ಬಾಲಕಿಯರ ಅತ್ಯಾಚಾರದ ವಿಡಿಯೊ ಮಾಡಿ ಬ್ಲಾಕ್ ಮೈಲ್, ಮನನೊಂದ ಅಪ್ರಾಪ್ತ ಬಾಲಕಿಯರು ಆತ್ಮಹತ್ಯೆಗೆ ಶರಣು

ರಾಷ್ಟ್ರೀಯ

ಉತ್ತರ ಪ್ರದೇಶದ ಕಾನ್ಪುರ ಘಟಂಪುರ್ ಕೊಟ್ವಾಲಿ ಗ್ರಾಮದ ಇಟ್ಟಿಗೆ ಗೂಡು ಬಳಿ ಇಬ್ಬರು ಬಾಲಕಿಯರ ದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ, ಆತನ ಮಗ ಮತ್ತು ಸೋದರಳಿಯ ಸೇರಿ ಸಾಮೂಹಿಕ ಅತ್ಯಾಚಾರ ಎಸಗಿದ ಕೆಲವು ದಿನಗಳ ನಂತರ ಈ ಬಾಲಕಿಯರ ಮೃತದೇಹ ಪತ್ತೆಯಾಗಿದೆ. ಇಟ್ಟಿಗೆ ಗೂಡುಗಳ ಗುತ್ತಿಗೆದಾರ ರಾಮ್ ರೂಪ್ ನಿಷಾದ್,ಆತನ ಮಗ ರಾಜು ಮತ್ತು ಸೋದರಳಿಯ ಸಂಜಯ್ ಕೆಲವು ದಿನಗಳ ಹಿಂದೆ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದರು ಎಂದು ಬಾಲಕಿಯರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಾಲಕಿಯರಿಗೆ ಬ್ಲ್ಯಾಕ್‌ಮೇಲ್‌ ಮಾಡಲು ಆರೋಪಿಗಳು ಅತ್ಯಾಚಾರದ ವಿಡಿಯೊ ಮಾಡಿದ್ದರು. ಇದರಿಂದ ಮನನೊಂದ 14 ಮತ್ತು 16 ವರ್ಷದ ಬಾಲಕಿಯರು ಫೆಬ್ರವರಿ 28 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬಾಲಕಿಯರಿಗೆ ಬಲವಂತದಿಂದ ಮದ್ಯಪಾನ ಮಾಡಿಸಿ ಕೃತ್ಯ ಎಸಗಲಾಗಿದೆ ಎಂದು ಅವರು ಅರೋಪಿಸಿದ್ದಾರೆ. ಬುಧವಾರ ಬಾಲಕಿಯರು ನಾಪತ್ತೆಯಾಗಿದ್ದರು. ಗಾಬರಿಗೊಂಡ ಮನೆಯವರು ಹುಡುಕಾಟ ನಡೆಸಿದಾಗ ಸಂಜೆಯ ವೇಳೆಗೆ ಅವರ ಮೃತದೇಹ ಇಟ್ಟಿಗೆ ಗೂಡಿನಿಂದ ಸುಮಾರು 400 ಮೀಟರ್‌ ದೂರದ ಮರವೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು .

ಆರೋಪಿಗಳ ಮೊಬೈಲ್ ಫೋನ್‌ಗಳಿಂದ ಹುಡುಗಿಯರ ವಿಡಿಯೊಗಳು ಮತ್ತು ಫೋಟೊಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯಂತೆ ಸಾಮೂಹಿಕ ಅತ್ಯಾಚಾರ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಮತ್ತು ಸಾಮೂಹಿಕ ಅತ್ಯಾಚಾರ ಆರೋಪಗಳನ್ನು ಪರಿಶೀಲಿಸಲು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಾಧಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮೃತರು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಇಬ್ಬರು ಕಾರ್ಮಿಕರ ಮಕ್ಕಳಾಗಿದ್ದು, ಇಟ್ಟಿಗೆ ಗೂಡು ಇರುವ ಸ್ಥಳದಲ್ಲಿ ತಮ್ಮ ಕುಟುಂಬಗಳೊಂದಿಗೆ ವಾಸಿಸುತ್ತಿದ್ದರು.