ತಾಲೂಕು ಪಂಚಾಯತ್ ಎಲ್ಲಾ ಕ್ಷೇತ್ರಗಳಲ್ಲಿ ಈ ಬಾರಿ ಕಮ್ಯುನಿಸ್ಟ್ ಅಭ್ಯರ್ಥಿಗಳು ಸ್ಪರ್ದೆ
ಇನ್ನೇನೂ ಜನವರಿ ತಿಂಗಳ ಹೊತ್ತಿಗೆ ರಾಜ್ಯದಲ್ಲಿ ಜಿಲ್ಲಾ ಪಂಚಾಯತ್, ತಾ.ಪಂ ಚುನಾವಣೆಯ ಪರ್ವ. ಕಳೆದ ಏಳೆಂಟು ವರ್ಷಗಳಿಂದ ಚುನಾವಣೆ ನಡೆಯದೆ ನೆನೆಗುದಿಗೆ ಬಿದ್ದಿದ್ದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ರಾಜ್ಯ ಸರಕಾರ ಮುಂದಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಂದ ಚುನಾವಣಾ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ನಡುವೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೆಂಕ ಎಡಪದವು ಜಿಲ್ಲಾ ಪಂಚಾಯತ್ ಸೇರಿದಂತೆ ಎಲ್ಲಾ ತಾಲೂಕು ಪಂಚಾಯತ್ ಗಳಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ.
ಎಡಪದವು ಜಿಲ್ಲಾ ಪಂಚಾಯತ್ ಕಣ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ಬಾರಿ ಕಮ್ಯುನಿಸ್ಟ್ ಹೋರಾಟದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಹೆಸರು ಉಳಿಸಿಕೊಂಡಿರುವ ಗಟ್ಟಿಗಿತ್ತಿ ಧೀರೆ ಮಹಿಳೆ ವಸಂತಿಯವರ ಸ್ಪರ್ಧೆಯ ಸುಳಿವು ಇದೀಗ ಎಲ್ಲಾ ಪಕ್ಷಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಎಡಪದವು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಮ್ಯುನಿಸ್ಟ್ ಪಕ್ಷದ ದೊಡ್ಡ ಫಾಲೋವರ್ಸ್ ಇಲ್ಲಿದ್ದಾರೆ. ಈ ಹಿಂದೆ ಎಡಪದವು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕಮ್ಯೂನಿಸ್ಟ್ ಪಕ್ಷದ ಮುಂಚೂಣಿ ನಾಯಕ ಸದಾಶಿವ ದಾಸ್ ಸ್ಪರ್ಧಿಸಿ 1200 ಮತಗಳನ್ನು ಬಾಚಿದ್ದರು. ಕಾಂಗ್ರೆಸ್ ಪಕ್ಷದ ಪ್ರಬಲ ಅಭ್ಯರ್ಥಿಯಾಗಿದ್ದ ಕೃಷ್ಣ ಅಮೀನ್ ಈ ಕ್ಷೇತ್ರದಲ್ಲಿ ಅಲ್ಪಮತಗಳ ಅಂತರದಿಂದ ಸೋಲು ಕಂಡಿದ್ದರು.
ಗುರುಪುರ ಭಾಗದಲ್ಲಿ ನಿರಂತರ ಕೆಂಬಾವುಟ ಹೋರಾಟದ ಮೂಲಕ ಕಮ್ಯೂನಿಸ್ಟ್ ಚಳುವಳಿಗೆ ದೊಡ್ಡ ಯಶಸ್ಸು ತಂದು ಕೊಟ್ಟಿರುವ ಸದಾಶಿವ ದಾಸ್ ಅವರ ಪತ್ನಿ ವಸಂತಿ ಅವರು ಈ ಬಾರಿ ಸ್ಪರ್ಧೆಯ ಮುಂಚೂಣಿಗೆ ಧಾವಿಸಿರುವುದು ರಾಷ್ಟ್ರೀಯ ಪಕ್ಷಗಳಿಗೆ ದೊಡ್ಡ ನಡುಕ ಉಂಟು ಮಾಡಿದೆ. ವಸಂತಿ ತಳಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ನಾಯಕಿಯಾಗಿ ಮೂಡಿ ಬಂದಿದ್ದಾರೆ. ಇದೇ ಕಾರಣದಿಂದ 2010-2020 ರ ಅವಧಿಯಲ್ಲಿ ಕುಪ್ಪೆಪದವು ಗ್ರಾಮ ಪಂಚಾಯತ್ ಸದಸ್ಯೆಯಾಗಿ ಆಯ್ಕೆಯಾಗಿದ್ದರು.
ಕುಪ್ಪೆಪದವು ಗ್ರಾಮ ಪಂಚಾಯತ್ ಮುಂಬಾಗ ವಸಂತಿ ನೇತೃತ್ವದಲ್ಲಿ ಬಡ ಕುಟುಂಬಗಳಿಗೆ ನಿವೇಶನ ವಿತರಿಸುವಂತೆ ಸಂಘಟಿಸಿದ ಹೋರಾಟ ದೊಡ್ಡ ಯಶಸ್ಸು ತಂದುಕೊಟ್ಟಿತು. ಕುಪ್ಪೆಪದವು ಗ್ರಾಮದಲ್ಲಿ ಶಾಸಕರು 2018 ರಲ್ಲಿ 97 ಕುಟುಂಬಗಳಿಗೆ ಹಕ್ಕುಪತ್ರ ನೀಡಿದ್ದು, ಆದರೆ ಈವರೆಗೂ ಆ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡದೆ ಆಡಳಿತಾರೂಢರು ವಂಚಿಸುತ್ತಾ ಬಂದಿದ್ದರು. ಈ ಸಮಸ್ಯೆ ವಿರುದ್ಧ ಸೆಟೆದು ನಿಂತ ವಸಂತಿ ನಿವೇಶನ ವಂಚಿತ ಕುಟುಂಬಸ್ಥರನ್ನು ಒಟ್ಟು ಸೇರಿಸಿ ಕುಪ್ಪೆಪದವು ಗ್ರಾಮ ಪಂಚಾಯತ್ ಎದುರು ಬೃಹತ್ ಜನಾಂದೋಲನವನ್ನು ಸಂಘಟಿಸಿದ್ದರು. ಯಾವುದೇ ಪ್ರಭಾವಕ್ಕೂ ಜಗ್ಗದೆ ನಿವೇಶನ ವಂಚಿತರ ಪರವಾಗಿ ಧ್ವನಿ ಮೊಳಗಿಸಿದ್ದರು. ಮೇ 27 ರಿಂದ ಜೂನ್ 9 ರವರೆಗೆ ಕುಪ್ಪೆಪದವು ಗ್ರಾಮ ಪಂಚಾಯತ್ ಎದುರು ಸಾಂಕೇತಿಕ ಟೆಂಟ್ ನಿರ್ಮಿಸಿ ಹಗಲು ರಾತ್ರಿ ಧರಣಿ ನಡೆಸಿದ್ದರು. ಕಳೆದ ಒಂದು ವರ್ಷದ ಅವಧಿಯಲ್ಲಿ ಹಲವು ಸುತ್ತಿನ ಪ್ರತಿಭಟನೆ, ಅನಿರ್ಧಿಷ್ಟಾವಧಿ ಧರಣಿ ನಡೆಸಿದರೂ ಆಡಳಿತಗಾರರು ಸ್ಪಂದಿಸದೇ ಇದ್ದಾಗ ಆಹೋರಾತ್ರಿ ಧರಣಿಗೆ ಮುಂದಾಗಿದ್ದರು. ಮಳೆ, ಬಿಸಿಲು ಲೆಕ್ಕಿಸದೆ ಹೋರಾಟದ ನೇತೃತ್ವ ವಹಿಸಿದ್ದರು. ಇವರ ಹೋರಾಟಕ್ಕೆ ಕುಪ್ಪೆಪದವು ಗ್ರಾಮದ ನಾಗರಿಕರು, ಸಮಾನ ಮನಸ್ಕರು ಒಟ್ಟಾಗಿ ಕೈ ಜೋಡಿಸಿದ್ದರು. ಅಲ್ಲಿಯೇ ಧರಣಿ ನಿರತ ಮಹಿಳೆಯರು ಬೀಡಿ ಕಟ್ಟುವ ಮೂಲಕ ಗಮನ ಸೆಳೆದರು. ಕೊನೆಗೆ ವಸಂತಿ ನೇತೃತ್ವದ ಹೋರಾಟಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಬಗ್ಗಲೇ ಬೇಕಾಯಿತು. ಧರಣಿ ನಿರತ ಸ್ಥಳಕ್ಕೆ ತಹಶೀಲ್ದಾರ್, ಸಹಾಯಕ ಆಯುಕ್ತರು ಭೇಟಿಯಿತ್ತು, ಭರವಸೆ ನೀಡಿ ಧರಣಿ ನಿರತರ ಮನವೊಲಿಸಿದರು. 16 ಮಂದಿಗೆ ನಿವೇಶನ ಹಂಚಿಕೆ ಮಾಡಲು ಅಧಿಕಾರಿಗಳು ಒಪ್ಪಿದರು. ಉಳಿದ 80 ಮಂದಿಗೆ ಸರ್ವೇ ನಡೆಸಿ ನಿವೇಶನ ಒದಗಿಸುವುದಾಗಿ ಭರವಸೆ ನೀಡಿದರು. ಕಾಂಗ್ರೆಸ್ ಪಕ್ಷದ ನಾಯಕ ‘ಕಂ’ ಶಾಸಕ ಸ್ಥಾನದ ಅಭ್ಯರ್ಥಿಯೊಬ್ಬರು ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿ ಹೋರಾಟವನ್ನು ಬೆಂಬಲಿಸಿದರು. ತಮ್ಮ ಕಡೆಯಿಂದ ಆಗುವ ಸರ್ವ ವ್ಯವಸ್ಥೆ ಮಾಡಿ ಉಳಿದ ಕುಟುಂಬಗಳಿಗೆ ಶೀಘ್ರವೇ ನಿವೇಶನ ಹಂಚಿಕೆ ಮಾಡಲು ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ಕೊಟ್ಟಿದ್ದರು. ಅಂದು ಭರವಸೆ ಕೊಟ್ಟಿದ್ದ ಆ ಕಾಂಗ್ರೆಸ್ ನಾಯಕ ಮತ್ತೆ ಅತ್ತ ಕಡೆ ತಲೆ ಹಾಕಲೇ ಇಲ್ಲ. ಮುಂಜಿ, ಮದುವೆ, ಮಠ, ಮಂದಿರ ಸುತ್ತುವ ಕಾರ್ಯಕ್ರಮದಲ್ಲಿ ಮಾತ್ರ ಬ್ಯುಸಿಯಾಗಿರುವ ಆ ನಾಯಕ ಜನರ ಸಂಕಷ್ಟಕ್ಕೆ ಸ್ಪಂದಿಸುವ ಸಣ್ಣ ಕೆಲಸವನ್ನೂ ಮಾಡಿಲ್ಲ ಅನ್ನುವುದು ಅಷ್ಟೇ ಸತ್ಯ.

ವಸಂತಿ ಅವರದ್ದು ಇದೊಂದೇ ಹೋರಾಟವಲ್ಲ. ಇಂತಹ ಹತ್ತಾರು ಹೋರಾಟದ ಮೂಲಕ ಈ ಭಾಗದಲ್ಲಿ ದಿಟ್ಟ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದವರು. ಕೆಲವೊಂದು ರಾಜಕೀಯ ಪಕ್ಷದ ಮಹಿಳಾ ನಾಯಕಿಯರು ಬಣ್ಣ ಬಣ್ಣದ ಸೀರೆ ಸುತ್ತಿ, ಸುಣ್ಣ ಬಣ್ಣ ಬಲಿದು, ದೊಡ್ಡ ದೊಡ್ಡ ನಾಯಕರ ಮುಂದೆ ಸೆಲ್ಪಿ ಗಿಟ್ಟಿಸಿ, ಬಕೆಟ್ ಹಿಡಿದು ನಿಗಮ ಮಂಡಳಿಗಳ ಕನವರಿಕೆಯಲ್ಲಿ ಇದ್ದರೆ, ವಸಂತಿ ಅನ್ನುವ ಕಮ್ಯೂನಿಸ್ಟ್ ಹೆಣ್ಣು ಮಗಳೊಬ್ಬಳು ಮಾತ್ರ ಯಾರ ಪ್ರಭಾವಕ್ಕೂ ಒಳಗಾಗದೇ ತನ್ನ ಮಾಮೂಲು ಡ್ರಸ್ಸಿನೊಂದಿಗೆ ಮನೆಯಿಂದಲೇ ಗಂಜಿ ಡಬ್ಬ ಹಿಡ್ಕೊಂಡು ಬಂದು ಬಡ ಜನರ ಸಂಕಷ್ಟಗಳಿಗೆ ಧ್ವನಿಯಾಗುತ್ತಿದ್ದಾಳೆ. ಇತರ ಪಕ್ಷದ ಮಹಿಳಾ ಮಣಿಗಳಿಗೆ ವಸಂತಿ ಮಾದರಿಯಾಗಬೇಕಾಗಿದೆ. ಇಂತಹವರ ಕೈಗೆ ಅಧಿಕಾರ ಸಿಕ್ಕಿದರೆ ಜನಸಾಮಾನ್ಯರ ಸಂಕಷ್ಟ ಪರಿಹಾರ ಆಗುತ್ತವೆ ಅನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ.
ಅದು ಸರಕಾರಿ ಬಸ್ ಹೋರಾಟವೇ ಆಗಿರಲಿ, ಬೀಡಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ನಿವೇಶನ ವಂಚಿತರ ಹೋರಾಟವೇ ಇರಲಿ ಎಲ್ಲದರಲ್ಲೂ ವಸಂತಿ ಅನ್ನುವ ಮಹಿಳೆಯದ್ದು ಮುಂಚೂಣಿ ನಾಯಕತ್ವ. ಸುರತ್ಕಲ್ ಅಕ್ರಮ ಟೋಲ್ ಗೇಟ್ ಹೋರಾಟದಲ್ಲೂ ಈಕೆಯ ಪಾತ್ರ ಬಹಳಷ್ಟಿದೆ. ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಸಂದರ್ಭ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನೇಕ ಕೆಲಸ ಮಾಡಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಕಿಲೆಂಜಾರು ರಸ್ತೆ ನಿರ್ಮಿಸುವ ಮೂಲಕ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದರು. ಕುಪ್ಪೆಪದವು -ಕಲ್ಲಾಡಿ ಭಾಗದಲ್ಲಿ ಚರಂಡಿ ನಿರ್ಮಿಸುವ ಮೂಲಕ ಹೋರಾಟಕ್ಕೂ ಸೈ, ಅಧಿಕಾರಕ್ಕೂ ಸೈ ಅನ್ನುವುದನ್ನು ಸಾಬೀತು ಪಡಿಸಿದ್ದಾರೆ.

ಮಾಹಿತಿ ಹಕ್ಕಿನ ಮೂಲಕ ದಾಖಲೆ ಪಡೆದು ಸರಕಾರಿ ಜಾಗ ಕಬಳಿಸಿರುವ ಬಲಾಡ್ಯರ ಬಣ್ಣ ಬಯಲು ಮಾಡಿರುವ ದಿಟ್ಟ ಮಹಿಳೆ. ಸರ್ವೇ ನಂಬ್ರ 82 ರಲ್ಲಿ ಸರಕಾರಿ ಜಾಗವನ್ನು ಬಡವರ ನಿವೇಶನಕ್ಕೆ ಹಂಚಿಕೆ ಮಾಡದೆ ಅಧಿಕಾರಿಗಳು, ನಾಯಕರ ಪ್ರಭಾವಕ್ಕೆ ಮಣಿದು ಬಾರ್ ಧಣಿಗಳಿಗೆ, ಕೋರೆ ಮಾಲೀಕರಿಗೆ, ಧೋ ನಂಬರ್ ದಂಧೆಕೋರರಿಗೆ ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಮಂಕು ಮರಳು ಮಾಡಿರುವ ಪ್ರಭಾವಿಗಳ ಮುಖವಾಡವನ್ನು ಕಳಚಿದ್ದರು.
