ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಬಂಧನ, ನೋಟಿಸ್​ ನೀಡುವಿಕೆಗೆ ಸಂಬಂಧ ಸುಪ್ರೀಂ ಕೋರ್ಟ್‌ ನಿರ್ದೇಶನ ಪಾಲಿಸದೇ ಹೋದರೆ ಗಂಭೀರ ಪರಿಣಾಮ ಎದುರಿಸಬೇಕು: ಹೈಕೋರ್ಟ್

ರಾಜ್ಯ

ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಹಾಗೂ ನೋಟಿಸ್​ ನೀಡುವಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ಮಾರ್ಗದರ್ಶಿ ಸೂತ್ರಗಳನ್ನು ಕಡ್ಡಾಯವಾಗಿ ಪಾಲಿಸದೇ ಹೋದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಹೈಕೋರ್ಟ್ ಪೊಲೀಸರಿಗೆ ಕಠಿಣ ಎಚ್ಚರಿಕೆ ನೀಡಿದೆ. ಮೋಹನ್ ಗೌಡ ಎಂಬವರ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ದಾಖಲಿಸಿರುವ ಎ‍ಫ್‌ಐಆರ್‌ ರದ್ದುಗೊಳಿಸಬೇಕು ಎಂದು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪೊಲೀಸರ ವರ್ತನೆ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಕಾಣಿಸುತ್ತಿಲ್ಲವೇ ಎಂದು ಕಟುವಾಗಿ ಪ್ರಶ್ನಿಸಿದೆ.

ಬಂಧನಕ್ಕಿರುವ ಮಾರ್ಗಸೂಚಿಗಳ ಕುರಿತಂತೆ ಸುತ್ತೋಲೆ ಅಥವಾ ತತ್ಸಮಾನ ಆದೇಶವನ್ನು ಕೂಡಲೇ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಹೊರಡಿಸಬೇಕು. ಈ ನಿಯಮಗಳನ್ನು ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಿ, ವೈಯಕ್ತಿಕವಾಗಿ ಪೊಲೀಸರ ಮೇಲೆ ಜುಲ್ಮಾನೆ ವಿಧಿಸಲಾಗುವುದು ಎಂದು ಸುತ್ತೋಲೆಯಲ್ಲಿ ನಮೂದಿಸಬೇಕು’ ಎಂದು ತಾಕೀತು ಮಾಡಿದೆ.

ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕರನ್ನು ಕಾನೂನು ಬಾಹಿರವಾಗಿ ವಶಕ್ಕೆ ಪಡೆಯುವುದು ಮತ್ತು ಇಂತಹ ಸಂದರ್ಭಗಳಲ್ಲಿ ಠಾಣೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದೇ ಇರುವುದನ್ನು ಇದೇ ಹೈಕೋರ್ಟ್‌ನ ಸಮನ್ವಯ ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿರುವುದನ್ನು ಮರೆಯುವಂತಿಲ್ಲ. ಪೊಲೀಸ್‌ ಠಾಣೆಗಳಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಮರೆ ಮಾಚಲು ಇಂತಹುದನ್ನೆಲ್ಲಾ ಮಾಡಲಾಗುತ್ತಿದೆಯೇ ಎಂದು ಕಿಡಿ ಕಾರಿದೆ.

ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ವ್ಯವಸ್ಥೆ ಹಾಗೂ ಯುಪಿಎಸ್ ಬ್ಯಾಕಪ್ 24 ಗಂಟೆಯೂ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಲು ರಾಜ್ಯಮಟ್ಟದ ಆಡಿಟ್ ನಡೆಸಬೇಕು. ಸುತ್ತೋಲೆ ಹೊರಡಿಸಿದ ಬಗ್ಗೆ ಸೆಪ್ಟೆಂಬರ್ 25ರೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು’ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸಿದೆ.

ವೈಟ್‌ಫೀಲ್ಡ್‌ನಲ್ಲಿ ನಿಗದಿಯಾಗಿದ್ದ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕುನಾಲ್ ಕಾಮ್ರಾ ಕಾರ್ಯಕ್ರಮ ರದ್ದಾದ ಬಳಿಕ ಸಂಘಟನೆಯ ಕಾರ್ಯಕರ್ತ ಮೋಹನ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದರು. ‘ಫೇಸ್‌ ಬುಕ್‌ನಲ್ಲಿ ಬಿತ್ತರಗೊಂಡಿದ್ದ ಈ ಪೋಸ್ಟ್ ಸುಳ್ಳು ಹಾಗೂ ತಪ್ಪು ದಾರಿಗೆಳೆಯುವಂತಿದೆ’ ಎಂದು ಆರೋಪಿಸಿ ವೈಟ್‌ಫೀಲ್ಡ್ ಪೊಲೀಸರು ಸ್ವಯಂಪ್ರೇರಿತವಾಗಿ ಮೋಹನಗೌಡ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ವಶಕ್ಕೆ ಪಡೆದಿದ್ದರು.

ವಿಚಾರಣೆ ವೇಳೆ ಖುದ್ದು ಹಾಜರಿದ್ದ ತನಿಖಾಧಿಕಾರಿ ಎ.ಡಿ.ಪ್ರೀತಮ್‌, ಎಸಿಪಿ ರೀನಾ ಸುವರ್ಣ ಮತ್ತು ಡಿಸಿಪಿ ಸೈದುಲ್ಲಾ ಅದಾವತ್‌ ಅವರನ್ನು ಹಿಗ್ಗಾಮುಗ್ಗ ಝಾಡಿಸಿದ ನ್ಯಾಯಪೀಠ, ‘ನಿಮ್ಮ ವರ್ತನೆ ಮತ್ತು ಕಾರ್ಯವೈಖರಿಯನ್ನು ಹೈಕೋರ್ಟ್‌ ಸಹಿಸುವುದಿಲ್ಲ. ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.