ಖ್ಯಾತ ಪತ್ರಕರ್ತ, ಉತ್ತಮ ಕತೆಗಾರ ಹಾಗೂ ಕವಿ ಮನೋಹರ ಪ್ರಸಾದ್(64) ಇಂದು ಮುಂಜಾನೆ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ತಾಲೂಕಿನವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ ಸಲ್ಲಿಸಿ ಕಳೆದ ಎರಡು ವರ್ಷದ ಹಿಂದೆ ನಿವೃತ್ತಿಗೊಂಡಿದ್ದರು.
ಖ್ಯಾತ ಪತ್ರಕರ್ತ, ರಂಗಭೂಮಿ ಹಾಗೂ ಚಲನಚಿತ್ರ ನಟ, ಕಾರ್ಯಕ್ರಮ ನಿರೂಪಕ ಮನೋಹರ ಪ್ರಸಾದ್ ಸ್ವತಃ ಉತ್ತಮ ಕತೆಗಾರ ಹಾಗೂ ಕವಿ. ‘ಉದಯವಾಣಿ’ ಪತ್ರಿಕೆಯ ಮಂಗಳೂರು ಬ್ಯೂರೋದ ಮುಖ್ಯಸ್ಥರಾಗಿರುವ ಮನೋಹರ ಪ್ರಸಾದ್ ತಮ್ಮ ಸಾಧನೆ ಹಾಗೂ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಸಂದೇಶ ಪ್ರತಿಷ್ಠಾನದ ಪ್ರಶಸ್ತಿ ಪಡೆದಿದ್ದಾರೆ ಕರ್ನಾಟಕ ಕರಾವಳಿ ಇತಿಹಾಸದ ಕುರಿತು 608 ಸಂಶೋಧನ ಲೇಖನಗಳನ್ನು ಬರೆದಿದ್ದರು. ಕೆನರಾ ಬ್ಯಾಂಕ್ ಅಮೃತೋತ್ಸವ ಪುರಸ್ಕಾರದೊಂದಿಗೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.
