ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ವೆಲೆನ್ಸಿಯಾ ಜಂಕ್ಷನ ಬಳಿಯಿರುವ ಡಾನ್ ಬಾಸ್ಕೋ ಹಾಸ್ಟೇಲ್ ಬಳಿ ನಿಲ್ಲಿಸಿದ್ದ ಕೆ.ಟಿ.ಎಮ್ ಡ್ಯೂಕ್ ಮೋಟಾರು ಸೈಕಲ್, ಜಪ್ಪು ಮಾರ್ಕೆಟ್ ಬಳಿಯ ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್, ಅತ್ತಾವರ ಕೆ.ಎಮ್.ಸಿ ಆಸ್ಪತ್ರೆಯ ಬಳಿಯಿರುವ ದುರ್ಗಾ ಹೋಟೇಲ್ ಮುಂದೆ ನಿಲ್ಲಿಸಿದ್ದ ಬಜಾಜ್ ಡಿಸ್ಕವರಿ ಬೈಕ್ ಹಾಗೂ ಹೊಯಿಗೆ ಬಜಾರ ನ ಭಗವತಿ ಅಪಾರ್ಟಮೆಂಟ್ ಕೆಳಗೆ ನಿಲ್ಲಿಸಿದ್ದ ಕೆ.ಟಿ.ಎಂ. ಡ್ಯೂಕ್ ಬೈಕ್ ಕಳವಾಗಿರುತ್ತದೆ. ಅದೇ ರೀತಿ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ರಾಯಲ್ ಎನ್ ಪೀಲ್ಡ್ ಬುಲೆಟ್ ಮೋಟಾರ್ ಸೈಕಲ್ ಹಾಗೂ ಕುತ್ತಾರ್ ಪಂಡಿತ್ ಹೌಸ್ ಬಳಿಯ ಯಮಹಾ ಎಫ್.ಜೆಡ್ ಮೋಟಾರ್ ಸೈಕಲ್ ಕಳವಾಗಿದ್ದು, ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿತ್ತು.
ದ್ವಿಚಕ್ರ ವಾಹನಗಳನ್ನು ಕಳವುಗೈದ ಆರೋಪಿಗಳ ಪತ್ತೆಗಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವಿಶೇಷ ತಂಡವು ತನಿಖೆ ನಡೆಸಿ, ಮಾಹಿತಿ ಸಂಗ್ರಹಿಸುವ ಮೂಲಕ ಒಟ್ಟು ಏಳು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿರುತ್ತದೆ.
ಆರೋಪಿಗಳಾದ ಮಹಮ್ಮದ್ ಸಿಯಾಮ್ ಶಿವನಗರ, ಮೂಡುಶೆಡ್ಡೆ ವಾಮಂಜೂರು. ಮುಹಮ್ಮದ್ ನಾಸೀಫ್ @ ನಸೀಫ್ ಜೋಕಟ್ಟೆ. ಮೊಹಮ್ಮದ್ ರಾಹೀಲ್, ಶಿವನಗರ, ಮೂಡುಶೆಡ್ಡೆ. ನಿಖೀಲ್, ಸದಾಶಿವ ನಗರ, ತಿರುವೈಲು, ಕುಟ್ಟಿ ಪಲ್ಕೆ. ಇವರಲ್ಲಿ ಮೂರು ಮಂದಿ ಕಾನೂನಿನೊಂದಿಗೆ ಸಂಘರ್ಷಕ್ಕೊಳಗಾದ ಬಾಲಕರಾಗಿದ್ದು, ಉಳಿದ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ, ಕಳವು ಮಾಡಲಾಗಿದ್ದ ಎಲ್ಲಾ ಆರು ದ್ವಿಚಕ್ರ ವಾಹನಗಳನ್ನು, ಮತ್ತು ಕೃತ್ಯಕ್ಕೆ ಬಳಸಿದ ಮೂರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇವುಗಳ ಒಟ್ಟು ಮೌಲ್ಯ 4.50,000 ರೂ.ಎಂದು ಅಂದಾಜಿಸಲಾಗಿದೆ.
ಆರೋಪಿಗಳು ಇತರ ದುಶ್ಕೃತ್ಯಗಳಾದ ಸರಗಳ್ಳತನ ಮುಂತಾದ ಕೃತ್ಯಗಳನ್ನು ಎಸಗಿ ಅದರ ಲಾಬಾಂಶದಿಂದ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿರುತ್ತದೆ. ಬೆಲೆಬಾಳುವ ಮೋಟಾರ್ ಸೈಕಲ್ ಗಳನ್ನು ಗುರಿಯಾಗಿಸಿ, ನಿಲುಗಡೆ ಮಾಡಿದ್ದ ಸ್ಥಳಗಳಿಂದ ಕಳವು ಮಾಡಿ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ. ಬಂಧಿತ 4 ಜನ ಆರೋಪಿಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಈ ಪತ್ತೆ ಕಾರ್ಯದಲ್ಲಿ ಮಂ. ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಬೈಂದೂರ ರವರ ನೇತೃತ್ವದಲ್ಲಿ ಪಿ.ಎಸ್.ಐ ಮಾರುತಿ ಹಾಗೂ ಕ್ರೈಂ ಸಿಬ್ಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಪುಟ್ಟರಾಮ್, ಸಾಗರ ದೇವಕತ್ತಿ, ಆಂಜನೇಯ ಕೆ.ಎಸ್, ರವರು ಭಾಗವಹಿಸಿದ್ದು, ಮಂಗಳೂರು ದಕ್ಷಿಣ ಠಾಣಾ ಅಧಿಕಾರಿ ಸಿಬ್ಬಂದಿಯವರು ಪತ್ತೆ ಕಾರ್ಯಕ್ಕೆ ಸಹಕರಿಸುತ್ತಾರೆ.
