ಸಮುದಾಯಕ್ಕಾಗಿ ಮಿಡಿದ ‘ದಿಲ್ ವಾಲ’ ಇನಾಯತ್; ಸಮುದಾಯದ ನಾಯಕ ಜಮೀರ್ ಸಾಹೇಬ್ರು

ರಾಜ್ಯ

ಅವಿಭಜಿತ ಜಿಲ್ಲೆಯ ಕೆಲವು ಶ್ರೀಮಂತ ಕಾಕಾಗಳ ಚಪಲ ತೀರಿಸುವ ಹಕೀಕತ್ತು ಏನು.? ಎಲ್ಲದಕ್ಕೂ ‘ದಿಲ್’ ಬೇಕು.

ಒಂದೆಡೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಎಂ ಡಿಕೆಶಿ ಹವಾ, ಸಚಿವ ಸಂಪುಟ ಸಭೆ ಕಾವು ತಾರಕಕ್ಕೇರಿದರೆ, ಮತ್ತೊಂದು ಕಡೆ ರಾಜ್ಯ ಕಾಂಗ್ರೆಸ್ಸಿನ ಪ್ರಭಾವಿ ಮುಸ್ಲಿಂ ಮುಖಂಡ, ಕೊಡುಗೈದಾನಿ ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯನ್ನು ವಿವಾದದ ವಸ್ತುವನ್ನಾಗಿಸುವ ಪ್ರಯತ್ನ ಮಂಗಳೂರಿನ ಕೆಲವು ಶ್ರೀಮಂತ ಕಾಕಾ ವಲಯದ ಮಧ್ಯೆ ನಡೆಯುತ್ತಿದೆ. ಮಂಗಳೂರಿನ ಕೆಲವು ಶ್ರೀಮಂತ ಕಾಕಾಗಳು ತೆರೆಮರೆಯಲ್ಲಿ ತಮಗಾದ ಮುಜುಗರವನ್ನು ತಪ್ಪಿಸಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದು, ಶ್ರೀಮಂತ ಕಾಕಾಗಳ ತಾಳಕ್ಕೆ ತಕ್ಕಂತೆ ಕುಣಿಯುವ, ಪೂಜಾರಿ ಕೃಪೆಯಿಂದ ಮೇಯರ್ ಆದ ಮಾಜಿ ಒಬ್ಬರು ಜಮೀರ್ ಅಹಮದ್ ಖಾನ್ ಅವರ ಹೇಳಿಕೆಯನ್ನು ಬಹಿರಂಗವಾಗಿ ಖಂಡಿಸುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಅಷ್ಟಕ್ಕೂ ಜಮೀರ್ ಅಹಮದ್ ಖಾನ್ ಹೇಳಿದ್ದೇನು.? ಮಾಜಿ ಮೇಯರೊಬ್ಬರ ಖಂಡನೆಯ ಹಿಂದಿನ ಹಕೀಕತ್ತು ಏನು? ಇಲ್ಲಿದೆ ಡೀಟೈಲ್ಸ್.

