದು ಶ್ರೀಮಂತ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದಳು. ಚಾಟಿಂಗ್ ಮೂಲಕ ಯುವಕರ ನಂಬಿಕೆ ಗಳಿಸುತ್ತಿದ್ದಳು. ಸ್ನೇಹ ಹತ್ತಿರವಾಗುತ್ತಿದ್ದಂತೆ ತನ್ನ ನಾಟಕೀಯ ಕಷ್ಟದ ಕಥೆಗಳನ್ನು ಹೇಳಲು ಶುರು ಮಾಡುತ್ತಿದ್ದಳು. ನನ್ನ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಒಡವೆಗಳನ್ನು ಅಡವಿಟ್ಟಿದ್ದೇನೆ. ಅವುಗಳನ್ನು ಬಿಡಿಸಿಕೊಳ್ಳಲು ತುರ್ತಾಗಿ ಹಣ ಬೇಕಿದೆ. ಎರಡೇ ದಿನದಲ್ಲಿ ವಾಪಸ್ ಕೊಡುತ್ತೇನೆ ಎಂದು ನಂಬಿಸಿ ಶ್ರೀಮಂತರಿಂದ ಹಣ ಪಡೆಯುತ್ತಿದ್ದಳು.

ಈಕೆ ಡಿಜಿಟಲ್ ಪುರಾವೆಗಳು ಸಿಗದಂತೆ ಹಣ ಪಡೆಯಲು ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕತ್ತಲೆಯ ಅಥವಾ ಜನರಿಲ್ಲದ ರಹಸ್ಯ ಪ್ರದೇಶಗಳನ್ನು ಆಯ್ದುಕೊಳ್ಳುತ್ತಿದ್ದಳು. ಕೇವಲ ನಗದು ರೂಪದಲ್ಲಿ ಮಾತ್ರ ಹಣ ಪಡೆದು ಪರಾರಿಯಾಗುತ್ತಿದ್ದಳು. ಹಣ ಸೇರಿದ ಮೇಲೆ ನಟಿಯ ಅಸಲಿ ಮುಖ ಹೊರಬರುತ್ತಿತ್ತು. ಬಾಕಿ ಹಣ ಕೇಳಲು ಫೋನ್ ಮಾಡಿದರೆ ಪೋನ್ ಸ್ವಿಚ್ ಆಪ್ ಆಗಿರುತ್ತಿತ್ತು.

ಈಕೆಯ ಬಣ್ಣಬಣ್ಣದ ಮಾತುಗಳನ್ನು ನಂಬಿದ ಮಹಾಲಕ್ಷ್ಮಿ ಲೇಔಟ್ ವ್ಯಾಪ್ತಿಯ ಯುವಕನೊಬ್ಬ ಒಂದು ಲಕ್ಷ ರೂಪಾಯಿ ಕಳೆದುಕೊಂಡು ಮೋಸ ಹೋಗಿದ್ದ. ವಂಚನೆ ಪಕ್ಕಾ ಆಗುತ್ತಿದ್ದಂತೆ ಆತ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ. ತನಿಖೆ ತೀವ್ರಗೊಳಿಸಿದ ಪೊಲೀಸರಿಂದ ನಟಿಯ ನಿಜ ಬಣ್ಣ ಬಯಲಾಯಿತು. ಈಕೆಯ ವಿರುದ್ಧ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಇದೇ ಮಾದರಿಯ ವಂಚನೆ ಪ್ರಕರಣಗಳು ದಾಖಲಾಗಿವೆ. ಸದ್ಯ ಪೊಲೀಸರು ಈ ಕಿಲಾಡಿ ನಟಿಯನ್ನು ಬಂಧಿಸಿ, ಈಕೆಯ ಬಗ್ಗೆ ಇನ್ನಷ್ಟು ವಿಚಾರಣೆಗೊಳಪಡಿಸಿ, ಹನಿಟ್ರ್ಯಾಪ್ ಬಗ್ಗೆಯು ವಿಚಾರಣೆ ನಡೆಸುತ್ತಿದ್ದಾರೆ.