ಸರ್ವೇ ನಂಬ್ರ 80 ರಲ್ಲಿದ್ದ ಸರಕಾರಿ ಭೂಮಿಯನ್ನು ವಂಚಿತ ಬಡವರಿಗೆ ಹಂಚಿಕೆಯಾಗಬೇಕು ಎಂದು ನಾನಾ ರೀತಿಯ ಹೋರಾಟ ಮಾಡುತ್ತಿರುವಾಗಲೇ, ಕೆಲವರ ಲಾಭಿಗೆ ಮಣಿದು, ಭರವಸೆ ನೀಡಿದ ರಾಜ್ಯಮಟ್ಟದ ನಾಯಕರೆನಿಸಿಕೊಂಡವರು ಸಹಾಯಕ ಆಯುಕ್ತರನ್ನು, ತಹಶೀಲ್ದಾರರನ್ನು ಭೇಟಿ ಆಗಿ, ಆ ಜಾಗವನ್ನು ಬಡವರಿಗೆ ನೀಡದಂತೆ ತಡೆ ಒಡ್ಡಿದ್ದರು. ಲಾಭಿ ನಡೆಸಿದರು. ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಪ್ರಭಾವಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ಕೂಡ ತಂದಿದ್ದರು. ಆದರೆ ಉಳ್ಳವರ ಲಾಭಿಗೆ ಮಣಿದ ಭರವಸೆ ನೀಡಿದ ಅ ಮಹಾನ್ ನಾಯಕ ನಿವೇಶನ ವಂಚಿತರಿಗೆ ಕೈ ಕೊಟ್ಟರು. ಇಂತಹವರ ಕೈಗೆ ಅಧಿಕಾರ ಕೊಟ್ಟರೆ ಜನಸಾಮಾನ್ಯರನ್ನು, ಬಡವರನ್ನು ಯಾವ ರೀತಿ ಯಾಮಾರಿಸಬಹುದು ಎಂದು ನೀವೇ ಊಹಿಸಿ.

ಬಹುಶಃ ಗುರುಪುರ ಭಾಗದಲ್ಲಿ ಕಮ್ಯೂನಿಸ್ಟ್ ಕೆಂಬಾವುಟ ಹಿಡಿದು ಜನಸಾಮಾನ್ಯರ ಕಷ್ಟಕ್ಕೆ ದಾಪುಗಾಲಿಡುವ ಇಂತಹವರ ಕೈಗೆ ಅಧಿಕಾರ ಕೊಟ್ಟರೆ ಬಡವರು, ಜನಸಾಮಾನ್ಯರು ನೆಮ್ಮದಿಯಿಂದ ಇರಬಹುದು. ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸದೇ, ಅನ್ಯಾಯವಾದಾಗ ದಿಟ್ಟತನದಿಂದ ಎದುರಿಸಲಾಗದೇ ಪಲಾಯಣ ಮಾಡುವವರಿಗಿಂತ ಯಾವುದೇ ಸಮಸ್ಯೆ ಬಂದರೂ ಜನರ ಪರ ನಿಂತು, ಜೀವದ ಹಂಗು ತೊರೆದು, ಗಟ್ಟಿಯಾಗಿ ಮಾತನಾಡುವ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ವಸಂತಿ ಅಂತಹ ದಿಟ್ಟ ಮಹಿಳೆಯನ್ನು ಜನ ಅರಸಿ ಅಧಿಕಾರ ಕೊಟ್ಟರೆ, ಬಡವರ ಧ್ವನಿಯಾಗಿ, ಧೀನ ದಲಿತರ ಅಶಾಕಿರಣವಾಗಿ ಎಡಪದವು ಜಿಲ್ಲಾ ಪಂಚಾಯತ್ ಕ್ಷೇತ್ರ ಮಾದರಿ ಕ್ಷೇತ್ರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.
