ಮುಚ್ಚೂರು, ಕೊಂಪದವು, ನೀರುಡೆ, ಬಂಗೇರಪದವು ವ್ಯಾಪ್ತಿಯ ಗ್ರಾಮಗಳೊಳಗೆ ಸರಕಾರಿ ಬಸ್ಸು ಸೇವೆ ಒದಗಿಸಲು ಆಗ್ರಹ.

ಕರಾವಳಿ

ಮುಚ್ಚೂರು ಗ್ರಾಮ ಪಂಚಾಯತ್ ಮುಂಭಾಗ ಹೋರಾಟ ಸಮಿತಿಯಿಂದ ಪ್ರತಿಭಟನಾ ಪ್ರದರ್ಶನ

ಮೂಲಭೂತ ಸೌಲಭ್ಯಗಳಿಂದ ವಂಚಿತಹೊಂದಿರುವ ಮಂಗಳೂರು ಗ್ರಾಮದ ಗ್ರಾಮೀಣ ಪ್ರದೇಶಗಳಾದ ಕೊಂಪದವು, ಮುಚ್ಚೂರು, ನೀರುಡೆ, ಬಂಗೇರ ಪದವು ಗ್ರಾಮಗಳಿಗೆ ಸರಕಾರಿ ಬಸ್ಸು ಸೇವೆ ಒದಗಿಸಲು ಒತ್ತಾಯಿಸಿ ಮುಚ್ಚೂರು ಗ್ರಾಮ ಪಂಚಾಯತ್ ಮುಂಭಾಗ ‘ನಾಗರಿಕ ಹೋರಾಟ ಸಮಿತಿ, ಮುಚ್ಚೂರು, ಕೊಂಪದವು’ ವತಿಯಿಂದ ಪ್ರತಿಭಟನಾ ಪ್ರದರ್ಶನ ನಡೆಯಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ದ.ಕ‌. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಖಾಸಗಿ ಬಸ್ಸು ಲಾಭಿಗಳಿಗೆ ಸಾರಿಗೆ ಅಧಿಕಾರಿಗಳು ಭಯಪಡುತ್ತಿದ್ದಾರೆ, ಜನಪ್ರತಿನಿಧಿಗಳು ಸಂಚಾರ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಜನ ಸಾಮಾನ್ಯರಿಗಿಂತಲೂ ಖಾಸಗಿ ಬಸ್ಸು ಮಾಲಕರ ಕುರಿತು ಅನುಕಂಪ ಹೊಂದಿದ್ದಾರೆ. ಸತತವಾಗಿ ಮನವಿ ಸಲ್ಲಿಸುತ್ತಿದ್ದರು ಮಂಗಳೂರಿನ ಕುಗ್ರಾಮದಂತಹ ಗ್ರಾಮೀಣ ಪ್ರದೇಶದ ಊರುಗಳಿಗೆ ಸರಕಾರಿ ಬಸ್ಸು ಸೇವೆ ಒದಗಿಸಲು ನಿರಾಕರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆ ಈಡೇರದಿದ್ದಲ್ಲಿ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕಾರ್ಮಿಕ ನಾಯಕ ಸದಾಶಿವ ದಾಸ್ ಮಾತನಾಡಿ, ಮುಚ್ಚೂರು, ಕೊಂಪದವು ಶ್ರಮಿಕ ವರ್ಗದವರೆ ಹೆಚ್ಚಿರುವ ಪ್ರದೇಶ, ಖಾಸಗಿ ಬಸ್ಸು ಗಳು ಸಮಯಕ್ಕೆ ಸರಿಯಾಗಿ ಓಡಾಡದಿರುವುದು, ಬಸ್ಸುಗಳ ಸಂಖ್ಯೆ ಕಡಿಮೆ ಇರುವುದು ದುಡಿಮೆಗೆ ಪಟ್ಟಣಕ್ಕೆ ಹೋಗುವವರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ತೀರಾ ಸಮಸ್ಯೆಗೆ ಒಳಗಾಗಿದ್ದಾರೆ. ಸಂಬಂಧ ಪಟ್ಟವರು ತಕ್ಷಣವೆ ಗ್ರಾಮಸ್ಥರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಬಿಸಿಯೂಟ ನೌಕರರ ಸಂಘದ ಜಿಲ್ಲಾ ಅಧ್ಯಕ್ಷೆ ಭವ್ಯ ಮುಚ್ಚೂರು ಮಾತನಾಡುತ್ತಾ, ಖಾಸಗಿ ಬಸ್ಸುಗಳು ಮಂಗಳೂರು ತಲುಪಲು ಕನಿಷ್ಟ ಒಂದೂವರೆ ತಾಸು ದೀರ್ಘ ಸಮಯ ಹಿಡಿಯುತ್ತದೆ. ಬೆಳಗ್ಗಿನ ಹೊತ್ತು ಖಾಸಗಿ ಬಸ್ಸು ಗಳಲ್ಲಿ ವಿಪರೀತ ಜನಸಂದಣಿಯಿಂದ ಪ್ರಯಾಣಿಸುವುದು ಅಸಾಧ್ಯ ಎಂಬಂತಾಗಿದೆ. ಖಾಸಗಿ ಬಸ್ಸು ಗಳು ಏಕಾಏಕಿ ಟ್ರಿಪ್ ಗಳನ್ನು ಕಡಿತಗೊಳಿಸುವುದು ಗಂಭೀರ ಸಮಸ್ಯೆಯಾಗಿದೆ. ಸರಕಾರಿ ಬಸ್ಸು ಗಳು ಇಲ್ಲದಿರುವುದರಿಂದ ಮಹಿಳೆಯರು, ವಿದ್ಯಾರ್ಥಿಗಳು ಉಚಿತ ಪ್ರಯಾಣದ ಅವಕಾಶದಿಂದಲೂ ವಂಚಿತರಾಗಿದ್ದಾರೆ ಎಂದು ಸಮಸ್ಯೆಗಳನ್ನು ಬಿಚ್ಚಿಟ್ಟರು.

ಪ್ರತಿಭಟನಾ ಸಭೆಯಲ್ಲಿ ಮಹಿಳೆಯರ ಸಹಿತ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಹೋರಾಟ ಸಮಿತಿಯ ಪ್ರಮುಖರಾದ ಹರೀಶ್ಚಂದ್ರ ಗೌಡ ಕೊಂಪದವು, ಬಾಬು ಗೌಡ, ರವೀಂದ್ರ ಶೆಟ್ಟಿಗಾರ್ ಮುಚ್ಚೂರು, ರಾಮಣ್ಣ ಶೆಟ್ಟಿಗಾರ್ ಕೊಂಪದವು, ವೇದಾವತಿ ಮುಚ್ಚೂರು, ಹೇಮಲತಾ, ಆನಂದ ದೇವಾಡಿಗ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಹೋರಾಟ ಸಮಿತಿ ಸಂಚಾಲಕ ನೋಣಯ್ಯ ಗೌಡ ಸ್ವಾಗತಿಸಿದರು, ಪ್ರದೇಶ ಬೀಡಿ ಕಾರ್ಮಿಕರ ಸಂಘದ ಕಾರ್ಯದರ್ಶಿ ವಸಂತಿ ಕುಪ್ಪೆಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಸ್ ಆರ್ ಟಿಸಿ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.