ದೇಶದ ನಾಗರಿಕರಿಗೆ ರಾಷ್ಟ್ರಧ್ವಜ ಹಾರಿಸಲು ಅನುಮತಿ ಬೇಕಿಲ್ಲ: ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ

ರಾಷ್ಟ್ರೀಯ

ದೇಶದ ನಾಗರಿಕರಿಗೆ ರಾಷ್ಟ್ರಧ್ವಜ ಹಾರಿಸಲು ಅನುಮತಿ ಬೇಕಿಲ್ಲ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ವಿಶೇಷ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ, ಶಾಂತಿ ಕಾಪಾಡುವ ಮುಚ್ಚಳಿಕೆ ಬರೆದು ಕೊಡುವಂತೆ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿರುವ ನೇಹಾ, ದೇಶದ ಜನ ರಾಷ್ಟ್ರಧ್ವಜವನ್ನು ಹಾರಿಸಲು ಅನುಮತಿ ಬೇಕಿಲ್ಲ ಎಂದು ತಿಳಿಸಿದ್ದಾರೆ. ಯಾವುದೇ ಅನುಮತಿ ಪಡೆಯದೇ ನೇಹಾ ರಾಷ್ಟ್ರಧ್ವಜ ಹಾರಿಸಿದ್ದಾರೆ ಎಂಬ ದೆಹಲಿ ಪೊಲೀಸರ ಆಕ್ಷೇಪಕ್ಕೆ ಅವರು ಈ ಉತ್ತರ ನೀಡಿದ್ದಾರೆ.

‘ಈ ನೋಟಿಸ್ ಸೂಕ್ತವೇ ಎಂಬುದು ಈಗಿರುವ ಪ್ರಶ್ನೆಯಾಗಿದೆ. ರಾಷ್ಟ್ರಧ್ವಜ ಹಾರಿಸಲು ನಮಗೆ ಅನುಮತಿ ಬೇಕಿಲ್ಲ. ದೆಹಲಿ ಪೊಲೀಸರಿಗೆ ಕಾನೂನಿನ ಪಾಠ ಆಗಬೇಕಿದೆ’ ಎಂದು ಬೋರಾ ಪರ ವಾದ ಮಂಡಿಸಿದ ವಕೀಲ ಗೋಪಾಲ್ ಶ್ರೀಕೃಷ್ಣ ನಾರಾಯಣನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ದೆಹಲಿ ಪೊಲೀಸರ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ, ಬೋರಾ ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಎಸ್‌ಐಆರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಮುಂದಾಳತ್ವ ವಹಿಸಿರುವ ನೇಹಾ, ತಮಗೆ ದೆಹಲಿ ಪೊಲೀಸರು ನೀಡಿರುವ ನೋಟಿಸ್ ಅನ್ನು ವಜಾ ಮಾಡಬೇಕು ಮತ್ತು ತಮ್ಮ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.

ಅಕ್ಟೋಬರ್ 17ರಂದು ಭಾರತೀಯ ನ್ಯಾಯ ಸಂಹಿಂತೆಯ ಸೆಕ್ಷನ್ 126ರ ಅಡಿ ದೆಹಲಿ ಪೊಲೀಸರು ನೀಡಿದ್ದ ನೋಟಿಸ್‌ನಲ್ಲಿ, ಅಕ್ಟೋಬರ್ 19ರಂದು ವಿಶೇಷ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಿ, ತನಿಖೆ ಮುಗಿಯುವವರೆಗೆ ರೂ. 10,000 ಬಾಂಡ್, ಒಬ್ಬರ ಶೂರಿಟಿ ಸಹಿತ ಶಾಂತಿ ಕಾಪಾಡುವ ವೈಯಕ್ತಿಕ ಮುಚ್ಚಳಿಕೆ ಬರೆದುಕೊಡುವ ಕುರಿತಂತೆ ವಿವರಣೆ ಕೇಳಲಾಗಿತ್ತು.ಒಬ್ಬ ವ್ಯಕ್ತಿಯು ಶಾಂತಿ ಭಂಗಗೊಳಿಸುವ, ಸಾರ್ವಜನಿಕ ನೆಮ್ಮದಿಗೆ ಧಕ್ಕೆ ತರುವಂತಹ ಕೃತ್ಯವನ್ನು ಎಸಗುವ ಸಾಧ್ಯತೆ ಇದೆ ಎಂಬ ವಿಶ್ವಾಸಾರ್ಹ ಮಾಹಿತಿ ಇದ್ದರೆ, ಅಂತಹ ವ್ಯಕ್ತಿಯಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಬಿಎನ್‌ಎಸ್ ಸೆಕ್ಷನ್ 126, ವಿಶೇಷ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡಿದೆ.