48 ಗಂಟೆಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ಸರಕಾರಿ ನೌಕರ ಕಾನೂನಿನ ಪ್ರಕಾರ ತಾನಾಗಿಯೇ ಅಮಾನತು: ಸುಪ್ರೀಂಕೋರ್ಟ್‌

ರಾಷ್ಟ್ರೀಯ

ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ 48 ಗಂಟೆಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿರುವ ಸರಕಾರಿ ನೌಕರರನ್ನು ಕಾನೂನಿನ ಪ್ರಕಾರ ತಾನಾಗಿಯೇ ಅಮಾನತುಗೊಂಡಿದ್ದಾರೆ ಎಂದೇ ಪರಿಗಣಿಸಲಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇಂತಹ ಪ್ರಕರಣಗಳಲ್ಲಿ ನೌಕರನನ್ನು ಅಮಾನತುಗೊಳಿಸಲು ಸರ್ಕಾರ ಪ್ರತ್ಯೇಕ ಆದೇಶ ಹೊರಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ನ್ಯಾ. ಮನ್‌ಮೋಹನ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶ ನೀಡಿದೆ. ಬಿಹಾರದ ಸಮಸ್ತಿಪುರದ ಸದರ್ ಆಸ್ಪತ್ರೆಯ ಆಡಳಿತಾಧಿಕಾರಿ ವಿಶ್ವಜೀತ್ ಸಿಂಗ್ ಎಂಬಾತನ ಲಂಚ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ಆರೋಪಿಯು ಲಂಚ ಪ್ರಕರಣದಲ್ಲಿ ಸುಮಾರು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರೂ, ಆತನ ಅಮಾನತನ್ನು ರದ್ದುಪಡಿಸಿ ಮತ್ತೆ ಅದೇ ಆಸ್ಪತ್ರೆಯಲ್ಲಿ ಅದೇ ಹುದ್ದೆಗೆ ಮರುನೇಮಕ ಮಾಡಿಕೊಂಡಿದ್ದ ರಾಜ್ಯ ಸರ್ಕಾರದ ಕ್ರಮಕ್ಕೆ ಸುಪ್ರೀಂಕೋರ್ಟ್ ತೀವ್ರ ಆಶ್ಚರ್ಯ ಹಾಗೂ ಕಳವಳ ವ್ಯಕ್ತಪಡಿಸಿತು.

ಸೇವಾ ನಿಯಮಗಳ ಪ್ರಕಾರ, ಯಾವುದೇ ಸಾರ್ವಜನಿಕ ಸೇವಕನು 48 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿದ್ದರೆ ಆತ ಸ್ವಯಂಚಾಲಿತವಾಗಿ ಅಮಾನತಿಗೆ ಒಳಪಡುತ್ತಾನೆ. ಇದಕ್ಕಾಗಿ ಪ್ರತ್ಯೇಕ ಅಧಿಕೃತ ಆದೇಶದ ಅಗತ್ಯವಿಲ್ಲ. ಆರೋಪಿಯನ್ನು ಮತ್ತೆ ಅದೇ ಹುದ್ದೆಗೆ ನೇಮಿಸಿರುವ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಶೀಲಿಸಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಸೂಚಿಸಿದೆ