ರಾಜ್ಯದಲ್ಲಿ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ; ಸರ್ಕಾರ ಮಾರ್ಗಸೂಚಿ ಪ್ರಕಟ

ರಾಜ್ಯ

ಮೇ 31, 2026ರ ಒಳಗಾಗಿ ನಿರ್ಮಾಣ ಪೂರ್ಣಗೊಂಡಿರುವ ವಸತಿ ಕಟ್ಟಡಗಳಿಗೆ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಸಾಮಾನ್ಯ ಮಾರ್ಗಸೂಚಿಗಳನ್ನು ಹೊರಡಿಸಿದೆ. ಇಂಧನ ಇಲಾಖೆಯ ಅಪರ ಕಾರ್ಯದರ್ಶಿ ಈ ಕುರಿತು ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಪಾಲಿಸಬೇಕಾದ ಕಾರ್ಯವಿಧಾನಗಳ ಆದೇಶವನ್ನು ರವಾನಿಸಿದ್ದಾರೆ.

ಮೇ 31, 2026ರ ಒಳಗಾಗಿ ನಿರ್ಮಾಣ ಪೂರ್ಣಗೊಂಡು, ಈಗಾಗಲೇ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ವಸತಿ ಕಟ್ಟಡಗಳ ವಿವರಗಳನ್ನು ವಿದ್ಯುತ್ ಇಲಾಖೆ ಕಡ್ಡಾಯವಾಗಿ ದಾಖಲಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಅರ್ಜಿದಾರರು ಮತ್ತು ಸೇವಾ ಸಂಪರ್ಕ ಕಲ್ಪಿಸುವ ಅಧಿಕಾರಿಗಳು ಇಬ್ಬರೂ ಸ್ಥಳದಲ್ಲಿ ಇರಬೇಕಾಗಿದ್ದು, ಕಟ್ಟಡದ ಭೌಗೋಳಿಕ ಮಾಹಿತಿ ಹೊಂದಿರುವ ಜಿಯೋ ಟ್ಯಾಗ್ಡ್ ಮತ್ತು ಟೈಮ್ ಸ್ಟ್ಯಾಂಪ್ಡ್ ಛಾಯಾಚಿತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾಗುತ್ತದೆ.

ಯಾವ ಕಟ್ಟಡಗಳು ಮೇ 31ರ ಒಳಗಾಗಿ ಪೂರ್ಣಗೊಂಡು ಪ್ರಸ್ತುತ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿವೆಯೋ, ಅಂತಹ ಮಾಲೀಕರು ಸರ್ಕಾರದ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳ ಒಳಗಾಗಿ ಶಾಶ್ವತ ಸಂಪರ್ಕಕ್ಕಾಗಿ ಅರ್ಜಿಯನ್ನು ನೋಂದಾಯಿಸಬೇಕು. ತಾತ್ಕಾಲಿಕ ಸಂಪರ್ಕದಲ್ಲಿರುವ ಹೆಸರೇ ಶಾಶ್ವತ ಸಂಪರ್ಕದ ಅರ್ಜಿಯಲ್ಲೂ ಇರಬೇಕು. ಅರ್ಜಿ ಸಲ್ಲಿಸುವಾಗ ಹಾಗೂ ವಿದ್ಯುತ್ ಸಂಪರ್ಕ ನೀಡುವಾಗ ಎರಡೂ ಸಂದರ್ಭದಲ್ಲಿ ಕಟ್ಟಡದ ಜಿಯೋ ಟ್ಯಾಗ್ಡ್ ಛಾಯಾಚಿತ್ರವನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡುವುದು ನಿಯಮವಾಗಿದೆ.

ಮೇ 31ರ ಒಳಗಾಗಿ ನಿರ್ಮಾಣ ಮುಗಿದಿದ್ದರೂ ತಾತ್ಕಾಲಿಕ ಅಥವಾ ಶಾಶ್ವತ ಸಂಪರ್ಕಕ್ಕೆ ಅರ್ಜಿ ಸಲ್ಲಿಸದ ಕಟ್ಟಡಗಳ ಮಾಲೀಕರಿಗೆ ಉಪ ವಿಭಾಗದ ಕಚೇರಿಗಳಲ್ಲಿ ನೇರವಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ನೋಂದಾಯಿಸಲು ಅವಕಾಶ ನೀಡಲಾಗಿದೆ. ಇಂತಹ ಕಟ್ಟಡಗಳ ಮಾಲೀಕರು ಆದೇಶ ಹೊರಡಿಸಿದ 15 ದಿನಗಳ ಒಳಗಾಗಿ ತಮ್ಮ ಛಾಯಾಚಿತ್ರದೊಂದಿಗೆ ಜಿಯೋ-ಟ್ಯಾಗ್ಡ್ ಫೋಟೋವನ್ನು ಹಾಜರುಪಡಿಸಿ ಅರ್ಜಿ ಸಲ್ಲಿಸಬೇಕು. ಮುಂದಿನ ಹಂತದಲ್ಲಿ ಕ್ಷೇತ್ರಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಮತ್ತು ಫೋಟೋವನ್ನು ಸಹಾಯಕ ಅಭಿಯಂತರರಿಗೆ ಸಲ್ಲಿಸಬೇಕು. ಸರ್ಕಾರದ ಆದೇಶದ ನಿಯಮಗಳನ್ನು ಪೂರೈಸಿರುವುದನ್ನು ಖಚಿತಪಡಿಸಿಕೊಂಡ ನಂತರ, ಸಹಾಯಕ ಅಭಿಯಂತರರು ತಂತ್ರಾಂಶದಲ್ಲಿ ಅರ್ಜಿಯನ್ನು ಅಪ್‌ಲೋಡ್ ಮಾಡಲಿದ್ದಾರೆ.
ವಿಳಂಬಕ್ಕೆ ಆಸ್ಪದವಿಲ್ಲ
ಸರ್ಕಾರದ ಆದೇಶ ಹೊರಡಿಸಿದ 15 ದಿನಗಳ ನಂತರ ಯಾವುದೇ ಅರ್ಜಿಯನ್ನು ಕ್ಷೇತ್ರಾಧಿಕಾರಿ ಅಥವಾ ಸಹಾಯಕ ಅಭಿಯಂತರರಾಗಲಿ ಯಾವುದೇ ಹಂತದಲ್ಲಿ ಬಾಕಿ ಉಳಿಸಿಕೊಳ್ಳುವಂತಿಲ್ಲ ಎಂದು ಸರ್ಕಾರವು ಖಡಕ್ ಸೂಚನೆ ನೀಡಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಇಂಧನ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶದಲ್ಲಿ ತಿಳಿಸಿದ್ದಾರೆ.