✍️. ಅರ್ಜುನ್ ಮೂಲೆ
ನಿಮ್ಮ ಅಥವಾ ನಿಮ್ಮವರ ದೇಹದಲ್ಲಿ ಅಳವಡಿಸಿರುವ ಸ್ಟೆಂಟ್ ಅಥವಾ ಪೇಸ್ಮೇಕರ್ ನಿಜಕ್ಕೂ ಸುರಕ್ಷಿತವೇ? ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಕರ್ತೆ ರಿತು ಸರಿನ್ ಅವರು ಸಿಕ್ಕ RTI ದಾಖಲೆಗಳು ಬೆಚ್ಚಿಬೀಳಿಸುವ ಸತ್ಯವೊಂದನ್ನು ಹೊರಹಾಕಿವೆ. ಇಂಡಿಯನ್ ಫಾರ್ಮಾಕೋಪಿಯಾ ಕಮಿಷನ್ನ ‘ಮೆಟೀರಿಯೋವಿಜಿಲೆನ್ಸ್ ಪ್ರೋಗ್ರಾಮ್’ ಅಡಿಯಲ್ಲಿ 2020ರಿಂದ 2025ರವರೆಗೆ ಬರೋಬ್ಬರಿ 9,373 ವೈದ್ಯಕೀಯ ಉಪಕರಣಗಳ ‘ಗಂಭೀರ ಪ್ರತಿಕೂಲ ಘಟನೆಗಳು’ ವರದಿಯಾಗಿವೆ! ಈ ಮಾಹಿತಿಯನ್ನು ಮುಚ್ಚಿಡಲು IPC ಹರಸಾಹಸ ಪಟ್ಟಿತ್ತು.
ಕೇಂದ್ರ ಮಾಹಿತಿ ಆಯೋಗದ ಮಾಹಿತಿ ಆಯುಕ್ತೆ ಜಯಾ ವರ್ಮಾ ಸಿನ್ಹಾ ಅವರು ಈ ಪ್ರಕರಣದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಅಂಕಿಅಂಶಗಳನ್ನು ಸಾರ್ವಜನಿಕರಿಗೆ ನೀಡಲೇಬೇಕು ಎಂದು ಆದೇಶಿಸಿದಾಗ, 2020ರಲ್ಲಿ 808 ಇದ್ದ ಪ್ರಕರಣಗಳು 2025ಕ್ಕೆ 2,176ಕ್ಕೆ ಏರಿರುವುದು ಬೆಳಕಿಗೆ ಬಂದಿದೆ. ಆದರೆ, ಇಲ್ಲಿಯೇ ಒಂದು ದೊಡ್ಡ ಟ್ವಿಸ್ಟ್ ಇದೆ! RTI ಕಾಯ್ದೆಯ ಕಲಂ 8(1)(d) ಅಡಿಯಲ್ಲಿ ‘ವಾಣಿಜ್ಯ ಗೌಪ್ಯತೆ’ಯ ನೆಪವೊಡ್ಡಿ, ಆ ಕಳಪೆ ಉಪಕರಣಗಳ ತಯಾರಕ ಕಂಪನಿಗಳ ಹೆಸರನ್ನು ಬಹಿರಂಗಪಡಿಸದಂತೆ ವಿನಾಯಿತಿ ನೀಡಲಾಗಿದೆ.

ಇದರರ್ಥ, ಸಾವಿರಾರು ಜನರಿಗೆ ತೊಂದರೆಯಾಗುತ್ತಿರುವುದು ಸರ್ಕಾರಕ್ಕೆ ತಿಳಿದಿದ್ದರೂ, ಆ ಅಪರಾಧಿ ಕಂಪನಿಗಳು ಯಾವುವು ಎಂಬುದು ನಮಗೆ ತಿಳಿಯುವುದಿಲ್ಲ. ಇದು ಜನರ ಆರೋಗ್ಯಕ್ಕಿಂತ ಕಾರ್ಪೊರೇಟ್ ಕಂಪನಿಗಳ ವ್ಯಾಪಾರ ರಹಸ್ಯಗಳಿಗೆ ಹೆಚ್ಚಿನ ಮಹತ್ವ ನೀಡುವ ವ್ಯವಸ್ಥೆಯ ಬಣ್ಣ ಬಯಲು ಮಾಡುತ್ತದೆ. ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ನಿಮ್ಮ ವೈದ್ಯರನ್ನು ಆ ಉಪಕರಣದ ಗುಣಮಟ್ಟದ ಬಗ್ಗೆ ಪ್ರಶ್ನಿಸುವುದು ಇಂದಿನ ತುರ್ತು ಅಗತ್ಯ.
ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಇದೊಂದು ಪ್ರಮುಖ ಎಚ್ಚರಿಕೆ ಹಾಗೂ ಪಾಠ. ಸರ್ಕಾರಿ ಇಲಾಖೆಗಳು ‘ವಾಣಿಜ್ಯ ಗೌಪ್ಯತೆ’ ಅಥವಾ ‘ಮಾಹಿತಿ ನೀಡಲು ಕಷ್ಟ’ ಎಂಬ ಕಾರಣ ನೀಡಿ ಇಡೀ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ. ಸಾರ್ವಜನಿಕ ಹಿತಾಸಕ್ತಿಯ ಅಂಕಿಅಂಶಗಳನ್ನು ಪ್ರತ್ಯೇಕಿಸಿ ನೀಡಲೇಬೇಕು ಎಂದು CIC ಸ್ಪಷ್ಟಪಡಿಸಿದೆ. ಆದರೆ, ರೋಗಿಗಳ ಜೀವಕ್ಕಿಂತ ಕಂಪನಿಗಳ ಲಾಭವೇ ಮುಖ್ಯವೇ? ಈ ಕಾನೂನು ಪ್ರಶ್ನೆಗೆ ಉತ್ತರ ಸಿಗುವವರೆಗೆ ಹೋರಾಟ ನಿಲ್ಲಬಾರದು.