ಸೆಪ್ಟೆಂಬರ್ 17 ರಂದು ಬಜಪೆಯಲ್ಲಿ ಅವಿಭಜಿತ ಜಿಲ್ಲೆಯ ಮುಸ್ಲಿಂ ಸಮುದಾಯದ ದೊಡ್ಡ ಕನಸಾಗಿದ್ದ ಹಜ್ ಭವನಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದೆ. ಈ ಸಂದರ್ಭದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಇನಾಯತ್ ಆಲಿ ನನ್ನ ತಮ್ಮ, ಹಜ್ ಭವನ ನಿರ್ಮಾಣಕ್ಕೆ ತನ್ನ ಖಾಸಗಿ ಜಾಗವನ್ನು ದಾನವಾಗಿ ನೀಡುವ ಮುಖಾಂತರ ಹೃದಯವಂತಿಕೆ ಮೆರೆದಿದ್ದಾರೆ. ಮಂಗಳೂರಿನಲ್ಲಿ ದೊಡ್ಡ ದೊಡ್ಡ ಶ್ರೀಮಂತರಿದ್ದರೂ ಹಜ್ಜ್ ಭವನ ನಿರ್ಮಾಣಕ್ಕೆ ಜಾಗ ನೀಡಲು ಯಾರೂ ಮುಂದಾಗಿಲ್ಲ. ಇನಾಯತ್ ಆಲಿ ಆ ಕೆಲಸ ಮಾಡಿದ್ದಾರೆ ಎಂಬ ಅರ್ಥ ಬರುವ ರೀತಿಯ ಹೇಳಿಕೆಯನ್ನು ನೀಡಿದ್ದರು. ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆಯಲ್ಲಿ ತಪ್ಪೇನಿದೆ..? ಅವರು ಇದ್ದದ್ದನ್ನು ಇದ್ದ ಹಾಗೇ ಹೇಳಿದ್ದಾರೆ. ಇದನ್ನು ಅರಗಿಸಿಕೊಳ್ಳಲಾಗದ ಕೆಲವರಿಗೆ ತಳಮಲ ಶುರುವಾಗಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುವ ನಾಯಕ ಇನಾಯತ್ ಆಲಿ ಗಿಂತ ಶ್ರೀಮಂತರು ಬಹಳಷ್ಟು ಮಂದಿ ಬ್ಯಾರಿ ಸಮುದಾಯದಲ್ಲಿ ಇದ್ದಾರೆ. ಕೋಟಿಪತಿಗಳು, ಮಿಲಿಯನೇರ್ ಗಳು ಇದ್ದಾರೆ. ಅದರಲ್ಲಿ ಕೆಲವರು ದೊಡ್ಡ ದೊಡ್ಡ ಆಸ್ಪತ್ರೆಗಳನ್ನು, ಹೈ ಪೈ ಕಾಲೇಜುಗಳನ್ನು ಕಟ್ಟಿಸಿ ಸಮುದಾಯದ ನಾಯಕರು ಅನ್ನುವ ರೀತಿಯ ಪೋಸು ಕೊಡುತ್ತಿದ್ದಾರೆ. ಆದರೆ ಇವರ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಗಳಿಂದ, ವಿದ್ಯಾಸಂಸ್ಥೆಯಿಂದ ಬ್ಯಾರಿ ಸಮಾಜಕ್ಕೆ ಅಥವಾ ಜನಸಾಮಾನ್ಯರಿಗಾದ ಲಾಭವೇನು.? ಕೆಲವರು ಲೂಟುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಬಡವನೊಬ್ಬ ಇಂತಹವರ ಆಸ್ಪತ್ರೆಗೆ ದಾಖಲಾದರೆ, ತಮ್ಮ ಕಿಡ್ನಿ ಮಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮಟ್ಟಿಗೆ ಇವರು ಹಗಲು ದರೋಡೆಗೆ ಇಳಿದಿದ್ದಾರೆ. ಹೆಸರಿಗೆ ಮಾತ್ರ ಸಮುದಾಯದ ಮುಖವಾಡ, ವ್ಯಾಪಾರವೇ ಇವರ ಅಜೆಂಡಾ. ಸಮುದಾಯದ ಹೆಸರಲ್ಲಿ ಸರಕಾರದಿಂದ ಸಿಗುವ ಲಾಭ ಪಡೆದು, ಸಮುದಾಯವನ್ನು ಗುತ್ತಿಗೆಗೆ ಪಡೆದವರಂತೆ ನಡೆದು ಕೊಳ್ಳುತ್ತಿದ್ದಾರೆ. ಕೆಲವು ಮಂದಿ ನಾ(ಲಾ)ಯಕರು.!

ಇನ್ನು ಕೆಲವು ಶ್ರೀಮಂತ ಕಾಕಾಗಳು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ತಾವು ಮುಸ್ಲಿಂ ಸಮುದಾಯದ ಹೀರೋ ಗಳಂತೆ ವೇದಿಕೆಯಲ್ಲಿ ಸ್ವಯಂಘೋಷಿತವಾಗಿ ಮಿಂಚುತ್ತಿದ್ದಾರೆ. ನಮ್ಮ ಸಮುದಾಯದ ಶಿಕ್ಷಣ ಸಂಸ್ಥೆ ಎಂದು ಪೋಷಕರು ಹೆಮ್ಮೆಯಿಂದ ಸಮುದಾಯದ ಮುಖಂಡರ ಶಿಕ್ಷಣ ಸಂಸ್ಥೆಗೆ ದಾಖಲಿಸಿದರೆ ಡೊನೇಷನು, ಫೀಸು ಹೆಸರಿನಲ್ಲಿ ಪೂರ್ತಿ ಬಾಚಿಕೊಳ್ಳುವುದರಲ್ಲಿ ನಿಸ್ಸೀಮರು. ಅನ್ಯ ಸಮುದಾಯದ ಶಿಕ್ಷಣ ಸಂಸ್ಥೆಗಳಲ್ಲಿ ಇದಕ್ಕಿಂತ ಕಡಿಮೆ ಫೀಸು ಇದ್ದರೂ, ಸಮುದಾಯದ ಹೆಸರಿನಲ್ಲಿ ಕಾರ್ಯಾಚರಿಸುವ ಇಂತಹವರ ಶಿಕ್ಷಣ ಸಂಸ್ಥೆಗಳಲ್ಲಿ ದೋಚುವುದೇ ಪ್ರಮುಖ ಅಜೆಂಡಾವಾಗಿದೆ. ಇಂತಹವರು ಸಮುದಾಯದ ನಾಯಕರು ಆಗಲು ಅರ್ಹರೇ.?

ಯುವ ನಾಯಕ ಇನಾಯತ್ ಆಲಿ ರಾಜಕೀಯ ಮುಖಂಡ, ಉದ್ಯಮಿ, ಕೊಡುಗೈದಾನಿ ಕೂಡ. ಸಮುದಾಯದ ಪ್ರಭಾವಿ ಮುಖಂಡರು ಹೌದು. ಬಜಪೆಯಂತಹ ಪಟ್ಟಣದಲ್ಲಿ ಎಂಟು ಕೋಟಿ ಮೌಲ್ಯದ ಜಾಗವನ್ನು ಹಜ್ ಭವನಕ್ಕಾಗಿ ದಾನವಾಗಿ ನೀಡಿದ್ದಾರೆ. ಇದು ಜಿಲ್ಲೆಯ ಯಾವ ಶ್ರೀಮಂತ ಬ್ಯಾರಿ ಕಾಕನಿಗೆ ಸಾಧ್ಯವಾಯಿತು.? ಈ ಜಿಲ್ಲೆಯಲ್ಲಿ ಇನಾಯತ್ ಆಲಿ ಗಿಂತ ನೂರಾರು ಪಟ್ಟು ಹೆಚ್ಚು ತೂಗುವ ಶ್ರೀಮಂತರು ಮುಸ್ಲಿಂ ಸಮುದಾಯದಲ್ಲಿದ್ದಾರೆ. ಇವರು ಮನಸ್ಸು ಮಾಡಿದ್ದರೆ ಹಜ್ ಭವನ ಬಿಡಿ, ಬ್ಯಾರಿ ಸಮುದಾಯವನ್ನೇ ಉದ್ದಾರ ಮಾಡಬಹುದಿತ್ತು. ನಮ್ಮ ಜಿಲ್ಲೆಯಲ್ಲಿ ಸಮುದಾಯದ ನೂರಾರು ಶ್ರೀಮಂತರಿದ್ದರೂ ಹೃದಯವಂತ ಶ್ರೀಮಂತರ ಸಂಖ್ಯೆ ಬಹಳ ಕಡಿಮೆ ಇದೆ. (ಪ್ರಚಾರ ಬಯಸದ ಕೆಲವು ಮಂದಿ ಒಳ್ಳೆಯ ಶ್ರೀಮಂತರು ಇದ್ದಾರೆ. ಪ್ರಚಾರ ಬಯಸದೆ ಸಮುದಾಯದ ಕಾಳಜಿಯಿಂದ ಸಹಕರಿಸುವವರು) ತಾವು ಕೊಟ್ಟರೆ ಅದರಿಂದ ಹತ್ತು ಪಟ್ಟು ಲಾಭ ಪಡೆಯಬೇಕು ಅನ್ನುವ ಶ್ರೀಮಂತ ಕಾಕಾಗಳ ಸಂಖ್ಯೆ ಜಾಸ್ತಿ. ಆದರೆ ಇನಾಯತ್ ಆಲಿ ತನ್ನ ಸ್ವ ಇಚ್ಛೆಯಿಂದ, ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಹಜ್ ಭವನಕ್ಕೆ ಜಾಗವನ್ನು ದಾನವಾಗಿ ನೀಡಿದ್ದಾರೆ. ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಇದೇ ವಿಚಾರವನ್ನು ಮಾಧ್ಯಮದ ಮುಂದೆ ಹೇಳುವ ಮೂಲಕ ಇನಾಯತ್ ಆಲಿ ಅವರ ಕಾರ್ಯವೈಖರಿಯನ್ನು ಕೊಂಡಾಡಿದ್ದಾರೆ. ಇದರಲ್ಲಿ ಯಾರೂ ಉರಿಸಿಕೊಳ್ಳುವ ಅಗತ್ಯವಿಲ್ಲ.

ಜಮೀರ್ ಅಹಮದ್ ಹೇಳಿಕೆಯಿಂದ ಸಮುದಾಯದ ಹೆಸರಿನಲ್ಲಿ ಲಾಭ ಮಾಡುವ ಶ್ರೀಮಂತ ಕಾಕಾಗಳಿಗೆ ಅರಗಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಇಂಗು ತಿಂದ ಮಂಗನಂತಾದ ಕೆಲವು ಕಾಕಾಗಳು ಮಾಜಿ ಮೇಯರ್ ಒಬ್ಬರನ್ನು ಎದುರು ಹಾಕಿಕೊಂಡು ತನ್ನ ಚಪಲ ತೀರಿಸಿಕೊಂಡಿದ್ದಾರೆ ಅಷ್ಟೇ. ಇನಾಯತ್ ಆಲಿ ರಾಜಕೀಯ ಪ್ರವೇಶಿಸುವ ಮುನ್ನವೇ ಬಡ ಬಗ್ಗರ, ನಿರ್ಗತಿಕರ, ಅನ್ಯಾಯಕ್ಕೊಳಗಾದವರ ಬಗ್ಗೆ, ಜಾತಿ-ಮತ ನೋಡದೆ ತನ್ನಿಂದ ಸಾಧ್ಯವಾದ ನೆರವು ನೀಡುತ್ತಾ ಬಂದವರು. ಆಸ್ಪತ್ರೆಯಲ್ಲಿ ಬಡವರು ಚಿಕಿತ್ಸೆಗೆ ಹಣ ಕಟ್ಟಲು ಸಾಧ್ಯವಾಗದೇ ಇದ್ದಾಗ ತಮ್ಮ ಜೇಬಿನಿಂದಲೇ ಹಣ ನೀಡಿ ಬಡವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರಲು ನೆರವು ಆದವರು. ಬಡ ಹೆಣ್ಣು ಮಕ್ಕಳ ಮದುವೆ ಸಮಯದಲ್ಲಿ ಸಹಾಯ ಹಸ್ತ ನೀಡಿ ಅವರ ಕಣ್ಣೀರು ಒರೆಸಿದ ಮಾತೃ ಹೃದಯಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ದುಡ್ಡು ಕಟ್ಟಲು ಪರಡಾಡುತ್ತಿದ್ದವರಿಗೆ ನಿರಂತರವಾಗಿ ಸಹಾಯ ಮಾಡಿಕೊಂಡು ಬರುತ್ತಿದ್ದಾರೆ. ಸಮುದಾಯದ ನಾಯಕರು, ಮುಖಂಡರು ಎಂದು ಹೇಳಿಕೊಳ್ಳುವವರ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳಲ್ಲಿ ಬಡವರಿಗೆ ಕರುಣೆ ತೋರದ ಇಂತಹ ಕಾಕಾಗಳಿಂದ ಸಮುದಾಯಕ್ಕೇನು ಲಾಭ.. ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಸಮುದಾಯದಕ್ಕಾಗಿ ಮಿಡಿದ ಇನಾಯತ್ ಆಲಿ ಇವರುಗಳಿಗಿಂತ ಎಷ್ಟೋ ವಾಸಿ ಅಲ್ಲವೇ..? ಇದನ್ನೇ ಝಮೀರ್ ಸಾಹೇಬ್ರು ಹೇಳಿದ್ದು ಮಾರಾಯ.. ದಿಲ್ ಬೇಕು ಅಂತ.. ಈಗ ಅರ್ಥವಾಯಿತಾ.!